Advertisement

ಸಾಲದ ಸೀಲು

04:30 PM Aug 10, 2020 | Suhan S |

ಗೃಹಸಾಲಕ್ಕೆ ಅರ್ಜಿ ಹಾಕುತ್ತಿದ್ದೀರಾ? ಅಪ್ರೂವ್‌ ಆಗುತ್ತೋ ಇಲ್ಲವೋ ಎನ್ನುವ ಅನುಮಾನ ನಿಮ್ಮನ್ನು ಕಾಡುತ್ತಿದೆಯಾ? ಲೋನ್‌ ಅವಧಿ ದೀರ್ಘ‌ವಾಗಿರಲಿ, ಸಿಬಿಲ್‌ ಸ್ಕೋರ್‌ ಹೆಚ್ಚಿದ್ದರೆ ಒಳ್ಳೆಯದು. ಮುಖ್ಯವಾಗಿ, ಯಾವುದೇ ಹಳೆಯ ಲೋನನ್ನು ಉಳಿಸಿಕೊಂಡಿರಬಾರದು.

Advertisement

ಗೃಹ ಸಾಲ, ಜನಸಾಮಾನ್ಯರ ಜೀವಮಾನದ ಕನಸನ್ನು ಸಾಕ್ಷಾತ್ಕರಿಸಿಕೊಳ್ಳಲು ದಾರಿಯನ್ನು ಕಲ್ಪಿಸಿಕೊಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಗೃಹಸಾಲದ ಪ್ರಯೋಜನ ಮನೆ ಕಟ್ಟುವುದಕ್ಕೆ ಮಾತ್ರವೇ ಸೀಮಿತವಾಗಿಲ್ಲ. ತೆರಿಗೆ ಉಳಿಸಲೂ ಅದು ಸಹಾಯಕ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ, ಮಾರುಕಟ್ಟೆಯಲ್ಲಿ ಯಾವೆಲ್ಲಾ ಬಗೆಯ ಅಫ‌ರ್‌ಗಳಿವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅವುಗಳಲ್ಲಿನಮಗೆ ಯಾವುದು ಸರಿಹೊಂದುವುದೋ ಅದನ್ನು ಆರಿಸಿಕೊಳ್ಳಬೇಕು. ಗೃಹ ಸಾಲದ ಅರ್ಜಿ ಅಪ್ರೂವ್‌ ಆಗುವುದಕ್ಕಿಂತ ಹೆಚ್ಚಾಗಿ, ಅದನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರತ್ತ ನಮ್ಮ ಚಿತ್ತ ಇರಬೇಕು. ಹಳೆ ಸಾಲ ಅಥವಾ ಕ್ರೆಡಿಟ್‌ ಕಾರ್ಡ್‌ ಬಾಕಿಯನ್ನು ಉಳಿಸಿಕೊಂಡಿರಬಾರದು. ಸಾಲ ಮರುಪಾವತಿಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿರಬೇಕು. ಹೀಗೆಲ್ಲಾ ಇದ್ದಾಗ, ಸಾಲದ ಅರ್ಜಿ ಅಪ್ರೂವ್‌ ಆಗುವ ಸಾಧ್ಯತೆ ಹೆಚ್ಚು. ಅದನ್ನು ಹೊರತುಪಡಿಸಿ ಇರುವ ಬೇರೆ ಮಾರ್ಗಗಳು ಇಲ್ಲಿವೆ.

ದೀರ್ಘಾವಧಿಯದ್ದಾಗಿರಬೇಕು… :  ಗೃಹ ಸಾಲದ ಅವಧಿ ದೀರ್ಘ‌ವಾದಷ್ಟೂ, ಅರ್ಜಿದಾರನಿಗೆ ಮರುಪಾವತಿಸಲು ಸಾಕಷ್ಟು ಸಮಯ ಸಿಗುತ್ತದೆ. ಇದರಿಂದಾಗಿ, ಸಮಯಕ್ಕೆ ಸರಿಯಾಗಿ ಮರುಪಾವತಿ ಸಾಧ್ಯವಾಗುತ್ತದೆ.

ಹಳೆ ಸಾಲ ಬಾಕಿ ಇರಬಾರದು :  ಹೊಸದಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಹಳೆ ಸಾಲ ಉಳಿಸಿಕೊಂಡಿದ್ದರೆ, ಅದು ಕಪ್ಪು ಚುಕ್ಕೆಯಾಗಿ ಪರಿಣಮಿಸ ಬಹುದು. ಈಗಾಗಲೇ ಒಂದು ಸಾಲ ಅರ್ಜಿದಾರನ ಮೇಲಿದೆ. ಅದರ ತಿಂಗಳ ಕಂತನ್ನು ಇನ್ನೂ ಕಟ್ಟುತ್ತಿದ್ದಾನೆ. ಅದರ ಮೇಲೆ ಇನ್ನೊಂದು ಸೇರಿದರೆ, ಆತನಿಗೆ ಹೊರೆಯಾಗಬಹುದು ಎಂದು ಸಾಲ ನೀಡುವ ಸಂಸ್ಥೆ ತಿಳಿಯಬಹುದು. ಅದೇ ಕಾರಣದಿಂದಾಗಿ ಗೃಹ ಸಾಲವನ್ನು ನಿರಾಕರಿಸಲೂಬಹುದು. ಇದಿಷ್ಟೇ ಅಲ್ಲ, ಹಳೆಯ ಸಾಲ ಉಳಿಸಿಕೊಂಡಿದ್ದರೆ, ಅದೇ ಕಾರಣ ಮುಂದೊಡ್ಡಿ ಸಾಲದ ಮೊತ್ತವನ್ನು ಕಡಿತಗೊಳಿಸಬಹುದು.

