Advertisement

ಗಡಿನಾಡಲ್ಲಿ ರಂಗೇರಿದ ಹಳ್ಳಿ ಫೈಟ್‌

05:04 PM Dec 21, 2020 | Suhan S |

ಬೀದರ: ಗಡಿ ನಾಡು ಬೀದರನಲ್ಲಿ ಮೊದಲ ಹಂತದ ಗ್ರಾಪಂ ಚುನಾವಣೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ “ಹಳ್ಳಿ ಫೈಟ್‌’ ಮತ್ತಷ್ಟು ರಂಗೇರಿದೆ. ಮತದಾರ ಪ್ರಭುಗಳನ್ನು ಸೆಳೆಯಲು ರಣತಂತ್ರ ರೂಪಿಸಿರುವ ಅಭ್ಯರ್ಥಿಗಳು ತೆರೆ ಮೆರೆಯಲ್ಲಿ ಕಸರತ್ತುಗಳನ್ನು ನಡೆಸುತ್ತಿದ್ದು, ತೀವ್ರ ಚಳಿ ನಡುವೆಯೂ ಗ್ರಾಮಗಳಲ್ಲಿ ಅಖಾಡದ ಕಾವು ಜೋರಾಗಿದೆ.

Advertisement

ಗಡಿ ಜಿಲ್ಲೆ ಬೀದರನಲ್ಲಿ 178 ಗ್ರಾಪಂಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಗ್ರಾಪಂ ಪಕ್ಷ ರಹಿತ ಚುನಾವಣೆ ಆಗಿದ್ದರೂ ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ದೃಷ್ಟಿಯಿಂದ ಹೆಚ್ಚು  ಮಹತ್ವ ಪಡೆದಿದ್ದು, ರಾಜಕೀಯ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿಸಿಕೊಂಡಿದ್ದಾರೆ. ಹೀಗಾಗಿ ಜಿಲ್ಲೆಯ ಚುನಾಯಿತ ಪ್ರತಿನಿ ಧಿಗಳು ತಮ್ಮ ಪಕ್ಷಗಳ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಡಿ.22ರಂದು ಬಸವಕಲ್ಯಾಣ, ಹುಲಸೂರ, ಭಾಲ್ಕಿ, ಹುಮನಾಬಾದ ಮತ್ತು ಚಿಟಗುಪ್ಪಾ ತಾಲೂಕುಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಕದನಕ್ಕೆ ಇನ್ನೂ ಎರಡು ದಿನ ಮಾತ್ರ ಬಾಕಿ ಉಳಿದಿದ್ದು, ಮಿನಿ ಸಮರದ ಕಣವಾಗಿ ಮಾರ್ಪಟ್ಟಿದೆ. ಹೇಗಾದರೂ ಸರಿ ಈ ಬಾರಿ ಪಂಚಾಯತ ಗದ್ದುಗೆ ಏರಲೇಬೇಕೆಂಬ ಆಸೆ ಹೊತ್ತಿರುವ ಕದನ ಕಲಿಗಳು ಕೋವಿಡ್‌-19 ಆತಂಕವನ್ನೇ ಬದಗಿಟ್ಟು ತಮ್ಮ ಚಿಹ್ನೆ ಗುರುತುಗಳೊಂದಿಗೆ ಬಿರುಸಿನ ಪ್ರಚಾರಕ್ಕೆ ಇಳಿದಿದ್ದಾರೆ. ಬಹುತೇಕರು ಫೆಸ್‌ಬುಕ್‌, ವಾಟ್ಸ್‌ ಆ್ಯಪ್‌ ಮೂಲಕ ಡಿಜಿಟಲ್‌ ಪ್ರಚಾರದ ಮೊರೆ ಹೋಗಿದ್ದಾರೆ.

