ದಾವಣಗೆರೆ: ಪರೀಕ್ಷಾ ಸಮಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಹಿನ್ನೆಲೆಯಲ್ಲಿ ಶನಿವಾರ ನಡೆದ ತಾಲ್ಲೂಕು ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆ ಆರಂಭದಲ್ಲಿ ಅನುಪಾಲನಾ ವರದಿ ಮಂಡನೆ ವೇಳೆ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಇತರೆ ಸದಸ್ಯರು ಬೆಸ್ಕಾಂ ಅಧಿಕಾರಿಗಳನ್ನು ವಿದ್ಯುತ್ ಕಡಿತದ ತರಾಟೆಗೆ ತೆಗೆದುಕೊಂಡರು. ಪಿಯು ಪರೀಕ್ಷೆ ನಡೆಯುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳು ಸಿದ್ದರಾಗುತ್ತಿದ್ದಾರೆ.
ಮತ್ತೂಂದು ಕಡೆ ರೈತರು ಪಂಪ್‌ಸೆಟ್ ಮೂಲಕ ಹೊಲಗಳಿಗೆ ನೀರು ಹಾಯಿಸಲು ಸರ್ಕಸ್ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡುತ್ತಿರುವುದು ನಿಮ್ಮ ಬೇಜವಾಬ್ದಾರಿಗೆ ಹಿಡಿದ ಕನ್ನಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗ ಆನಗೋಡು ವಿಭಾಗದ ಬೆಸ್ಕಾಂ ಎಇಇ ನಾಗರಾಜ್, ವಿದ್ಯುತ್‌ನ ಅಭಾವ ಇರುವುದರಿಂದಲೇ ನಿರಂತರ ಜ್ಯೋತಿ ಯೋಜನೆಯಲ್ಲಿಯೂ ಸಮರ್ಪಕ ವಿದ್ಯುತ್ ಪೂರೈಕೆ ಸಾಧ್ಯ ಆಗುತ್ತಿಲ್ಲ. 24 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕೆಂಬ ನಿಯಮವಿದ್ದರೂ ಕೇವಲ 5 ಗಂಟೆ ವಿದ್ಯುತ್ ಕೊಡುವುದು ಕಷ್ಟವಾಗಿದೆ ಎಂದರು.
ಎಇಇ ಉತ್ತರದಿಂದ ತೀವ್ರ ಅಸಮಧಾನಗೊಂಡ ಸದಸ್ಯರು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೆಚ್ಚುವರಿ ವಿದ್ಯುತ್ ಇದೆ. ಲೋಡ್ ಶೆಡ್ಡಿಂಗ್ ಸಮಸ್ಯೆ ಎಲ್ಲಿಯೂ ಉಂಟಾಗುವುದಿಲ್ಲ ಎಂದಿದ್ದಾರೆ. ನೀವ್ಯಾಕೆ ಈ ತರಹ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿ ನಾಗರಾಜ್ ಮತ್ತು ಲೋಹಿತ್‌ಕುಮಾರ್ ವಿದ್ಯುತ್ ಸಮಸ್ಯೆ ಇದೆ.
36 ಮೆಗಾವ್ಯಾಟ್ ಕ್ರಾಸ್ ಆದರೆ, ವಿದ್ಯುತ್ ಕಡಿತವುಂಟಾಗುತ್ತದೆ ಎಂದರು. ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ನಾಯ್ಕ, ಉಪಾಧ್ಯಕ್ಷ ಪರಮೆಶ್ವರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಲ್.ಎಸ್. ಪ್ರಭುದೇವ್, ತಾಪಂ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.