Advertisement

Local Body Reservation: ಮೀಸಲು ಸಿಕ್ಕರೂ ಪೂರ್ಣಾವಧಿ ಅಧಿಕಾರವಿಲ್ಲ!

12:21 AM Aug 07, 2024 | Team Udayavani |

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ 2ನೇ ಅವಧಿಗೆ ಮೀಸಲಾತಿಯನ್ನು ರಾಜ್ಯ ಸರಕಾರ ನಿಗದಿಪಡಿಸಿದೆ. ಆದರೆ 1 ವರ್ಷಕ್ಕೂ ಅಧಿಕ ಕಾಲದಿಂದ ಅಧಿಕಾರಕ್ಕಾಗಿ ಕಾದು ಕುಳಿತಿದ್ದ ರಾಜ್ಯದ 301 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 186ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿಧಿಗಳಿಗೆ ಅಧಿಕಾರ “ಖೋತಾ’ ಆಗಲಿದೆ.

Advertisement

ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರವಧಿ ಮುಗಿದು 14ರಿಂದ 15 ತಿಂಗಳು ಆಗಿದೆ. ಈಗ ಮೀಸಲಾತಿ ನಿಗದಿಪಡಿಸಲಾಗಿದೆ. ಅದರಂತೆ 2ನೇ ಅವಧಿಗೆ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರಿಗೆ 30 ತಿಂಗಳ ಬದಲು ಕೇವಲ 15ರಿಂದ 16 ತಿಂಗಳು ಮಾತ್ರ ಅಧಿಕಾರ ಭಾಗ್ಯ ಸಿಗಲಿದೆ. ಏಕೆಂದರೆ 2019ರಲ್ಲಿ ಚುನಾವಣೆ ನಡೆದು 2020ರಲ್ಲಿ ಮೊದಲ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದ 180ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಅವಧಿ 2025ರ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಹಾಗಾಗಿ ತಮ್ಮದಲ್ಲದ ತಪ್ಪಿಗೆ 1 ಮಹಾನಗರ ಪಾಲಿಕೆ, 45ಕ್ಕೂ ಹೆಚ್ಚು ನಗರಸಭೆ, 90ಕ್ಕೂ ಅಧಿಕ ಪುರಸಭೆ ಹಾಗೂ 46ಕ್ಕೂ ಹೆಚ್ಚು ಪಟ್ಟಣ ಪಂಚಾಯತ್‌ಗಳು ಸೇರಿ ರಾಜ್ಯದ ಒಟ್ಟು 186ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷರು 2ನೇ ಅವಧಿಯ 30 ತಿಂಗಳ ಅಧಿಕಾರದಿಂದ ಅವಕಾಶ ವಂಚಿತರಾಗಲಿದ್ದಾರೆ.

1 ವರ್ಷಕ್ಕೂ ಅಧಿಕ ಕಾಲದಿಂದ ನನೆಗುದಿಗೆ ಬಿದ್ದಿದ್ದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ 2ನೇ ಅವಧಿಗೆ ಮೀಸಲಾತಿಯನ್ನು ರಾಜ್ಯ ಸರಕಾರ ಆಗಸ್ಟ್‌ 5ರಂದು ಪ್ರಕಟಿಸಿದೆ. ಚುನಾವಣೆಗೆ ದಿನಾಂಕ ನಿಗದಿಪಡಿಸಿಲ್ಲ. ಚುನಾವಣೆ ಯಾವಾಗ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರಕಾರಕ್ಕೆ ಹೈಕೋರ್ಟ್‌ ಹೇಳಿದೆ.

