ಅದೊಂದು ಗುರುಕುಲ. ಆ ಗುರುಗಳಿಗೆ ಮೂವರು ಶಿಷ್ಯರು. ಅವರಲ್ಲಿ ಇಬ್ಬರು ಶಿಷ್ಯರು ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದರೆ ಒಬ್ಬ ಮಾತ್ರ ಸೋಮಾರಿಯಾಗಿದ್ದ. ಆತನಿಗೆ ವಿದ್ಯಾಭ್ಯಾಸದಲ್ಲಿ ಅಷ್ಟೊಂದು ಆಸಕ್ತಿಯೂ ಇರಲಿಲ್ಲ.
ಆ ಮೂರೂ ಶಿಷ್ಯರಿಗೂ ಪ್ರತಿದಿನ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಜೊತೆಯಾಗಿ ಪಾಠ ಹೇಳುತ್ತಿದ್ದರು ಗುರುಗಳು. ಅವರದು ತುಂಬ ಕಟ್ಟುನಿಟ್ಟಾದ ಪಾಠದ ರೀತಿ. ಒಮ್ಮೆ ಪಾಠ ಹೇಳಿ, ಅದನ್ನು ಮತ್ತೆ ಪುನರಾವರ್ತಿಸಿ, ಶಿಷ್ಯರನ್ನು ಪ್ರಶ್ನಿಸಿ ಅವರಿಗೆ ಅರ್ಥವಾಗಿದೆಯೇ ಎಂದು ತಿಳಿದುಕೊಂಡೇ ಅವರು ಮುಂದುವರಿಯುತ್ತಿದ್ದರು.
ಒಂದು ದಿನ ಎಂದಿನಂತೆ ಪಾಠ ಹೇಳುತ್ತಿದ್ದಾಗ ಆ ಸೋಮಾರಿ ಶಿಷ್ಯ ತೂಕಡಿಸುತ್ತಿರುವುದು ಗುರುಗಳ ಕಣ್ಣಿಗೆ ಬಿತ್ತು. ಆದರೆ, ಗುರುಗಳು ಆತ ನಿದ್ರಿಸುವುದನ್ನು ಕಂಡರೂ ಕಾಣದಂತೆ, ಯಾವುದೇ ಶಿಕ್ಷೆಯನ್ನೂ ಕೊಡದೆ ಪಾಠ ಮುಂದುವರಿಸಿದರು. ಸ್ವಲ್ಪ ಹೊತ್ತಿನ ಬಳಿಕ ಎಚ್ಚರಾದ ಶಿಷ್ಯನಿಗೆ ಗುರುಗಳು ಶಿಕ್ಷಿಸುತ್ತಾರೇನೋ ಎಂದು ಭಯವಾಯಿತು. ಆದರೆ ಅವರು ಏನನ್ನೂ ಹೇಳದೇ ಇದ್ದುದನ್ನು ಕಂಡು ನಿಶ್ಚಿಂತನಾಗಿ ಮರುದಿನವೂ ಪಾಠದ ವೇಳೆಯಲ್ಲಿ ತೂಕಡಿಸಿದಂತೆ ನಟಿಸಿದ. ಅಂದೂ ಗುರುಗಳು ಏನೂ ಹೇಳಲಿಲ್ಲ. ಅವರು ಉಳಿದಿಬ್ಬರು ಶಿಷ್ಯರಿಗೇ ಪ್ರಶ್ನೆ ಕೇಳುತ್ತ ಪಾಠ ಮುಂದುವರಿಸಿದ್ದು ಕಂಡು ಈತನಿಗೆ ಇನ್ನಷ್ಟು ಖುಷಿಯಾಯಿತು. ಇನ್ನು ಮೇಲೆ ಗುರುಗಳ ಪ್ರಶ್ನೆ ಪುನರಾವರ್ತನೆಯ ಕಷ್ಟದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಿದ್ದೆ ಬಂದಂತೆ ನಟಿಸುವುದೇ ಉತ್ತಮವೆಂದು ಯೋಚಿಸಿದ ಆ ಶಿಷ್ಯ. ಆದರೆ ಗುರುಗಳಿಗೆ ಆತನ ನಟನೆ, ಅದರ ಹಿಂದಿನ ಉದ್ದೇಶ ಎಲ್ಲವೂ ಅರ್ಥವಾಯಿತು.
