Advertisement

ಪುಟ್ಟ ಕತೆ: ನೆರಳು

06:00 AM Oct 21, 2018 | Team Udayavani |

ಆ ಸಂತನ ದರ್ಶನ ಮಾತ್ರದಿಂದಲೇ ದೇವತೆಗಳಿಗೂ ಆನಂದವಾಗುತ್ತಿತ್ತು. ಅವನ ಉದಾತ್ತ ವ್ಯಕ್ತಿತ್ವ ಹೀಗಿತ್ತು. ಯಾವನೇ ವ್ಯಕ್ತಿಯ ಹಿಂದಿನ ಕೃತ್ಯಗಳನ್ನು ಮರೆಯುತ್ತಿದ್ದ, ಈಗ ಅವರು ಹೇಗಿದ್ದಾರೆಂಬುದನ್ನಷ್ಟೆ  ಗಮನಿಸುತ್ತಿದ್ದ. ಪ್ರತಿಯೊಬ್ಬರ ತೋರ್ಪಡಿಕೆಯ ಮೂಲಕ್ಕಿಳಿದು ಮುಗ್ಧತೆ ವಿರಾಜಿಸುತ್ತಿದ್ದ ಅವರ ಅಸ್ತಿತ್ವದ ಕೇಂದ್ರವನ್ನಷ್ಟೇ ಗಮನಕ್ಕೆ ತೆಗೆದುಕೊಳ್ಳುತ್ತಿದ್ದ. ಹೀಗಾಗಿ ತಾನು ಕಂಡ ಪ್ರತಿಯೊಬ್ಬನನ್ನೂ ಪ್ರೀತಿಸುತ್ತಿದ್ದ ಹಾಗೂ ಕ್ಷಮಿಸುತ್ತಿದ್ದ. ಇದನ್ನೆಲ್ಲ ಅವನು ಮಹಾಕಾರ್ಯ ವೆಂದು ಭಾವಿಸಿಯೂ ಇರಲಿಲ್ಲ. ಅವನಿದ್ದುದೇ ಹಾಗೆ !

Advertisement

ಒಂದು ದಿನ ಒಬ್ಬ ದೇವತೆ ಅವನ ಮುಂದೆ ಪ್ರತ್ಯಕ್ಷಳಾಗಿ, “”ದೇವರು ನನ್ನನ್ನು ಕಳಿಸಿ ಕೊಟ್ಟಿದ್ದಾನೆ. ಯಾವುದಾದರೂ ವರ ಕೇಳಿಕೋ. ರೋಗ ಪರಿಹಾರದ ವರ ಕೊಡಲಾ?” ಎಂದು ಕೇಳಿದಳು.

“”ಬೇಡ, ದೇವರೇ ಆ ಕೆಲಸ ಮಾಡಲಿ”.
“”ಪಾಪಿಗಳನ್ನು ಸರಿದಾರಿಗೆ ತರುವ ಸಾಮರ್ಥ್ಯ ಕೊಡಲಾ?”
“”ಬೇಡ, ಮಾನವ ಹೃದಯಗಳನ್ನು ಸ್ಪರ್ಶಿಸುವ ಕೆಲಸ ನನ್ನದಲ್ಲ, ದೇವತೆಗಳದು”
“”ಸದ್ಗುಣದ ಮಾದರಿ ಪುರುಷನಾಗಿ ಇತರರನ್ನು ಪ್ರೇರಿಸುವ ಶಕ್ತಿ?”
“”ಬೇಡ, ಹಾಗಾಗಿ ಬಿಟ್ಟರೆ ನಾನು ಆಕರ್ಷಣೆಯ ಕೇಂದ್ರವಾದೇನು?”
“”ಮತ್ತೇನು ವರ ಕೊಡಲಿ?”
“”ದೇವರ ದಯೆಯಿಂದ ನಾನು ಬಯಸಿದ್ದೆಲ್ಲ ನನಗೆ ಸಿಕ್ಕಿದೆ”.
“”ಅದಾಗದು, ಏನಾದರೂ ಪವಾಡದ ಶಕ್ತಿಗಾಗಿ ಕೇಳಲೇಬೇಕು ನೀನು”- ದೇವತೆ ಒತ್ತಾಯಿಸಿದಳು.
“”ಹಾಗಿದ್ದರೆ, ನನ್ನ ಅರಿವಿಗೆ ಬಾರದಂತೆಯೇ ಇತರರಿಗೆ ಒಳಿತನ್ನೆಸಗುವಂತಾಗಲಿ”.
ಒಪ್ಪಿದ ದೇವತೆ, ಅವನಿಗೆ ಕೊಟ್ಟ ವರ ಬಹಳ ವಿಚಿತ್ರವಾದುದು. ಅವನ ನೆರಳು, ಅದು ಬೆನ್ನ ಹಿಂದೆ ಇರುವಷ್ಟು ಹೊತ್ತು ಅದಕ್ಕೊಂದು ದಿವ್ಯ ಶಕ್ತಿ ಇರುತ್ತಿತ್ತು. ಆ ನೆರಳಿನ ವ್ಯಾಪ್ತಿಯಲ್ಲಿದ್ದ ನೆಲ ಫ‌ಲವತ್ತಾಗುತ್ತಿತ್ತು. ನೆರಳು ಯಾವ ರೋಗಿಗಳ ಮೇಲೆ ಬೀಳುತ್ತಿತ್ತೋ ಅವರು ಗುಣಮುಖರಾಗುತ್ತಿದ್ದರು. ನೆರಳು ಬಿದ್ದಲ್ಲೆಲ್ಲ ನೀರ ಚಿಲುಮೆಗಳು ಚಿಮ್ಮುತ್ತಿದ್ದವು. ದುಃಖೀಗಳ ಮುಖಕ್ಕೆ ಅವನ ನೆರಳು ಬಿದ್ದರೆ ಸಾಕು, ಅವರ ಮುಖದಲ್ಲಿ ಖುಷಿಯ ರಂಗು ಹೊಮ್ಮತೊಡಗುತ್ತಿತ್ತು.

ಆದರೆ, ಈ ಯಾವ ಪವಾಡವೂ ಆ ಸಂತನ ಅರಿವಿಗೆ ಬರಲೇ ಇಲ್ಲ. ಕಾರಣ, ಜನರ ಗಮನ ಕೇವಲ ಸಂತನ ನೆರಳ ಮೇಲಿತ್ತು; ಅವನ ಮೇಲಲ್ಲ. ಅವರು ಅವನ ನೆರಳಿನಿಂದ ಉಪಕೃತರಾದರು. ಅವನನ್ನು ಮಾತ್ರ ಮರೆತೇಬಿಟ್ಟರು. ಅವನು ಬಯಸಿದ್ದುದೂ ಅದೇ ತಾನೆ?

ಎಸ್‌ಎನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next