Advertisement

ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಿ

09:22 PM Jul 02, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸುವಲ್ಲಿ ನಿರ್ಲಕ್ಷ್ಯ ತೋರುವ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ (ವಿಎಸ್‌ಎಸ್‌ಎನ್‌) ಬೆಳೆ ಸಾಲ ನೀಡುವುದಿಲ್ಲ ಎಂದು ಕೋಲಾರ ಚಿಕ್ಕಬಳ್ಳಾಪುರ ಸಹಕಾರ ಜಿಲ್ಲಾ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ತಾಲೂಕಿನ ವಿಎಸ್‌ಎಸ್‌ಎನ್‌ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ಸಹಕಾರ ಸಂಘಗಳ ಕಾರ್ಯದರ್ಶಿಗಳು ಬೆಳೆ ಸಾಲ ನೀಡಲು ತೋರುವ ಆಸಕ್ತಿ, ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡಲು ಏಕೆ ಆಸಕ್ತಿ ತೋರುತ್ತಿಲ್ಲ ಎಂದು ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿಲ್ಲ: ತೀವ್ರ ಬರಗಾಲದಿಂದ ರೈತಾಪಿ ಜನ ಸಂಕಷ್ಟದಲ್ಲಿದೆ. ಆದರೆ ನಿಜವಾದ ರೈತರಿಗೆ ಸಾಲ ಸೌಲಭ್ಯಗಳು ಸಿಗುತ್ತಿಲ್ಲ. ಇತರೆ ಆದಾಯ ಬರುವ ಚಟುವಟಿಕೆಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳಲು ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುತ್ತಿದೆ. ಆದರೆ ವಿಎಸ್‌ಎಸ್‌ಎನ್‌ ಕಾರ್ಯದರ್ಶಿಗಳು ಈ ವಿಚಾರದಲ್ಲಿ ಬದ್ಧತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿಲ್ಲ ಎಂದರು.

ಸಹಕಾರ ಸಂಘವೊಂದು 10 ಕೋಟಿ ಸಾಲ ಕೊಡಿಸಿದರೆ ಅದರಿಂದ 20 ಲಕ್ಷ ಆದಾಯ ಬರುತ್ತದೆ. ಪ್ರತಿಯೊಬ್ಬ ಕಾರ್ಯದರ್ಶಿಗಳು ಇನ್ಮುಂದೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮಹಿಳಾ ಸಂಘಗಳ ರಚನೆಗೆ ಮುಂದಾಗಬೇಕು. ಕೆಲಸದಲ್ಲಿ ಯಾವುದೇ ಸಬೂಬು ಹೇಳುವಂತಿಲ್ಲ. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆಂದರು.

ಚಿಕ್ಕಬಳ್ಳಾಪುರ ಪ್ರಗತಿ ಕುಂಠಿತ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳಿಗೆ ಹೋಲಿಸಿದರೆ ಚಿಕ್ಕಬಳ್ಳಾಪುರ ತಾಲೂಕು ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದ ಸಾಲ ವಿತರಣೆ ಪ್ರಗತಿಯಲ್ಲಿ ಸಾಕಷ್ಟು ಕುಂಠಿತವಾಗಿದೆ. ಡಿಸಿಸಿ ಬ್ಯಾಂಕ್‌ ಎಷ್ಟು ಬೇಕಾದರೂ ಸಾಲ ಕೊಡಲು ಸಿದ್ಧವಿದೆ. ಆದರೆ, ಕಾರ್ಯದರ್ಶಿಗಳು ಈ ಬಗ್ಗೆ ಗಮನ ಹರಿಸಬೇಕೆಂದರು.

Advertisement

ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಎಚ್‌.ಎಸ್‌.ಮೋಹನ್‌ ರೆಡ್ಡಿ, ಕೆ.ಎಸ್‌.ದ್ಯಾವಪ್ಪ, ಕಸಬಾ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಚೆನ್ನಕೃಷ್ಣಪ್ಪ, ಅಡಗಲ್‌ ಸಂಘದ ಅಧ್ಯಕ್ಷ ಪಿ.ಕೆಂಪಣ್ಣ ಮತ್ತು ಮೈಲಪ್ಪನಹಳ್ಳಿ ಸಂಘದ ಅಧ್ಯಕ್ಷ ಜಗದೀಶ್‌ ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸುಮಾರು 1 ಲಕ್ಷ ಮಹಿಳೆಯರಿಗೆ ಸಾಲ ವಿತರಿಸಬಹುದಾಗಿದೆ. ಆದರೆ ಕಾರ್ಯದರ್ಶಿಗಳ ಬೇಜವಾಬ್ದಾರಿತನದಿಂದ ಈವರೆಗೆ ಶೇ.10 ರಷ್ಟು ಮಹಿಳೆಯರಿಗೆ ಸಾಲ ದೊರೆಯುತ್ತಿಲ್ಲ. ಇದರಿಂದಾಗಿ ಅಧ್ಯಕ್ಷರು ನಮಗೆ ಮೋಸ ಮಾಡುತ್ತಿದ್ದಾರೆ ಎಂಬ ಭಾವನೆ ಈ ತಾಲೂಕಿನವರಲ್ಲಿ ಬರುತ್ತಿದೆ.
-ಬಾಲ್ಯಹಳ್ಳಿ ಗೋವಿಂದಗೌಡ, ಅಧ್ಯಕ್ಷರು, ಡಿಸಿಸಿ ಬ್ಯಾಂಕ್‌

Advertisement

Udayavani is now on Telegram. Click here to join our channel and stay updated with the latest news.

Next