ಇನ್ನೂ ಅಧಿಕಾರ ವಿಕೇಂದ್ರೀಕರಣದಿಂದಾಗಿ ಪಂಚಾಯತಗಳಿಗೆ ಅನುದಾನ ಹರಿದು ಬರುತ್ತಿರುವ ಕಾರಣ ಗ್ರಾಪಂ ಚುನಾವಣೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಜತೆಗೆ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ  5 ವರ್ಷಕ್ಕೆ ನಿಗದಿಪಡಿಸಿರುವುದು, ಸ್ಥಳೀಯವಾಗಿ ಜನರ ಕೆಲಸ ಮಾಡಿಕೊಟ್ಟು ರಾಜಕೀಯಕ್ಷೇತ್ರದಲ್ಲಿ ಬೆಳೆಯಬಹುದೆಂಬ ಆಸೆ ಸಣ್ಣಪುಟ್ಟ ನಾಯಕರಲ್ಲಿ ಬೆಳೆಯುತ್ತಿರುವುದರಿಂದ ಯುವ ಸಮೂಹ ಸ್ಪರ್ಧೆಗಿಳಿದಿದ್ದು, ಜಿದ್ದಾ ಜಿದ್ದಿನ ಪೈಪೋಟಿಗೆ ವೇದಿಕೆ ಸಿದ್ಧವಾಗುತ್ತಿದೆ. ಪ್ರತಿ ಗ್ರಾಮ, ಓಣಿಗಳಲ್ಲಿ ಚುನಾವಣೆಯದ್ದೇ ಸದ್ದು. ಪಂಚಾಯತಿ ಕಟ್ಟೆ, ಹೊಟೇಲ್‌ಗ‌ಳು,ಸಭೆ- ಸಮಾರಂಭಗಳಲ್ಲಿ ಕದನದ ಚರ್ಚೆ ನಡೆಯುತ್ತಿದೆ.

78 ಗ್ರಾಪಂ, 3151 ಸದಸ್ಯ ಸ್ಥಾನ :  ಗಡಿ ಜಿಲ್ಲೆ ಬೀದರನಲ್ಲಿ ಒಟ್ಟು 185 ಗ್ರಾಪಂಗಳ ಪೈಕಿ 7 ಪಂಚಾಯತಿ ಅವಧಿ ಇನ್ನೂ ಮುಗಿದಿಲ್ಲ. ಹೀಗಾಗಿ 178 ಗ್ರಾಪಂಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 1047 ಕ್ಷೇತ್ರಗಳ 3151 ಸದಸ್ಯ ಸ್ಥಾನಕ್ಕೆ ಚುನಾವಣೆ ಜರುಗಲಿದ್ದು, 9,99,001 ಜನರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಬೀದರ ರಾಜ್ಯದಲ್ಲೇ ಇವಿಎಂ ಬಳಸುತ್ತಿರುವ ಏಕೈಕೆ ಜಿಲ್ಲೆ ಆಗಿದೆ.

Advertisement

ಹಣ- ಹೆಂಡದ ಸುರಿಮಳೆ :  ಇನ್ನೂ ಪಂಚಾಯತ ಕದನಕ್ಕೆ ಖರ್ಚು-ವೆಚ್ಚಕ್ಕೆ ಮಿತಿ ಇಲ್ಲವಾದ್ದರಿಂದ ಅಭ್ಯರ್ಥಿಗಳು ತೆರೆ ಮರೆಯಲ್ಲಿ ಹಣ- ಹೆಂಡದ ಹೊಳೆ ಹರಿಸುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧದ ನಡುವೆಯೂ ಅಭ್ಯರ್ಥಿಗಳು ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿರುವ ಮದ್ಯವನ್ನು ಮಿತಿ ಮೀರಿ ಹಂಚುತ್ತಿದ್ದಾರೆ. ಅಭ್ಯರ್ಥಿಗಳ ಪರ ಕೆಲಸ ಮಾಡುತ್ತಿರುವ ಬೆಂಬಲಿಗರಿಗಾಗಿ ಹಳ್ಳಿಗಳ ಹೊರ ವಲಯದ ದಾಬಾಗಳು ನಿತ್ಯ ಬುಕ್‌ ಆಗಿರುತ್ತಿದ್ದು, ಗುಂಡು- ತುಂಡಿನ ವ್ಯವಸ್ಥೆ ಎಗ್ಗಿಲ್ಲದೇ ಸಾಗಿದೆ. ವಿಶೇಷವಾಗಿ ಎಂದಿಗೂ ಹುಟ್ಟು ಹಬ್ಬಗಳನ್ನು ಆಚರಿಸಿಕೊಳ್ಳದವರು ಸಹ ಇದೇ ನೆಪದಲ್ಲಿ ಭರ್ಜರಿ ಬಾಡೂಟ ಮಾಡಿಸುವುದು, ಸಾರ್ವಜನಿಕ ಕಾರ್ಯಕ್ಕೆ ಹಣ ಖರ್ಚು ಮಾಡಿ ಓಲೈಸಿಕೊಳ್ಳುತ್ತಿದ್ದಾರೆ.

 

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next