ವಿಳಂಬಕ್ಕೆ ಕಾರಣ?
ಒಟ್ಟು 5 ವರ್ಷದ ಅವಧಿಯಲ್ಲಿ ಮೊದಲ 30 ತಿಂಗಳ ಅಧ್ಯಕ್ಷ-ಉಪಾಧ್ಯಕ್ಷ ಕಾರ್ಯಾವಧಿ ಮುಗಿದ ಬಳಿಕ ಎರಡನೇ ಅವಧಿಯ 30 ತಿಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸಬೇಕಿತ್ತು. ಮೀಸಲಾತಿ ವಿಚಾರ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಇದ್ದ ಕಾರಣ ಮೀಸಲಾತಿ ನಿಗದಿ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವ ಬಗ್ಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನ್ಯಾ| ಭಕ್ತವತ್ಸಲ ಆಯೋಗ ರಚಿಸಿತ್ತು. ಅದರ ವರದಿ ಸಲ್ಲಿಕೆಯಾಗಬೇಕಾದ ಹಿನ್ನೆಲೆಯಲ್ಲಿ ಮೀಸಲಾತಿ ಮತ್ತೆ ನನೆಗುದಿಗೆ ಬಿದ್ದಿತ್ತು.

Advertisement

ಅಧಿಕಾರ ಖೋತಾ ಹೇಗೆ?
ಒಟ್ಟು 5 ವರ್ಷದ ಅವಧಿಯಲ್ಲಿ ಅಧಿಕಾರ ಹಂಚಿಕೆ ಸೂತ್ರದಡಿ ತಲಾ 30 ತಿಂಗಳುಗಳಿಗೆ 2 ಅವಧಿಗೆ ಮೀಸಲಾತಿ ನಿಗದಿಪಡಿಸಲಾಗುತ್ತದೆ. ಅದರಂತೆ 2ನೇ ಅವಧಿಗೆ ಕರ್ನಾಟಕ ಪೌರನಿಗಮಗಳ ಕಾಯ್ದೆ-1964ರ ಸೆಕ್ಷನ್‌ 42 ಹಾಗೂ ಕರ್ನಾಟಕ ಪೌರನಿಗಮಗಳ (ಅಧ್ಯಕ್ಷ-ಉಪಾಧ್ಯಕ್ಷ) ಚುನಾವಣೆ (ತಿದ್ದುಪಡಿ) ನಿಯಮಗಳು-2024ರ ನಿಯಮ 13-ಎ ಮತ್ತು 13ರಡಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.

ಪೌರ ನಿಗಮಗಳ ಕಾಯ್ದೆ-1964ರ ಸೆಕ್ಷನ್‌ 42ರ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಅವಧಿಯು ಚುನಾವಣೆ ನಡೆದ ಅನಂತರ ಪ್ರಥಮ ಸಭೆ ನಡೆದ ದಿನಾಂಕದಿಂದ 5 ವರ್ಷಗಳಾಗಿರುತ್ತದೆ. ಅದರಂತೆ ಚುನಾಯಿತ ಸದಸ್ಯರ ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ 30 ತಿಂಗಳ ಅಧಿಕಾರವಧಿ ಕಳೆದ ವರ್ಷ ಎಪ್ರಿಲ್‌-ಮೇಯಲ್ಲಿ ಮುಗಿದಿದ್ದರೂ ಮೀಸಲಾತಿ ಗೊಂದಲದ ಕಾರಣಕ್ಕೆ 2ನೇ ಅವಧಿಗೆ 30 ತಿಂಗಳಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗಿರಲಿಲ್ಲ.

ಈಗಾಗಲೇ ಮೊದಲ ಅವಧಿ ವಿಸ್ತರಿಸಲು ಅವಕಾಶವಿರುವುದಿಲ್ಲ. ಹಾಗಾಗಿ 2020ರ ಅಕ್ಟೋಬರ್‌-ನವೆಂಬರ್‌ನಲ್ಲಿ ಚುನಾವಣೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಅವಧಿ 2025ರ ಅಕ್ಟೋಬರ್‌- ನವೆಂಬರ್‌ನಲ್ಲಿ 5 ವರ್ಷ ಪೂರ್ಣಗೊಳ್ಳುತ್ತದೆ. 2ನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷ ರಾದವರು ಅಲ್ಲಿವರೆಗೆ ಮಾತ್ರ ಅಧಿಕಾರ ಹೊಂದಿರುತ್ತಾರೆ.

– ರಫೀಕ್‌ ಅಹ್ಮದ್‌ 

Advertisement

Udayavani is now on Telegram. Click here to join our channel and stay updated with the latest news.

Next