Advertisement
ಹೊಲದಾಗ ಭರಪೂರ ಬೆಳೆ ಇದೆ. ಇದರಿಂದ ಒಳ್ಳೆಯ ಹಣ ಮಾಡಬಹುದು. ನೆಮ್ಮದಿಯಿಂದ ಇರಬಹುದು ಎಂದು ಧೈರ್ಯದಿಂದ ಹೇಳುವಂತಿಲ್ಲ. ಟೊಮ್ಯಾಟೋ ಹಣ್ಣಾಗಿ ಕಣ್ಣಿಗೆ ಕುಕ್ಕಿತು. ಮೆಣಸಿನಕಾಯಿ ಖಾರವಾಗಿ ಕಣ್ಣಲ್ಲಿ ನೀರು ತರಿಸಿತು.ಒಂದಲ್ಲಾ ಹತ್ತಾರು ತರಕಾರಿಗಳು ತುಂಬಿಕೊಂಡಿದೆ. ಆದರೆ ಯಾವುದೂ ನಮ್ಮ ಲೆಕ್ಕಕ್ಕೆ ತಕ್ಕಂತೆ ಮಾರಾಟ ಆಗುತ್ತಿಲ್ಲ. ಇನ್ನು ಒಳ್ಳೆಯ ಬೆಲೆ ಸಿಗುವ ಮಾತು ದೂರವೇ ಉಳಿಯಿತು.
ಹೊಲದಲ್ಲಿ ಹಾಕಿದ ಕಬ್ಬು ನೀರಿನಲ್ಲಿ ಹೋಯಿತು. ಹೇಗೋ ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಕೊರೊನಾ ಕಾಟ ಆರಂಭವಾಯಿತು. ಕೊರೊನಾ ಲಾಕ್ ಡೌನ್ ಪರಿಣಾಮ ಬೆಳೆಯೆಲ್ಲ ಮಾರಾಟವಾಗದೆ ಹೊಲದಲ್ಲೇ ಕೊಳೆಯಿತು. ನಷ್ಟದ ಮೇಲೆ ನಷ್ಟ ಆಗುತ್ತಿದೆ. ಆರ್ಥಿಕ ಹೊರೆಯ ನಡುವೆ ಈಗ ಮುಂಗಾರು ಹಂಗಾಮು ಬಂದಿದೆ. ಬಿತ್ತನೆ ಮಾಡಬೇಕೋ ಬೇಡವೊ ಎಂಬ ಚಿಂತೆ ಆಗಿದೆ ಎನ್ನುತ್ತಾರೆ ಬೈಲಹೊಂಗಲ ತಾಲೂಕಿನ ಬಸವರಾಜ ಹಿರೇಮಠ. ಇದನ್ನೂ ಓದಿ : ಮತ್ತೊಮ್ಮೆ ರೈತರ ಬದುಕನ್ನು ಕಸಿದುಕೊಂಡ ಕೋವಿಡ್ : ತೋಟದಲ್ಲೇ ಕೊಳೆಯುತ್ತಿದೆ ತರಕಾರಿ ಬೆಳೆ
Related Articles
ಹೋಗುತ್ತಿದ್ದ ತರಕಾರಿ ಬೆಳೆಗಳು ಲಾಕ್‌ಡೌನ್ ಪರಿಣಾಮ ಖರೀದಿದಾರರಿಲ್ಲದೆ ಇದ್ದಲ್ಲೇ ಕೊಳೆತಿವೆ.
