ಯಾದಗಿರಿ: ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ಯೋಜನೆಯಡಿ ಅರ್ಹರನ್ನು ಗುರುತಿಸಿ ಸಾಲ ಸೌಲಭ್ಯ ಒದಗಿಸುವಂತೆ ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾ ಆರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಆತ್ಮನಿರ್ಭರ ನಿಧಿ ಯೋಜನೆ ಅನುಷ್ಠಾನ ಕುರಿತು ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ, ಅವರ ಸಣ್ಣ ಸಣ್ಣ ವಹಿವಾಟುಗಳಿಗೆ ಅನುಕೂಲವಾಗುವಂತೆ ಆತ್ಮ ನಿರ್ಭರ ಯೋಜನೆಯಡಿ 10 ಸಾವಿರ ರೂ. ಕಿರು ಸಾಲಸೌಲಭ್ಯ ನೀಡಲಾಗುತ್ತಿದೆ, ನಗರಸಭೆ ಅಥವಾ ನಗರ ಸ್ಥಳೀಯ ಸಂಸ್ಥೆಗಳು ಅರ್ಹ ಬೀದಿ ಬದಿ ವ್ಯಾಪಾರಿಗಳಿಂದ ಅರ್ಜಿ ಆಹ್ವಾನಿಸಿ, ಅವುಗಳನ್ನು ಪರಿಶೀಲಿಸಿ, ಸಾಲ ಸೌಲಭ್ಯ ನೀಡಲು ಬ್ಯಾಂಕುಗಳಿಗೆ ಸಲ್ಲಿಸಬೇಕು. ಬೀದಿಬದಿ ವ್ಯಾಪಾರಿಗಳ ಗುರುತಿನ ಚೀಟಿ ಹಾಗೂ ಅವರು ವಹಿವಾಟು ನಡೆಸುವ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ಸಾಲ ಸೌಲಭ್ಯ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಂದ ಒಟ್ಟು 2,092 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ, ಅವರಿಗೆ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಗಿದೆ. ಅವರಲ್ಲಿ 227 ಮಂದಿಗೆ ಸಾಲ ಸೌಲಭ್ಯ ಮಂಜೂರಾಗಿದೆ. ಉಳಿದ 1267 ಬೀದಿ ಬದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದು, ಸಾಲ ಸೌಲಭ್ಯ ನೀಡಲು ಆನ್‌ಲೈನ್ ಮೂಲಕ ಅವರ ಅರ್ಜಿ ಅಪ್‌ಡೇಟ್ ಮಾಡಬೇಕು, ಅವರ ಅರ್ಜಿನಿಯಮಾನುಸಾರವಾಗಿ ಪರಿಶೀಲಿಸಿ ಮುಂದಿನ 7 ದಿನದೊಳಗೆ ಸಾಲ ಸೌಲಭ್ಯ ವಿತರಿಸಲು ಕ್ರಮ ವಹಿಸಬೇಕು. ಯಾವುದಾದರೂ ತಾಂತ್ರಿಕ ತೊಂದರೆ ಎದುರಾದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅದನ್ನು ಬಗೆಹರಿಸಬೇಕು. ಅರ್ಜಿಗಳಲ್ಲಿ ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಅದನ್ನು ವಾಪಸ್ ಪಡೆದು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಫಲಾನುಭವಿಗಳಿಗೆ ಸೂಚಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸಂಬಂಧಿ ಸಿದ ಬ್ಯಾಂಕುಗಳು ಕೂಡಲೇ ಅರ್ಹರಿಗೆ ಸಾಲ ಸೌಲಭ್ಯ ಒದಗಿಸಬೇಕು.ಮುಂದಿನ ಜಿಲ್ಲಾ ಮಟ್ಟದ ಬ್ಯಾಂಕರ್ ಸಮಿತಿ ಸಭೆಯಲ್ಲಿ ಈ ವಿಷಯದ ಪ್ರಗತಿ ಕುರಿತು ಚರ್ಚಿಸಲಾಗುವುದು. ಫಲಾನುಭವಿಗಳು ಪಡೆದ ಸಾಲ ಸೌಲಭ್ಯ ನಿಯಮಿತವಾಗಿ ಹಿಂತಿರುಗಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಇದ್ದರು.