Advertisement

ಸಾಲ ಮನ್ನಾ: ಸಾಫ್ಟ್‌ವೇರ್‌ ಮತ್ತೆ 3 ದಿನ ತೆರೆಯಲು ನಿರ್ಧಾರ

01:31 AM Nov 08, 2019 | mahesh |

ಸುಳ್ಯ: ಕೃಷಿಕರ ಸಾಲ ಮನ್ನಾ ಹಣ ಪಾವತಿಗೆ ಸಂಬಂಧಿಸಿ ಉಳಿತಾಯ ಖಾತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಹಿಂದೆ ತೆರೆಯಲಾಗಿದ್ದ ಸಾಫ್ಟ್‌ವೇರನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ನ. 11ರಿಂದ ಮತ್ತೆ ಮೂರು ದಿನಗಳ ಕಾಲ ತೆರೆಯಲು ನಿರ್ಧರಿಸಲಾಗಿದೆ.

Advertisement

ಜಿಲ್ಲೆಯ 17,744 ಫಲಾನುಭವಿಗಳ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಉಳಿತಾಯ ಖಾತೆ ಸಮರ್ಪಕವಾಗಿಲ್ಲದ ಕಾರಣ 128.22 ಕೋ.ರೂ. ಡಿಸಿಸಿ ಬ್ಯಾಂಕ್‌ನಿಂದ ಅಪೆಕ್ಸ್‌ ಬ್ಯಾಂಕ್‌ಗೆ ವಾಪಸಾಗಿತ್ತು. ಹಣ ವಾಪಸಾಗಿರುವ ಫಲಾನುಭವಿಗಳ ಖಾತೆಯ ಮಾಹಿತಿ ಸರಿಪಡಿಸಲು ಕಳೆದ ತಿಂಗಳು ಸುಧಾರಿತ ಆನ್‌ಲೈನ್‌ ಸಾಫ್ಟ್ ವೇರ್‌ ಆಪ್ಶನ್‌ ತೆರೆಯಲಾಗಿತ್ತು. ಆದರೆ ಅದು ಮೂರೇ ದಿನಗಳಲ್ಲಿ ಸ್ಥಗಿತಗೊಂಡ ಕಾರಣ ಶೇ. 70ರಷ್ಟು ಫಲಾನುಭವಿಗಳು ಮತ್ತೆ ಅತಂತ್ರರಾಗಿದ್ದರು. ಅಲ್ಲಲ್ಲಿ ಪ್ರತಿಭಟನೆಗಳೂ ನಡೆದವು. ಪರಿಣಾಮವಾಗಿ ಎರಡನೆ ಬಾರಿಗೆ ಸಾಫ್ಟ್‌ವೇರ್‌ ತೆರೆಯಲು ಅವಕಾಶ ದೊರೆತಿದೆ. ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ರೈತರ ಕೆಸಿಸಿ ಉಳಿತಾಯ ಖಾತೆಯ ವಿವರಗಳನ್ನು ಅಪ್‌ಲೋಡ್‌ ಮಾಡಿ ದೃಢೀಕರಿಸುವ ಕಾರ್ಯ ಈ ಮೂರು ದಿನಗಳಲ್ಲಿ ನಡೆಯಲಿದೆ.

ಸಮಸ್ಯೆ ಏನಾಗಿತ್ತು?
ಈ ಹಿಂದೆ ಆಯಾ ಸಹಕಾರ ಬ್ಯಾಂಕ್‌ ವ್ಯಾಪ್ತಿಯ ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ಅ. 23ರಿಂದ ಅ. 25ರ ತನಕ ಅಪ್‌ಡೇಟ್‌ಗೆ ಅವಕಾಶ ನೀಡಲಾಗಿತ್ತು. ಆದರೆ 3 ದಿನಗಳಲ್ಲಿ ಶೇ. 30ರಷ್ಟು ಮಾತ್ರ ಅಪ್‌ಡೇಟ್‌ ಆಗಿ ಶೇ. 70ರಷ್ಟು ಬಾಕಿ ಇತ್ತು. ಈಗಾಗಲೇ ಅಪ್‌ಡೇಟ್‌ ಮಾಡಲಾದ ಫಲಾನುಭವಿಗಳ ಪೈಕಿ ಕೆಲವರಿಗೆ ಮನ್ನಾ ಹಣ ಜಮೆ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಭೂಮಿ ಆಯುಕ್ತರು ಅಪ್‌ಡೆೇಟ್‌ ಸಾಫ್ಟ್‌ ವೇರನ್ನು ಮತ್ತೆ ಮೂರು ದಿನ ತೆರೆಯುವುದಾಗಿ ತಿಳಿಸಿದ್ದಾರೆ. ಈ ವೇಳೆ ಬಾಕಿ ಇರುವ ಉಳಿತಾಯ ಖಾತೆ ಸಮಸ್ಯೆ ಬಗೆಹರಿಸಲಾಗುವುದು. ಬೇಡಿಕೆ, ಮಂಜೂರಾತಿ ಹಂತದಲ್ಲಿ ತಿರಸ್ಕೃತವಾದ ಫಲಾನುಭವಿಗಳ ಸಮಸ್ಯೆಯನ್ನು ಬಗೆಹರಿಸಿ ಅವರಿಗೂ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ 1 ತಿಂಗಳೊಳಗೆ ಸಾಲ ಮನ್ನಾ ಎಲ್ಲರಿಗೂ ಸಿಗುವಂತೆ ಮಾಡುವುದು ನಮ್ಮ ಗುರಿ. – ಮಂಜುನಾಥ ಸಿಂಗ್‌, ಉಪ ನಿಬಂಧನಾಧಿಕಾರಿ, ಸಹಕಾರ ಇಲಾಖೆ, ಪುತ್ತೂರು

ಉದಯವಾಣಿ ನಿರಂತರ ವರದಿ
ಸಾಲಮನ್ನಾ ಸೌಲಭ್ಯದಿಂದ ಅವಿಭಜಿತ ಜಿಲ್ಲೆಯ ಫಲಾನುಭವಿಗಳು ಸಮಸ್ಯೆಗೆ ಒಳಗಾಗಿರುವ ಕುರಿತು ಉದಯವಾಣಿ ನಿರಂತರ ವರದಿ ಪ್ರಕಟಿಸುವ ಮೂಲಕ ಆಡಳಿತ ಮತ್ತು ಇಲಾಖೆಯ ಗಮನ ಸೆಳೆದಿತ್ತು. ಪೂರಕವಾಗಿ ಶಾಸಕ ಅಂಗಾರ ಅವರು ಸಚಿವರಿಗೆ ಮನವಿ ಸಲ್ಲಿಸಿ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿದ್ದರು. ರೈತರ ಪ್ರತಿಭಟನೆಯೂ ನಡೆದಿತ್ತು. ಸಹಕಾರ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಇವೆಲ್ಲದರ ಫ‌ಲವಾಗಿ ಸಾಫ್ಟ್ವೇರ್‌ ಮತ್ತೆ ಮೂರು ದಿನ ಕಾರ್ಯಾಚರಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next