Advertisement

ಸಾಲ ಯೋಜನೆ: ಮಧ್ಯವರ್ತಿಗಳ ಹಾವಳಿ ತಡೆಗೆ ಸಚಿವರ ಸೂಚನೆ

10:18 PM Jun 30, 2023 | Team Udayavani |

ಬೆಂಗಳೂರು: ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ನೀಡುವ ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ.

Advertisement

ಈ ಸಂಬಂಧ ಶುಕ್ರವಾರ ವಿಧಾನ ಸೌಧದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ತಂಗಡಗಿ, ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಪ್ರತಿ ಜಿಲ್ಲೆಯಲ್ಲಿ ನೇರ ಸಾಲ ಯೋಜನೆಗೆ ಮಧ್ಯವರ್ತಿಗಳು ಹುಟ್ಟುಕೊಂಡಿದ್ದಾರೆ. ಮಧ್ಯವರ್ತಿಗಳೇ ಫಲಾನುಭವಿಗಳ ಬಳಿಗೆ ಹೋಗುತ್ತಾರೆ. ನೇರ ಸಾಲವು ಫಲಾನುಭವಿಗೆ ಉಪಯೋಗಕ್ಕೆ ಬರಬೇಕು. ಈ ಯೋಜನೆಗೆ ಹೊಸ ರೂಪ ನೀಡಬೇಕಾಗಿದೆ. ಕಂತಿನ ರೂಪದಲ್ಲಾದರೂ ಫಲಾನುಭವಿಗಳಿಗೆ ಹಣ ತಲುಪುವಂತೆ ಆಗಬೇಕು ಎಂದು ತಾಕೀತು ಮಾಡಿದರು.

ಅಧಿಕಾರಿಗಳಿಗೆ ತರಾಟೆ
ಗಂಗಾ ಕಲ್ಯಾಣ ಯೋಜನೆಯಡಿ 3 ವರ್ಷಗಳ ಅವಧಿಯಲ್ಲಿ 19,862 ಕೊಳವೆ ಬಾವಿ ಕೊರೆಯಲು ಗುರಿ ಹಾಕಿಕೊಳ್ಳಲಾಗಿದ್ದು, ಕೇವಲ ಒಂದು ಸಾವಿರ ಕೊಳವೆ ಬಾವಿ ಕೊರೆದಿರುವುದಕ್ಕೆ ಸಚಿವರು ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗಂಗಾ ಕಲ್ಯಾಣ ಯೋಜನೆಯಿಂದ ಸಾವಿರಾರು ರೈತರಿಗೆ ಉಪಯೋಗವಾಗಲಿದೆ. ಮೊದಲ ಹಂತದಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಆದ್ಯತೆ ನೀಡಿ, ಹಾಕಿಕೊಂಡಿರುವ ಯೋಜನೆಯಂತೆ ಕೊಳವೆ ಬಾವಿ ಕೊರೆದು ಪೂರ್ಣಗೊಳಿಸುವಂತೆ ಸಭೆಯಲ್ಲಿದ್ದ ಅಧಿಕಾಗಳಿಗೆ ಖಡಕ್‌ ಆಗಿ ಸೂಚಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದಿನೇನಿ, ಆಯುಕ್ತ ಕೆ. ದಯಾನಂದ್‌, ದೇವರಾಜ ಅರಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು, ಉಪ್ಪಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ| ಸಿ.ಕೆ.ಜಗದೀಶ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ದುಂದು ವೆಚ್ಚ ಸಲ್ಲದು
ಕೆಲವೊಂದು ನಿಗಮಗಳು ಖಾಸಗಿ ನಿವೇಶನಕ್ಕೆ ಲಕ್ಷಾಂತರ ರೂ.ಬಾಡಿಗೆ ಕಟ್ಟುವುದನ್ನು ಅಧಿಕಾರಿಗಳು ಸಚಿವರು ಗಮನಕ್ಕೆ ತಂದರು. ಈ ವೇಳೆ ಅಸಮಾಧಾನಗೊಂಡ ಸಚಿವರು, ಅನವಶ್ಯಕವಾಗಿ ಇಂಥದ್ದಕ್ಕೆ ದುಂದುವೆಚ್ಚ ಮಾಡುವುದು ಸರಿಯಲ್ಲ. ಸ್ವಂತ ಕಟ್ಟಡದಲ್ಲೇ ನಿಗಮಗಳಿಗೆ ಸ್ಥಳ ಒದಗಿಸಿ ಬಾಡಿಗೆಗೆ ಕೊಡುವ ಹಣವನ್ನು ಇತರ ಯೋಜನೆಗಳಿಗೆ ಬಳಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next