Advertisement
ಹೌದು, ಸಿಎಂ ಕುಮಾರಸ್ವಾಮಿ ಅವರು, ಕಳೆದ ಬಾರಿ ಮಂಡಿಸಿದ ಬಜೆಟ್‌ಗೆ ಹೋಲಿಸಿದರೆ, ಈ ಬಾರಿ ಜಿಲ್ಲೆಗೆ ಒಂದಷ್ಟು ಯೋಜನೆ ಸಿಕ್ಕಿವೆ. ಬಹು ನಿರೀಕ್ಷಿತ ಕೆರೂರ ಏತ ನೀರಾವರಿಗೆ ಸೂಕ್ತ ಅನುದಾನ ನೀಡಲು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ 550 ಕೋಟಿ ಕೇಳಿದ್ದರು. 16 ಸಾವಿರ ಹೆಕ್ಟೇರ್‌ಗೆ ನೀರಾವರಿ ಕಲ್ಪಿಸುವ ಈ ಯೋಜನೆಗೆ 300 ಕೋಟಿ ಸಿಕ್ಕಿದೆ. ಇನ್ನು ಬಾದಾಮಿ ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ 800 ಕೋಟಿ ಮೀಸಲಿಡಲು ಸಿದ್ದರಾಮಯ್ಯ ಕೇಳಿದ್ದರೆ, 25 ಕೋಟಿ ಅನುದಾನ ಬಜೆಟ್‌ನಲ್ಲಿ ಘೋಷಿಸಲಾಗಿದೆ.
Related Articles
Advertisement
ತಾಲೂಕು ಘೋಷಣೆ; ಅನುಷ್ಠಾನದ್ದೇ ಚಿಂತೆ: ಹಿಂದೆ ಜಮಖಂಡಿ ತಾಲೂಕು ವ್ಯಾಪ್ತಿಯಲ್ಲಿದ್ದ ರಬಕವಿ-ಬನಹಟ್ಟಿಯನ್ನು ಹೊಸ ತಾಲೂಕನ್ನಾಗಿ ಕಳೆದ ಎರಡು ವರ್ಷಗಳ ಹಿಂದೆ ಘೋಷಿಸಲಾಗಿದೆ. ಅದುವೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಈಗ ಅದೇ ರಬಕವಿ-ಬನಹಟ್ಟಿ ತಾಲೂಕಿನಲ್ಲಿದ್ದ ತೇರದಾಳ ಪಟ್ಟಣವನ್ನು ಹೊಸದಾಗಿ ತಾಲೂಕು ಘೋಷಣೆ ಮಾಡಲಾಗಿದೆ. ಭೌಗೋಳಿಕ ವಿಸ್ತೀರ್ಣ, ಹಳ್ಳಿಗಳ ವ್ಯಾಪ್ತಿ ಎಲ್ಲವನ್ನೂ ಸರಿದೂಗಿಸಿ, ತೇರದಾಳ ಹೊಸ ತಾಲೂಕು ಘೋಷಣೆ, ವಾಸ್ತವದಲ್ಲಿ ಕಾರ್ಯರೂಪಕ್ಕೆ ಬರಬೇಕು. ಇದು ಕೇವಲ ಘೋಷಣೆಯಾಗಬಾರದು ಎಂಬುದು ಈ ಪಟ್ಟಣದ ಜನರ ಒತ್ತಾಯ.
