Advertisement

ಹಳ್ಳಿಗಳಲ್ಲಿ ಏರುತ್ತಿದೆ ಚುನಾವಣೆ ಕಾವು

08:27 PM Dec 20, 2020 | Suhan S |

ಮಧುಗಿರಿ: ದೇಶದಲ್ಲಿ ಗ್ರಾಪಂ ಚುನಾವಣೆ ಬಡವರ ಚುನಾವಣೆಯಾಗಿ ಉಳಿದಿತ್ತು. ಆದರೆ ಈಗ ಆ ಚುನಾವಣೆ ಕೂಡ ಶ್ರೀಮಂತರ ಚುನಾವಣೆಯಾಗಿ ಮಾರ್ಪಟ್ಟಿದ್ದು, ಲಕ್ಷಗಟ್ಟಲೆ ಖರ್ಚು ಮಾಡಲು ಅಭ್ಯರ್ಥಿಗಳು ತುದಿಗಾಗಲ್ಲಿ ನಿಂತಿದ್ದು, ತಾಲೂಕಿನಲ್ಲಿ ಚುನಾವಣಾ ಕಣ ರಂಗೇರಿದೆ. ಹಾಲಿ- ಮಾಜಿ ಶಾಸಕರ ತೆರೆಮರೆಯ ತಂತ್ರದಲ್ಲಿ ಬಿಜೆಪಿ ಕೂಡ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿದೆ.

Advertisement

ತಾಲೂಕಿನಲ್ಲಿ 39 ಪಂಚಾಯ್ತಿಗಳಿದ್ದು, ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ,ಹಿಂದುಳಿದ ಬಿ ವರ್ಗ ಹಾಗೂ ಸಾಮಾನ್ಯ ವರ್ಗ ಸೇರಿದಂತೆ ಒಟ್ಟು 615 ಕ್ಷೇತ್ರಗಳಿವೆ. ಈಗಾಗಲೇ ಸರಿ ಸುಮಾರು ಎಲ್ಲ ಕ್ಷೇತ್ರಗಳಿಗಳಿಂದ 2400ಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದ್ದು, ಹಲವು ಕ್ಷೇತ್ರಗಳಲ್ಲಿ ಏಕನಾಮಪತ್ರ ಸಲ್ಲಿಕೆಯಿಂದ ಅವಿರೋಧ ಆಯ್ಕೆ ನಡೆದಿದೆ. ಕಳೆದ ಬಾರಿಯೂ ಕಾಂಗ್ರೆಸ್‌ ಬೆಂಬಲಿತರ ಸಂಖ್ಯೆ ಹೆಚ್ಚಾಗಿದ್ದು, ಈ ಬಾರಿಯೂ ಅದೇ ಫ‌ಲಿತಾಂಶ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.

ಜೆಡಿಎಸ್‌ ಕೂಡ ಈ ತಂತ್ರಗಾರಿಕೆಯಲ್ಲಿ ಹಿಂದೆ ಬೀಳದೆ ಹೆಚ್ಚು ಸ್ಥಾನಗಳನ್ನು ಪಡೆಯಲು ಶಾಸಕರು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ. ಆದರೆಎರಡೂ ಪಕ್ಷದಲ್ಲಿ ಅಸಮಾಧಾನ ಹೆಚ್ಚಾಗಿದ್ದು,ಮಾಜಿ ಶಾಸಕರು ಮಾತ್ರ ಈ ಅಸಮಾಧಾನ ತಣಿಸುವ ಕಾರ್ಯಕ್ಕೆ ಮುಂದಾಗದೆ ಕಾರ್ಯಕರ್ತರ ಅಸಮಾಧಾನ ತಮ್ಮ ಮೇಲೆ ಬಾರದಂತೆ ಎಚ್ಚರ ವಹಿಸಿದ್ದಾರೆ. ಆದರೆ ಹಾಲಿ ಶಾಸಕರು ಮಾತ್ರ ಗ್ರಾಪಂ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸುತ್ತಿದ್ದು, ಆತ್ಮವಿಶ್ವಾಸದಿಂದ ಪಕ್ಷದ ಅಭ್ಯರ್ಥಿಗಳಿಗೆಚುನಾವಣೆ ಎದುರಿಸಲು ಸಭೆಯಲ್ಲಿ ಶಕ್ತಿ ತುಂಬುತ್ತಿದ್ದಾರೆ.