ಒಂದು ಆದಾಯ ಮೂಲವನ್ನು ಹೆಚ್ಚಿಗೆ ಸೇರಿಸಿ… :  ಪ್ರತಿ ತಿಂಗಳು ಬಾಡಿಗೆ ರೂಪದಲ್ಲಿ ಆದಾಯ ಬರುತ್ತಿದೆ, ಪಾರ್ಟ್‌ ಟೈಮ್‌ ಬಿಝಿನೆಸ್‌ನಿಂದ ಆದಾಯವಿದೆ ಎಂದೆಲ್ಲಾ ಜನ ಆದಾಯ ಮೂಲಗಳನ್ನು ನಮೂದಿಸುತ್ತಾರೆ. ಇದರಿಂದ, ಅರ್ಜಿದಾರನ ಬಳಿ ಹಣ ಓಡಾಡುತ್ತಿರುತ್ತದೆ ಎಂಬ ಭಾವನೆ ಸಂಸ್ಥೆಗೆ ಉಂಟಾಗುತ್ತದೆ. ಆಗ, ಅರ್ಜಿದಾರನಿಗೆ ಹಲವು ಆದಾಯ ಮೂಲಗಳಿರುವುದರಿಂದ, ಕಂತು ಕಟ್ಟಲು ಸಮಸ್ಯೆಯಾಗುವುದಿಲ್ಲ ಎಂದು ಲೋನ್‌ ಸ್ಯಾಂಕ್ಷನ್‌ ಮಾಡುತ್ತಾರೆ.

Advertisement

ಸಂಗಾತಿಯ ಹೆಸರನ್ನು ಸೇರಿಸಿ :  ಸಂಗಾತಿ ಉದ್ಯೋಗ ಮಾಡುತ್ತಿದ್ದಲ್ಲಿ, ಅವರ ಕ್ರೆಡಿಟ್‌ (ಸಿಬಿಲ್) ಸ್ಕೋರ್‌ ಉತ್ತಮವಾಗಿದ್ದಲ್ಲಿ, ಅದು ಪ್ಲಸ್‌ ಪಾಯಿಂಟ್‌ ಆಗುತ್ತದೆ. ಹೀಗಾಗಿ, ಅರ್ಜಿದಾರರು ತಮ್ಮ ಹೆಸರಿನ ಜೊತೆ ಸಂಗಾತಿಯ ಹೆಸರನ್ನೂ (ಕೊ- ಅಪ್ಲಿಕೆಂಟ್‌) ಸೇರಿಸುವುದರಿಂದ ಪ್ರಯೋಜನವಿದೆ. ಒಂದು ವೇಳೆ ಅರ್ಜಿದಾರನಲ್ಲಿ ಏನಾದರೂ ನಕಾರಾತ್ಮಕ ಅಂಶಗಳು ಕಂಡುಬಂದರೂ, ಸಂಗಾತಿಯಲ್ಲಿನ ಉತ್ತಮ ಅಂಶಗಳನ್ನು ಪರಿಗಣಿಸಿ, ಲೋನ್‌ ಅಪ್ರೂವ್‌ ಮಾಡುತ್ತಾರೆ.­

ಸ್ಟೆಪ್‌ ಅಪ್‌ ಲೋನ್‌ :  ಒಂದು ವೇಳೆ, ಗೃಹ ಸಾಲದ ಅರ್ಜಿ ತಿರಸ್ಕೃತಗೊಂಡಲ್ಲಿ ಅರ್ಜಿದಾರರು ಚಿಂತಿಸಬೇಕಿಲ್ಲ. ಅಂಥವರಿಗಾಗಿ ಸ್ಟೆಪ್‌ ಅಪ್‌ ಲೋನ್‌ ಎನ್ನುವ ಸವಲತ್ತು ಲಭ್ಯವಿದೆ. ತಿಂಗಳ ಆದಾಯ ಕಡಿಮೆಯಿದ್ದು, ಹೆಚ್ಚಿನ ಮೊತ್ತದ ಇಎಂಐ ಕಟ್ಟಲು ಕಷ್ಟವಾಗುತ್ತದೆ ಎನ್ನುವವರಿಗಾಗಿ, ಸ್ಟೆಪ್‌ ಅಪ್‌ ಲೋನ್‌ ಸೂಕ್ತವಾಗಿದೆ. ಕಡಿಮೆ ಇಎಂಐ ಕಂತಿನಲ್ಲಿ ಸಾಲ ಮರು ಪಾವತಿಸುವ ಅವಕಾಶವನ್ನು ಈ ಸವಲತ್ತಿನಡಿ ಒದಗಿಸಲಾಗುತ್ತದೆ. ಬರುಬರುತ್ತಾ ಕಂತಿನ ಮೊತ್ತವನ್ನು ಸ್ವಲ್ಪ ಸ್ವಲ್ಪವಾಗಿ ಹೆಚ್ಚಿಸಿಕೊಂಡು ಬರುತ್ತದೆ. ಅದಕ್ಕೆ ಸ್ಟೆಪ್‌ ಅಪ್‌ ಎಂದು ಹೆಸರು. ಒಂದೊಂದೇ ಮೆಟ್ಟಿಲನ್ನು ನಿಧಾನವಾಗಿ ಏರುವುದು ಎಂದು ಅದರ ಅರ್ಥ. ಇದರಿಂದ ಸಾಲ ಪಡೆದುಕೊಂಡವರಿಗೆ, ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಟೈಂ ಸಿಗುತ್ತೆ.

Advertisement

Udayavani is now on Telegram. Click here to join our channel and stay updated with the latest news.

Next