Advertisement
ನಿಸರ್ಗ ಸೇತುವೆಗೆ -ಹೊಸ ಕಳೆಆಧುನಿಕ ಜೀವನ ಶೈಲಿಯಿಂದಾಗಿ ಗ್ರಾಮೀಣ ಜನರ ಕೌಶಲಗಳು ನಶಿಸಿ ಹೋಗುತ್ತಿದೆ. ಹಿಂದಿನ ಕಾಲದ ಮರದ ಸೇತುವೆ ಮೂಲೆಗುಂಪಾಗಿದೆ. ಚಿಕ್ಕಪುಟ್ಟ ತೊರೆಗಳಿಗೂ ಕಾಂಕ್ರೀಟ್ ಸೇತುವೆ ನಿರ್ಮಿಸುವ ಮೂಲಕ ಗ್ರಾಮೀಣ ಸೊಗಡಿಗೆ, ನಗರದ ಸ್ಪರ್ಶ ನೀಡಲಾಗುತ್ತಿದೆ.
ಕಾರ್ಕಳ ತಾಲೂಕು ಮಾಳ ಒಂದು ಪುಟ್ಟ ಹಳ್ಳಿ. ಸುತ್ತಮುತ್ತಲಿನಲ್ಲಿ ಅನೇಕ ತೊರೆಗಳಿವೆ. ಬೇಸಗೆಯಲ್ಲಿ ಯಾವುದೇ ಆಸರೆ ಇಲ್ಲದೆ ತೊರೆಯ ಮೂಲಕ ಸಾಗಬಹುದು. ಸ್ಥಳೀಯವಾಗಿ ಸಿಗುವ ಸತ್ತ ಅಡಿಕೆ ಮರ, ಬೀಳುಗಳನ್ನು ಬಳಸಿಕೊಂಡು ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು.
ಈ ನಿಸರ್ಗ ಸೇತುವೆ ನಿರ್ಮಾಣ ಮಾಡುವ ಕೌಶಲವನ್ನು ಉಳಿಸುವ ನಿಟ್ಟಿನಲ್ಲಿ “ಸೇತುಬಂಧ’ ಎಂಬ ಅಭಿಯಾನ ಹಮ್ಮಿಕೊಂಡಿದೆ. ಆ ಮೂಲಕ ಸ್ಥಳೀಯರು ಮತ್ತು ನುರಿತ ಸಿಬಂದಿಯ ಸಹಾಯದಿಂದ ಕಾರ್ಕಳದ ಸುತ್ತಮುತ್ತಲಿನಲ್ಲಿ ಮರದ ಸೇತುವೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಒಂದೊಂದು ಸೇತುವೆಗೆ ಒಂದೊಂದು ವಿನ್ಯಾಸವಿರಲಿದೆ. ಸ್ಥಳೀಯ ಸೇತುವೆಗಳ ನಿರ್ಮಾಣ ಕಾರ್ಯದಲ್ಲಿ ನುರಿತ ಸ್ಥಳೀಯ ನಿವಾಸಿ ಶ್ರೀನಿವಾಸ್, ಅಪ್ಪಣ್ಣ ಮತ್ತು ತಂಡದ ಸಹಾಯದಿಂದ ಮೊದಲ ಸೇತುವೆ ಈಗಾಗಲೇ ಪೂರ್ಣಗೊಂಡಿದೆ. ಇದೇ ತಂಡ ನಿರ್ಮಿಸುತ್ತಿರುವ ಸಮೀಪದ ಎರಡನೆ ಸೇತುವೆ ಅಂತಿಮ ಹಂತದಲ್ಲಿದೆ. ಪ್ರಾಚಿ ಫೌಂಡೇಶನ್ ಸಾಥ್
ಮಾಳ ಪರಿಸರದಲ್ಲಿ ನಶಿಸಿ ಹೋಗುತ್ತಿರುವ ನಿಸರ್ಗ ಸೇತುವೆ ನಿರ್ಮಾಣ ಕೌಶಲಕ್ಕೆ ಜೀವ ನೀಡುವ ಉದ್ದೇಶದಿಂದ ಪ್ರಾಚಿ ಫೌಂಡೇಷನ್ ಈಗಾಗಲೇ 30 ಅಡಿ ಉದ್ದ ಹಾಗೂ ಮೂರು ಅಡಿ ಅಗಲದ ಒಂದು ಸೇತುವೆಯನ್ನು ನಿರ್ಮಿಸಿದೆ. ಅಗತ್ಯವಿರುವ ಸಹಾಯ ಮಾಡುತ್ತಿದೆ. ಹಳ್ಳಿಗಳಲ್ಲಿರುವ ಕುಶಲಕರ್ಮಿಗಳು ಸೇರಿಕೊಂಡು ಎರಡು ಸೇತುವೆ ನಿರ್ಮಾಣ ಮಾಡಿದ್ದಾರೆ. ಎರಡು ಕಡೆಗಳಿಂದ ಇಬ್ಬರು ಒಮ್ಮೆಗೆ ಸಾಗಿ ಹೋಗಬಹುದು. ಸ್ಥಳೀಯವಾಗಿ ಸಿಗುವ ಸತ್ತ ಮರಗಳಿಂದ ಸೇತುವೆ ತಯಾರಾಗು ವುದರಿಂದ ಕೇವಲ 6,000 ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಬಹುದಾಗಿದೆ.
Related Articles
ಮಾಳ ಒಂದು ಸುಂದರವಾದ ಪ್ರಕೃತಿದತ್ತವಾದ ಪ್ರದೇಶ. ಇಲ್ಲಿ ಒಂದು ಮನೆಯಿಂದ ಇನ್ನೊಂದು ಮನೆಗೆ ತೆರಳಬೇಕಾದರೆ ತೊರೆಗೆ ಅಡ್ಡವಾಗಿ ನಿರ್ಮಿಸಲಾದ ನಿಸರ್ಗ ಸೇವೆ ಮೂಲಕ ದಾಟಿ ಹೋಗಬೇಕು. ನೈಸರ್ಗಿಕ ವಸ್ತುಗಳನ್ನು ಮಾತ್ರ ಬಳಸಿಕೊಂಡು ಮಾಡುವ ಸೇತುವೆ ನಿರ್ಮಿಸುವ ಕೌಶಲ ಮಾಯವಾಗುತ್ತಿದೆ. ಇದನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.
-ಪುರುಷೋತ್ತಮ ಅಡ್ವೆ ,ಅಭಿಯಾನ ರೂವಾರಿ
Advertisement