ಬಿಜೆಪಿಗೆ ಖಾತೆ ತೆರೆಯುವ ತವಕ: ತಾಲೂಕಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಲು ಆಯ್ದ ಕ್ಷೇತ್ರಗಳಿದ್ದು, ಅಲ್ಲಿ ಗೆಲುವು ಸಾಧಿಸಲು ತಾಲೂಕು ಅಧ್ಯಕ್ಷರು ಶ್ರಮವಹಿಸುತ್ತಿದ್ದು, ಪುರವರ ಹೋಬಳಿಯ ಹಲವು ಕಡೆ ಹಾಗೂ ಕಸಬಾ ಹೋಬಳಿಯ ಬಿಜವರ ಗ್ರಾಪಂನಲ್ಲಿ ಹೊಸ ಸಾಹಸಕ್ಕೆ ಮುಂದಾಗಿದೆ.

ಮತಬೇಟೆಗೆ ಅಭ್ಯರ್ಥಿಗಳ ಆಮಿಷ: ಈಗಾಗಲೇ ಗ್ರಾಮಗಳಲ್ಲಿ ಪ್ರತಿದಿನ ಹಬ್ಬದ ವಾತಾವರಣವಿದ್ದು, ರಾತ್ರಿಯಾದರೆ ಮೋಜು ಮಸ್ತಿಯ ಪಾರ್ಟಿಗಳು ನಡೆಯುತ್ತಿವೆ. ಮತದಾನದ ಹಿಂದಿನ ದಿನದಲ್ಲಿ ಮಾಡಬಹುದಾದ ಆಮಿಷಗಳಿಗೆ ಈಗಾಗಲೇ ಬೆಳ್ಳಿಯ ನಾಣ್ಯ, ಸೀರೆ, ಮೂಗುತಿ ಸೇರಿದಂತೆ ಕುಕ್ಕರ್‌ ಹಾಗೂ ಇತರೆ ವಸ್ತುಗಳನ್ನು ಖರೀದಿಸುವತ್ತ ಅಭ್ಯರ್ಥಿಗಳು ಮುಂದಾಗಿದ್ದು, ಕುರುಡು ಕಾಂಚಾಣವು ಕತ್ತಲಲ್ಲಿ ಸದ್ದು ಮಾಡಲು ತಯಾರಾಗಿದೆ. ಮತದಾರರಿಗೆ ಜಾಗೃತಿ ಮೂಡಿಸುವ ಬಗ್ಗೆ ಆಯೋಗ ಮಾಡಿದ ಮನವಿಯನ್ನು ಜನತೆ ಗಂಭೀರವಾಗಿ ಪರಿಗಣಿಸಿಲ್ಲದಂತೆ ಕಂಡು ಬರುತ್ತಿದೆ. ಕೊರೊನಾ ಸಮಯದಲ್ಲಿ ವಲಸಿಗರಿಗೆ ಗ್ರಾಮಕ್ಕೆ ನಿಷಿದ್ಧ ಹೇರಿದ್ದ ವರೂ ಈಗ ರೆಡ್‌ ಕಾರ್ಪೆಟ್‌ ಹಾಸಿ ಬನ್ನಿ, ನಮಗೆ ಮತ ಹಾಕಿ ಎಂದು ಬೇಡುತ್ತಿರುವ ಕಾಲ ಬಂದಿದೆ.

Advertisement

ಗ್ರಾಪಂ ಚುನಾವಣೆಯಲ್ಲಿ ಈ ಬಾರಿ ಪದವೀಧರರು ಸ್ಪರ್ಧೆ ಮಾಡಿರುವುದು ಸ್ವಾಗತಾರ್ಹ.ಈ ಸಂಪ್ರದಾಯು ಮುಂದೆ ಹೆಚ್ಚಾಗಬೇಕಿದ್ದು, ಗ್ರಾಪಂನಲ್ಲಿ ನಡೆಯುವ ಯಾವುದೇ ಅವ್ಯವಹಾರಕ್ಕೆ ಬ್ರೇಕ್‌ ಹಾಕಬಹುದು. ಡಾ.ವಿಶ್ವನಾಥ್‌, ಚುನಾವಣಾಧಿಕಾರಿ, ಮಧುಗಿರಿ

 

ಮಧುಗಿರಿ ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next