Advertisement
ಪುತ್ತೂರು ತಾಲೂಕು ಮಟ್ಟದಲ್ಲಿ ಒಂದು ಸುಸಜ್ಜಿತ ಗೋಶಾಲೆ ನಿರ್ಮಾಣ ಮಾಡುವ ಸಂಬಂಧ ಈಗಾಗಲೇ ಪಶು ಸಂಗೋಪನ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಇದಕ್ಕಾಗಿ ಮುಂಡೂರು ಸಮೀಪದ 8.5 ಎಕ್ರೆ ಜಾಗ ಗುರುತಿಸಲಾಗಿದೆ. ಇದು ಗೋಮಾಳ ಜಾಗವಾಗಿದ್ದು, ಗೋಶಾಲೆ ನಿರ್ಮಿಸಲು ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ಈ ಜಾಗವನ್ನು ಆಯ್ಕೆ ಮಾಡಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
Related Articles
Advertisement
ಪುತ್ತೂರು ದೇಗುಲದಿಂದ ಗೋಶಾಲೆ ಯೋಜನೆ
ಪಶುಸಂಗೋಪನ ಇಲಾಖೆಯ ಯೋಜನೆ ಜಾರಿಯಲ್ಲಿರುವಾಗಲೇ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದ ವತಿಯಿಂದ ಒಂದು ಸ್ವತಂತ್ರ ಗೋಶಾಲೆ ನಡೆಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಕುರಿಯ ಗ್ರಾಮದಲ್ಲಿ 19 ಎಕ್ರೆ ಜಮೀನು ಗುರುತಿಸಲಾಗಿದೆ. ಜಾಗ ಪರಿಶೀಲನೆ ಮಾಡಿದ ಬಳಿಕ ಪ್ರಸ್ತಾವನೆಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಗಿದ್ದು, ಅಲ್ಲಿಂದ ಎ.ಸಿ. ಕಚೇರಿಗೆ, ಅನಂತರ ಜಿಲ್ಲಾಧಿಕಾರಿ ಕಚೇರಿಗೆ ಕಡತ ತಲುಪಿದೆ. ಇದೀಗ ಜಿಲ್ಲಾಧಿಕಾರಿ ಕಚೇರಿಯಿಂದ ಮತ್ತೆ ಕಡತ ತಾಲೂಕು ತಹಶೀಲ್ದಾರ್ ಕಚೇರಿಗೆ ಬಂದಿದೆ. ಈ ಜಾಗದ ವಿಚಾರದಲ್ಲಿ ಒಂದಷ್ಟು ತಾಂತ್ರಿಕ ಗೊಂದಲ ಇರುವ ಕಾರಣ ಮರು ಪರಿಶೀಲನೆಗೆ ಸೂಚಿಸಲಾಗಿದೆ. ಸರಕಾರದಿಂದ ಜಾಗ ಮಂಜೂರಾದರೆ ದೇಗುಲದ ವತಿಯಿಂದ ಸ್ವತಂತ್ರವಾಗಿ ಗೋಶಾಲೆ ನಿರ್ವಹಣೆ ಮಾಡುವ ಇರಾದೆಯಿದೆ.
ಒಂದೇ ಗೋಶಾಲೆ ಸಚಿವರ ಸೂಚನೆ
ಒಂದೇ ತಾಲೂಕಿನಲ್ಲಿ ಎರಡೆರಡು ಗೋಶಾಲೆ ನಿರ್ಮಿಸುವ ಅಗತ್ಯವಿಲ್ಲ. ಎರಡೂ ಪ್ರಸ್ತಾವನೆಗಳನ್ನು ಸೇರಿಸಿ ಒಂದು ಕಡೆ ಕೇಂದ್ರೀಕರಿಸಿ ಗೋಶಾಲೆ ನಿರ್ಮಿಸುವುದು ಉತ್ತಮ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹಿಂದಿನ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಷ್ಟು ಬೇಕಾದರೂ ಗೋಶಾಲೆ ನಿರ್ಮಾಣ ಮಾಡಬಹುದು. ಆದರೆ ಅದರ ನಿರ್ವಹಣೆ ಅಷ್ಟು ಸುಲಭವಲ್ಲ. ವರ್ಷಪೂರ್ತಿ ಜಾನುವಾರುಗಳ ಸಾಕಣಿಕೆ, ಉಪಚಾರ, ನಿರ್ವಹಣೆ ಮಾಡಬೇಕು. ಇದು ಕಷ್ಟದ ಕೆಲಸ. ಹೀಗಾಗಿ ಎರಡು ಪ್ರಸ್ತಾವನೆಗಳನ್ನು ವಿಲೀನ ಮಾಡುವುದು ಉತ್ತಮ. ಪಶು ಸಂಗೋಪನಾ ಇಲಾಖೆಯಿಂದ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಯೋಜನೆಯ ಜಾರಿಯಲ್ಲಿ ದೇವಸ್ಥಾನವೂ ಸೇರಿದಂತೆ ನಾನಾ ಸಂಘಟನೆಗಳನ್ನು ಸೇರಿಸಿಕೊಂಡು ಅತ್ಯುತ್ತಮ ಗೋಶಾಲೆ ನಿರ್ಮಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸರ್ವೇ ಕಾರ್ಯ
ಮುಂಡೂರು ಗ್ರಾಮದ ಗೋಮಾಳ ಪ್ರದೇಶವನ್ನು ಸರ್ವೇ ಮಾಡಿ ನಕ್ಷೆ ತಯಾರಿಸಲು ಸರ್ವೇ ಇಲಾಖೆಗೆ ತಿಳಿಸಲಾಗಿದೆ. ಕುರಿಯ ಗ್ರಾಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಗೋಮಾಳಕ್ಕೆ ಸಂಬಂಧಿಸಿ ಈಗಾಗಲೇ ಕಡತ ಡಿಸಿ ಕಚೇರಿಯಿಂದ ಬಂದಿದೆ. ಪರಿಶೀಲನೆಗೆ ಕಂದಾಯ ನಿರೀಕ್ಷಕರಿಗೆ ಸೂಚಿಸಲಾಗಿದೆ. -ರಮೇಶ್ ಬಾಬು, ತಹಶೀಲ್ದಾರ್, ಪುತ್ತೂರು
734 ಎಕ್ರೆ ಗೋಮಾಳ
ಕಂದಾಯ ಇಲಾಖೆ ನೀಡಿದ ಪಟ್ಟಿಯ ಪ್ರಕಾರ ಪುತ್ತೂರು ತಾಲೂಕಿನಲ್ಲಿ 734 ಎಕ್ರೆ ಗೋಮಾಳ ಪ್ರದೇಶವಿದೆ. ಸೂಕ್ತ ಜಾಗವನ್ನು ಆರಿಸಿ ಗೋಶಾಲೆಗೆ ಶಿಫಾರಸು ಮಾಡುವ ಉದ್ದೇಶ ಇಟ್ಟುಕೊಂಡು ಮುಂಡೂರು ಗ್ರಾಮದ ಜಮೀನನ್ನು ಆರಿಸಲಾಗಿದೆ. -ಡಾ| ಪ್ರಸನ್ನ ಕುಮಾರ್ ಹೆಬ್ಬಾರ್, ಮುಖ್ಯ ಪಶುವೈದ್ಯಾಧಿಕಾರಿ, ಪುತ್ತೂರು