ಪುಟ್ಟನಿಗೆ ಗುಬ್ಬಿಗಳೆಂದರೆ ತುಂಬಾ ಇಷ್ಟ. ಮನೆಯ ಅಂಗಳದಲ್ಲಿ ತುಂಬಿರುತ್ತಿದ್ದ ಗುಬ್ಬಿಗಳಿಗೆ ಅಕ್ಕಿ, ಕಾಳುಗಳನ್ನು ಹಾಕಿ ಅವನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿದ್ದ. ಹೀಗಿರುವಾಗ ಅಂಗಳಕ್ಕೆ ಬರುವ ಗುಬ್ಬಿಗಳ ಸಂಖ್ಯೆ ಕಡಿಮೆಯಾಯಿತು. ಪುಟ್ಟ “ಗುಬ್ಬಿ ಬೇಕು’ ಎಂದು ಒಂದೇ ಸಮನೇ ಅಳುತ್ತಾ ಅಮ್ಮನನ್ನು ಕಾಡುತ್ತಿದ್ದ. ಅವನ ಸಮಾಧಾನಕ್ಕೆಂದು ತಾಯಿ ದಿನವೂ ಒಂದೊಂದು ಸುಳ್ಳು ಹೇಳುತ್ತಿದ್ದಳು. ದಿನ ಕಳೆದಂತೆ ಪುಟ್ಟ ಗುಬ್ಬಿಗಳ ವಿಷಯವನ್ನು ಮರೆತುಬಿಟ್ಟ.
ತುಂಬಾ ಸಮಯದ ನಂತರ ಗುಬ್ಬಿಗಳು ಮತ್ತೆ ಅಂಗಳದಲ್ಲಿ ಕಾಣಿಸಿಕೊಂಡವು. ಪುಟ್ಟನ ಸಂತಸಕ್ಕೆ ಪಾರವೇ ಇರಲಿಲ್ಲ. ಹಳೆಯ ನೆನಪುಗಳೆಲ್ಲಾ ಮರುಕಳಿಸಿದವು. ಪುಟ್ಟ ಅಮ್ಮನನ್ನು ಕೇಳಿದ “ಇಷ್ಟು ದಿನ ಗುಬ್ಬಿಗಳು ಎಲ್ಲಿಗೆ ಹೋಗಿದ್ದವು?’. ಅಮ್ಮನ ಬಲಿ ಉತ್ತರವಿರಲಿಲ್ಲ. ಇವನು ಬಿಡಲಿಲ್ಲ. ಕಡೆಗೆ ಪುಟ್ಟನ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು “ಆ ಗುಬ್ಬಿಗಳನ್ನೇ ಕೇಳು’ ಎಂದು ಗದರಿದಳು.
ಪುಟ್ಟ ಕೈಯಲ್ಲಿ ಅಕ್ಕಿಕಾಳುಗಳನ್ನು ಹಿಡಿದುಕೊಂಡು ಅಂಗಳಕ್ಕೆ ಬಂದ. ಗುಬ್ಬಿಗಳು ನಿರ್ಭಯದಿಂದ ಅವನ ಬಳಿ ಬಂದು ಅವನ ಮೈಮೇಲೆ ಕುಳಿತು ಅಕ್ಕಿಕಾಳನ್ನು ತಿಂದವು. ಅವಕ್ಕೆ ಪುಟ್ಟನ ನೆನಪು ಚೆನ್ನಾಗಿತ್ತು. ಪುಟ್ಟ ಕೇಳಿದ “ಇಷ್ಟು ದಿನ ಎಲ್ಲಿಗೆ ಹೋಗಿದ್ದಿರಿ ಗುಬ್ಬಿಗಳೇ?’. ಒಂದು ಗುಬ್ಬಿ ಉತ್ತರಿಸಿತು ಇಲ್ಲಿನ ವಾತಾವರಣ, ಗಾಳಿ, ನೀರು ಯಾವುದೂ ಮುಂಚಿನಂತಿಲ್ಲ. ಕಲುಷಿತಗೊಂಡಿವೆ. ಮೊಬೈಲ್ ತರಂಗಗಳಿಂದ ನಮ್ಮ ಆರೋಗ್ಯವೂ ಏರುಪೇರಾಗುತ್ತಿದೆ. ಅದಕ್ಕೇ ಪಟ್ಟಣದಿಂದ ದೂರ, ಕಾಡಿಗೆ ಹೋಗಿದ್ದೆವು’ ಎಂದಿತು. ಪುಟ್ಟನಿಗೆ ಗುಬ್ಬಿಯ ಉತ್ತರ ಕೇಳಿ ಬೇಸರವಾಯಿತು. ಅವನು “ಮತ್ತೇಕೆ ವಾಪಸ್ ಬಂದಿರಿ?’ ಎಂದು ಕೇಳಿದ. “ದೂರ ಹೋಗಿದ್ದರೂ ನಿನ್ನನ್ನು ನಾವು ಮರೆತಿರಲಿಲ್ಲ. ನಿನ್ನನ್ನು ನೋಡಲೆಂದೇ ಬಂದೆವು’ ಗುಬ್ಬಿ ಉತ್ತರಿಸಿತು. ಪುಟ್ಟನಿಗೆ ಗುಬ್ಬಿಗಳ ಮೇಲೆ ಮಮತೆ ಉಕ್ಕಿತು. ಇನ್ನು ಮುಂದೆ ಪುಟ್ಟನನ್ನು ನೋಡಲು ಕಾಡಿನಿಂದ ಪ್ರತಿ ತಿಂಗಳೂ ಬರುವುದೆಂದು ಗುಬ್ಬಿಗಳ ನಡುವೆ ಮಾತಾಯಿತು.
ಗುಬ್ಬಿಗಳ ಗುಂಪಲ್ಲಿ ಮರಿಗಳೂ ಇದ್ದವು. ಅವುಗಳಿಗೂ ಪುಟ್ಟ ತುಂಬಾ ಹಿಡಿಸಿಬಿಟ್ಟಿದ್ದ. ಚಿಂವ್ ಚಿಂವ್ ಎನ್ನುತ್ತಾ ಪುಟ್ಟನ ಸುತ್ತಲೇ ಹಾರಾಡಿದವು. ಕಡೆಗೂ ಅವು ತಮ್ಮ ಗೂಡುಗಳಿಗೆ, ಕಾಡಿಗೆ ಮರಳಲು ಅಣಿಯಾದವು. ಪುಟ್ಟನನ್ನು ಬೀಳ್ಕೊಟ್ಟು ಮೇಲಕ್ಕೆ ಹಾರಿದವು. ಗುಬ್ಬಿಗಳು ಆಕಾಶದಲ್ಲಿ ಮರೆಯಾಗುವವರೆಗೂ ಪುಟ್ಟ ಅಂಗಳದಲ್ಲಿ ನಿಂತು ಅವುಗಳತ್ತ ಕೈಬೀಸುತ್ತಲೇ ಇದ್ದ.
ಅಶೋಕ ವಿ. ಬಳ್ಳಾ, ಬಾಗಲಕೋಟೆ