Advertisement
ಇನ್ನು ಅತೀ ಕಡಿಮೆ ಬೆಲೆ ಇದೆ ಎಂಬ ಕಾರಣಕ್ಕೆ ರೈತರೇ ಬೇಸರದಿಂದ ತಾವೇ ಬೆಳೆ ನಾಶ ಮಾಡಿದ್ದಾರೆ. ಇನ್ನೊಂದು ಕಡೆ ಸತತ ಆರ್ಥಿಕ ಸಂಕಷ್ಟ ಹಾಗೂ ಬೆಳೆ ಹಾನಿಯಿಂದ ಅಪಾರ ನಷ್ಟ ಅನುಭವಿಸುತ್ತಿರುವ ರೈತ ಸಮುದಾಯ ಈಗ ದೊಡ್ಡ ಹಾಗೂ ಉದಾರ ದಾನಿಗಳಾಗಿ ಕಾಣುತ್ತಿದ್ದಾರೆ. ಕೊರೊನಾದ ಕಷ್ಟ ಕಾಲದಲ್ಲಿ ತಾವು ಬೆಳೆದ ಕಲ್ಲಂಗಡಿ, ಟೊಮ್ಯಾಟೊ, ಪಪಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ತಮ್ಮದೇ ವಾಹನದಲ್ಲಿ ತುಂಬಿಕೊಂಡು ಜನರಿಗೆ ಉಚಿತವಾಗಿ ಹಂಚಿ ಮಾನವೀಯತೆ ಮೆರೆಯುತ್ತಿದ್ದಾರೆ.
ಬೆಲೆಯಲ್ಲಿ ಅಜಗಜಾಂತರ: ಕಷ್ಟದ ಸಮಯದಲ್ಲಿರುವ ತಮ್ಮ ನೆರವಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಹಾಪ್‌ಕಾಮ್ಸ್‌ಗಳು ಬರುತ್ತಿಲ್ಲ ಎಂಬ ನೋವು ರೈತರಲ್ಲಿದೆ. ತರಕಾರಿಗಳಿಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಬೆಲೆಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೆಲೆಗೂ ಅಜಗಜಾಂತರ ವ್ಯತ್ಯಾಸ ಇದೆ. ಸಗಟು ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಪ್ರತಿ ಕೆಜಿ ಗೆ ಕೇವಲ 2 ರೂ ಸಿಗುತ್ತಿದ್ದರೆ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆ ಜಿ 30 ರೂ ದಂತೆ ಮಾರಾಟವಾಗುತ್ತಿದೆ. ಅದೇ ರೀತಿ ಮೆಣಸಿನಕಾಯಿಗೆ ಎಪಿಎಂಸಿ ಯಲ್ಲಿ ಎಜೆಂಟರು ಪ್ರತಿ ಕೆ ಜಿ ಗೆ 5 ರಿಂದ 10 ರೂ ನೀಡುತ್ತಿದ್ದರೆ ಅದೇ ಮೆಣಸಿನಕಾಯಿ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ ಜಿ ಗೆ 60 ರೂ. ಇದೆ. ಇದರಿಂದ ರೈತರು ಹಾಗೂ ಗ್ರಾಹಕರಿಬ್ಬರೂ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದು ರೈತ ಸಂಘದ ಮುಖಂಡ ರಾಘವೇಂದ್ರ ನಾಯಕ ಆರೋಪ.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಲಾಕ್‌ಡೌನ್ ಜಾರಿಯಾದಾಗಿನಿಂದ ನಮ್ಮ ಬೆಳೆಗಳನ್ನು ಕೇಳುವವರೇ ಇಲ್ಲ. ಲಾಕ್‌ಡೌನ್‌ಗೆ ಮೊದಲು ಪ್ರತಿ ಹತ್ತು ಕೆ ಜಿ ಮೆಣಸಿನಕಾಯಿಗೆ 500 ರೂ. ಸಿಗುತ್ತಿತ್ತು. ಈಗ ಅದೇ 10 ಕೆ ಜಿ ಗೆ 50 ರಿಂದ 60 ರೂ ಮಾತ್ರ ಕೊಡುತ್ತಿದ್ದಾರೆ. ದಲ್ಲಾಳಿಗಳು ತಮ್ಮ ಮನಸ್ಸಿಗೆ ಬಂದಂತೆ ದರ ನಿಗದಿ ಮಾಡುತ್ತಿದ್ದಾರೆ. ಹೀಗಾಗಿ ಲಾಭದ ಆಸೆ ಬಿಟ್ಟು ಮತ್ತಷ್ಟು ನಷ್ಟ ಆಗುವದು ಬೇಡ ಎಂದು ಹೊಲದಲ್ಲೇ ಕೊಳೆಯಲು ಬಿಟ್ಟಿದ್ದೇವೆ ಎಂಬುದು ರೈತರ ನೋವಿನ ಮಾತು.
– ಕೇಶವ ಆದಿ