ಯುಕೆಪಿ ನಿರ್ಲಕ್ಷ್ಯ: ನೀರಿನಲ್ಲೇ ಮುಳುಗಿದರೂ ನೀರಾವರಿ, ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಬಾಗಲಕೋಟೆ ಜಿಲ್ಲೆಯ ಸಮಗ್ರ ನೀರಾವರಿ ಕಲ್ಪಿಸುವ ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲ. 1 ಲಕ್ಷ ಕೋಟಿ ಅನುದಾನದ ಅಗತ್ಯತೆ ಇರುವ ಯುಕೆಪಿ ಯೋಜನೆಗೆ ಬಜೆಟ್‌ನಲ್ಲಿ 1,050 ಕೋಟಿ ನೀಡಲಾಗಿದೆ. ಇದು ರೈತರಿಗೆ ಪರಿಹಾರ ಕೊಡಲೂ ಸಾಲಲ್ಲ. 3ನೇ ಹಂತದಲ್ಲಿ 130 ಟಿಎಂಸಿ ಅಡಿ ನೀರು ಬಳಕೆ, 22 ಗ್ರಾಮಗಳ ಸ್ಥಳಾಂತರ, ಪುನರ್ವಸತಿ ಕೇಂದ್ರಗಳ ಸ್ಥಾಪನೆ, ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ಗೆ ಎತ್ತರಿಸುವ ಮಹತ್ವದ ಯೋಜನೆಗೆ ಸರ್ಕಾರ, ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂಬ ಆಕ್ರೋಶ ಕೇಳಿ ಬರುತ್ತಿದೆ.
ಒಟ್ಟಾರೆ, ಸಮ್ಮಿಶ್ರ ಸರ್ಕಾರದ 2ನೇ ಬಜೆಟ್‌ನಲ್ಲಿ ಯೋಜನೆ, ಧಾರ್ಮಿಕ ಸಂಸ್ಥೆ ಸಹಿತ 9 ವಿಷಯಗಳಿಗೆ ಒಟ್ಟು 624 ಕೋಟಿ ಅನುದಾನ ಕೊಡುವ ಭರವಸೆ ನೀಡಿದೆ. ಇದು ಕೇವಲ ಘೋಷಣೆಗೆ ಸೀಮಿತವಾಗದೇ, ಕಾರ್ಯರೂಪಕ್ಕೆ ಬರಬೇಕು ಎಂಬುದು ಎಲ್ಲರ ಆಶಯ.
ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು?• ತೇರದಾಳ ನೂತನ ತಾಲೂಕು ಘೋಷಣೆ • ಆರೋಗ್ಯ ಇಲಾಖೆಯಡಿ ಡಿಜಿಟಲ್ ಸ್ತನರೇಖನ ವ್ಯವಸ್ಥೆಗೆ 1 ಕೋಟಿ • ಬಯಲುಸೀಮೆ ಅಭಿವೃದ್ಧಿ ಮಂಡಳಿಗೆ 95 ಕೋಟಿ • ಬಾದಾಮಿ ವಿಶ್ವವಿಖ್ಯಾತ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಮತ್ತು ಕರಕುಶಲ ಮಾರುಕಟ್ಟೆಯನ್ನಾಗಿ ಅಭಿವೃದ್ಧಿ ಮಾಡಲು 25 ಕೋಟಿ • ಬಹು ನಿರೀಕ್ಷಿತ ಕೆರೂರ ಏತ ನೀರಾವರಿ ಯೋಜನೆಗೆ 300 ಕೋಟಿ • ನಂದವಾಡಗಿ 2ನೇ ಹಂತದ ಕಾಮಗಾರಿಗೆ 200 ಕೋಟಿ • ನೀರಲಕೇರಿಯ ಸಿದ್ಧಾರೂಢ ಜೀರ್ಣೋದ್ಧಾರ ಸಮಿತಿ, ಮಹಾಲಿಂಗಪುರ-ಶಿರೋಳದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮ ಟ್ರಸ್ಟ್ ಕಮಿಟಿ, ಮತ್ತು ಉಮಾತಾಯಿ ಟ್ರಸ್ಟ್ ಹಾಗೂ ಬಾದಾಮಿ ತಾಲೂಕು ಸೋಮನಕೊಪ್ಪದ ಪೂರ್ಣಾನಂದಸ್ವಾಮಿ ಸೋಲ್ ಟ್ರಸ್ಟ್‌ಗೆ ತಲಾ 1 ಕೋಟಿಯಂತೆ ಒಟ್ಟು 3 ಕೋಟಿ ಅನುದಾನ • ಪ್ರಸಕ್ತ ಬಜೆಟ್‌ನಲ್ಲಿ ಒಟ್ಟು 624 ಕೋಟಿ ವಿವಿಧ ಇಲಾಖೆಗಳಡಿ ಘೋಷಣೆ. •ಶ್ರೀಶೈಲ ಕೆ. ಬಿರಾದಾರ