Advertisement

ಇಂದು ಬಿಜೆಪಿ; 2 ದಿನದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಟ್ಟಿ

10:33 AM Aug 13, 2018 | |

ಮಂಗಳೂರು: ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಣವೂ ರಂಗೇರುತ್ತಿದ್ದು, ನಾಮಪತ್ರ ಸಲ್ಲಿಕೆಗೆ ನಾಲ್ಕೇ ದಿನ ಬಾಕಿ ಇರುವಾಗ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ತಯಾರಿ ನಡೆಸಿವೆ. ಉಳ್ಳಾಲ, ಪುತ್ತೂರು ನಗರಸಭೆ,  ಬಂಟ್ವಾಳ ಪುರಸಭೆ ಚುನಾವಣೆಗೆ ಸಂಬಂಧಿಸಿ ರವಿವಾರ ಎಸ್‌ಡಿಪಿಐ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಪಟ್ಟಿ ಸೋಮ ವಾರ ಬಿಡುಗಡೆ ಗೊಂಡರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಟ್ಟಿ ಇನ್ನೆರಡು ದಿನ ಗಳಲ್ಲಿ ಪ್ರಕಟವಾಗಲಿದೆ. ಆ. 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 

Advertisement

ಇಂದು ಪ್ರಕಟ
ಬಿಜೆಪಿ ಮೂರೂ ಸ್ಥಳೀಯ ಸಂಸ್ಥೆಗಳ ಎಲ್ಲಾ ಸ್ಥಾನಗಳಿಗೆ ಸ್ಪರ್ಧಿಸಲಿದೆ. ರಾಜ್ಯಾಧ್ಯಕ್ಷರು ಬಿ. ಫಾರಂ ನೀಡಿದ್ದಾರೆ. ಮೊದಲ ಪಟ್ಟಿ ಸೋಮವಾರ ಬಿಡುಗಡೆಯಾಗಲಿದೆ ಎಂದು ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ. ಎರಡನೇ ಪಟ್ಟಿ ಇನ್ನೆರಡು ದಿನಗಳಲ್ಲಿ ಪ್ರಕಟವಾಗಲಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಧಾನಸಭಾ ಚುನಾವಣೆಯಂತೆ ಹೊಸಬರಿಗೆ,  ಹಿರಿಯರಿಗೆ 50:50 ಮಾರ್ಗಸೂಚಿಗೆ ಆದ್ಯತೆ ನೀಡಲಾಗುತ್ತಿದೆ.

ಕಾಂಗ್ರೆಸ್‌ನಲ್ಲಿ  ಪೈಪೋಟಿ
ಉಳ್ಳಾಲ ಹಾಗೂ ಬಂಟ್ವಾಳದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದೆ. ಪುತ್ತೂರಿನಲ್ಲಿ ಬಹುಮತ ಹೊಂದಿಲ್ಲವಾದರೂ  ಮೀಸಲಾತಿ ಆಧಾರದಲ್ಲಿ ಅಧ್ಯಕ್ಷ ಪದವಿ ಪಡೆದಿದೆ. ಈ ಬಾರಿ ಪಕ್ಷದ ಟಿಕೆಟಿಗೆ ಭಾರೀ ಪೈಪೋಟಿ ಇದೆ. ಪುತ್ತೂರಿನಲ್ಲಿ ಕಾಂಗ್ರೆಸ್‌ನ ಎರಡು ಬಣಗಳ ಮಧ್ಯೆ  ಮುಸುಕಿನ ಗುದ್ದಾಟ ನಡೆಯುತ್ತಿದ್ದು, ವರಿಷ್ಠರಿಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಜಿಲ್ಲಾಧ್ಯಕ್ಷರು, ಬ್ಲಾಕ್‌ ಅಧ್ಯಕ್ಷರು, ಪ್ರಮುಖ ನಾಯಕರ ಒಂದು ಸುತ್ತಿನ ಸಭೆ ನಡೆದಿದೆ. ಇನ್ನೊಂದು ಸುತ್ತಿನ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಉಪಸ್ಥಿತಿಯಲ್ಲಿ ಮಂಗಳವಾರ ನಡೆಯಲಿದೆ. ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಪಕ್ಷದ ಪ್ರಮುಖರ ಜತೆ ಸಭೆ ನಡೆಸಿ ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಜೆಡಿಎಸ್‌ ಸ್ಪರ್ಧೆಗೆ ಸಿದ್ಧತೆ
ಕೆಲವೆಡೆ ಸ್ವತಂತ್ರ ಸ್ಪರ್ಧೆ ಹಾಗೂ ಕೆಲವೆಡೆ ಕಾಂಗ್ರೆಸ್‌ಜತೆ ಹೊಂದಾ ಣಿಕೆ ಮಾಡಿಕೊಳ್ಳಲು ಜೆಡಿಎಸ್‌ ನಿರ್ಧರಿಸಿದ್ದು, ಉಳ್ಳಾಲ ದಲ್ಲಿ  18, ಬಂಟ್ವಾಳ  ದಲ್ಲಿ 8 ಹಾಗೂ ಪುತ್ತೂರಿನಲ್ಲಿ  15 ರಿಂದ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಂಞಿ, ಆ. 8ರಂದು ನಡೆದ ಸಭೆಯಲ್ಲಿ ಚರ್ಚಿಸಿ ಕರಡು ಪಟ್ಟಿ ಸಿದ್ಧಪಡಿಸಲಾಗಿದೆ ಎಂದರು. ಸಿಪಿಎಂ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.

ಎಸ್‌ಡಿಪಿಐ ಪಟ್ಟಿ  ಪ್ರಕಟ
ಎಸ್‌ಡಿಪಿಐ ಪುತ್ತೂರು  4, ಉಳ್ಳಾಲ 8 ಹಾಗೂ ಬಂಟ್ವಾಳದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. 2ನೇ ಪಟ್ಟಿ ಶೀಘ್ರ ಎಂದು ಜಿಲ್ಲಾಧ್ಯಕ್ಷ  ಅಥಾವುಲ್ಲಾ  ಜೋಕಟ್ಟೆ ತಿಳಿಸಿದ್ದಾರೆ.

Advertisement

ಹೊಂದಾಣಿಕೆ ಸಾಧ್ಯತೆ
ಸ್ಥಳೀಯ ಮಟ್ಟದಲ್ಲಿ  ಹೊಂದಾಣಿಕೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಲವು ತೋರ್ಪಡಿಸಿವೆ. ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌ ಕೂಡ ಇತ್ತೀಚೆಗಷ್ಟೇ ಜಿಲ್ಲೆಗೆ ಆಗಮಿಸಿದಾಗ ಸುಳಿವು ನೀಡಿದ್ದರು. ಬಂಟ್ವಾಳ  ಪುರಸಭೆಯಲ್ಲಿ ಈಗಾಗಲೇ ಚರ್ಚೆ ಆರಂಭವಾಗಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಸೋಮವಾರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ  ಆಗಮಿಸಲಿದ್ದು ಈ ಸಂದರ್ಭ ಸ್ಪಷ್ಟ ಚಿತ್ರಣ ಲಭಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next