ಅಂದು ಪಾಠ ಮುಗಿಯುತ್ತಿದ್ದಂತೆ ಮರುದಿನ ಶಿಷ್ಯರಿಗೆ ಕಂಠಪಾಠ ಪರೀಕ್ಷೆ ಇದೆ ಎಂದರು ಗುರುಗಳು. ಸರಿ, ಮರುದಿನ ಶಿಷ್ಯರೆಲ್ಲಾ ಸಿದ್ಧರಾಗಿ ಬಂದರು. ಪರೀಕ್ಷೆ ಆರಂಭವಾಯಿತು. ಮೊದಲು ಕಂಠಪಾಠ ಒಪ್ಪಿಸುವ ಸರದಿ ಪಾಠದ ವೇಳೆ ತೂಕಡಿಸುವ ಸೋಮಾರಿ ಶಿಷ್ಯನಿಗೇ ಬಂತು. ಆತ ಎದ್ದು ನಿಂತು ಪಾಠ ಒಪ್ಪಿಸತೊಡಗಿದ. ಅವನು ಆರಂಭಿಸಿದ ತಕ್ಷಣ ಗುರುಗಳು ತೂಕಡಿಸಲು ತೊಡಗಿದರು. ಆತ ಪಾಠ ಮುಗಿಸಿದಾಗ ಗುರುಗಳು ಎಚ್ಚರಗೊಂಡು “”ನಾನು ಕೇಳಿಸಿಕೊಳ್ಳಲಿಲ್ಲ, ನನಗೆ ನಿದ್ದೆ ಬಂದಿತ್ತು. ಇನ್ನೊಮ್ಮೆ ಒಪ್ಪಿಸು” ಎಂದರು. ಆತ ಇನ್ನೊಮ್ಮೆ ಪಾಠ ಒಪ್ಪಿಸಿದ. ಈಗಲೂ ಗುರುಗಳು, “”ನಾನು ನಿದ್ದೆ ಹೋಗಿದ್ದೆ. ಇನ್ನೊಮ್ಮೆ ಪಾಠ ಒಪ್ಪಿಸು” ಅಂದರು. ಹೀಗೆ, ಆ ಶಿಷ್ಯ ಪಾಠ ಒಪ್ಪಿಸುತ್ತಲೇ ಇದ್ದ. ಗುರುಗಳು ಪುನರಪಿ ಪಾಠ ಒಪ್ಪಿಸಲು ಹೇಳುತ್ತಲೇ ಇದ್ದರು.
ಶಿಷ್ಯ ಪಾಠ ಒಪ್ಪಿಸಿ ಒಪ್ಪಿಸಿ ಸೋತುಹೋದ. ಅವನಿಗೆ ತನ್ನ ತಪ್ಪಿನ ಅರಿವಾಯಿತು. ಆತ ಗುರುಗಳ ಕಾಲಿಗೆ ಬಿದ್ದು, “”ಗುರುಗಳೇ, ತಪ್ಪಾಯಿತು. ಪಾಠದ ವೇಳೆಯಲ್ಲಿ ನಿದ್ದೆ ಮಾಡಬಾರದಾಗಿತ್ತು ನಾನು” ಎಂದು ಕ್ಷಮೆ ಕೋರಿದ.
ಗುರುಗಳು, “”ನೀನು ನಿದ್ದೆ ಮಾಡಬಾರದಿತ್ತು. ಅದು ತಪ್ಪೇ. ಆದರೂ ಅದು ಕ್ಷಮ್ಯ. ಆದರೆ ನಿದ್ದೆ ಬಾರದಿದ್ದರೂ ನಿದ್ದೆ ಬಂದಂತೆ ನಟಿಸಿದೆಯಲ್ಲ, ಅದು ಅಕ್ಷಮ್ಯ” ಎಂದರು.