ಶಿಕ್ಷಣ ಮತ್ತು ಸಾಹಿತ್ಯ ಹಿಂದೆ ಪರಸ್ಪರ ಹೆಣೆದುಕೊಂಡಿತ್ತು. ಶಿಕ್ಷಣದ ಬಹುತೇಕ ಭಾಗವನ್ನು ಸಾಹಿತ್ಯ ಆವರಿಸಿಕೊಂಡಿತ್ತು. ಇಂದು ಇತರ ಜ್ಞಾನ, ಶಿಸ್ತುಗಳ ಜತೆಗೆ ಸಾಹಿತ್ಯವೂ ಒಂದಾಗಿದೆ. ಸಾಹಿತ್ಯವನ್ನು ಓದಿ ಏನು ಲಾಭ ಎಂದು ಮೂಗು ಮುರಿಯುವವರೂ ಇದ್ದಾರೆ. ಲಾಭವೇ ಶಿಕ್ಷಣದ ಗುರಿ ಅನ್ನುವವರು ಶಿಕ್ಷಣವನ್ನು ವ್ಯಾಪಾರಿ ದೃಷ್ಟಿಯಿಂದ ನೋಡುತ್ತಾರೆಯೇ ಹೊರತು ಜ್ಞಾನ, ಭಾವ ಸಮೃದ್ಧಿಯ ದೃಷ್ಟಿಯಿಂದ ನೋಡುವುದಿಲ್ಲ.
Advertisement
ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಎಷ್ಟರ ಮಟ್ಟಿಗಿದೆ?ಖುಷಿ ಪಡುವಷ್ಟು ಇಲ್ಲ. ಒಂದೆರಡು ಅಪವಾದಗಳನ್ನು ಹೊರತುಪಡಿಸಿ ಹೇಳುವುದಾದರೆ ಅಂಕಗಳಷ್ಟೇ ಆಸಕ್ತಿ. ಇವತ್ತು ಸಾಹಿತ್ಯದ ವಿದ್ಯಾರ್ಥಿಗಳಿಗಿಂತ ಇತರರಲ್ಲೇ ಸಾಹಿತ್ಯಾಸಕ್ತಿ ಹೆಚ್ಚು. ಸಾಹಿತ್ಯ ನಮ್ಮ ಭಾವ ಪ್ರಪಂಚವನ್ನು ಬೆಳಗುವ, ನೆಮ್ಮದಿಯ ದಾರಿಗಳನ್ನು ತೋರುವ ದೀಪ ಎಂಬರಿವು ಸಾಹಿತ್ಯ ವಿದ್ಯಾರ್ಥಿಗಳಿಗೆ ಮನವರಿಕೆಯಾಗಬೇಕಿದೆ.
ತಿಂಗಳಿಗೊಬ್ಬ ಸಾಹಿತಿಯ ಕುರಿತು ಮಕ್ಕಳೇ ಕಾರ್ಯಕ್ರಮ ಮಾಡುವಂತೆ ಪ್ರೇರೇಪಿಸುವುದು, ಬಿತ್ತಿ ಪತ್ರಿಕೆಗಳನ್ನು, ಕೈ ಬರಹ ಪತ್ರಿಕೆಗಳನ್ನು ಆರಂಭಿಸುವುದು, ಸ್ಥಳೀಯ ಬರಹಗಾರರನ್ನು, ಕಲಾವಿದರನ್ನು ಮಕ್ಕಳ ಜತೆಗೆ ಸಂವಾದಿಸುವಂತೆ ಮಾಡುವುದು ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಬಹುದಾಗಿದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಏನು ಮಾಡಬಹುದು?
ಶಾಲೆಗಳಲ್ಲಿ ಗ್ರಂಥಾಲಯ, ಪ್ರತಿವಾರದ ಓದು ಕಾರ್ಯಕ್ರಮ, ಸ್ಪರ್ಧೆ ಇತ್ಯಾದಿಗಳ ಮೂಲಕ ಮಕ್ಕಳಲ್ಲಿ ಎಳವೆಯಿಂದಲೇ ಸಾಹಿತ್ಯಾಸಕ್ತಿ ಚಿಗುರಿಸಬಹುದು. ವಾರದಲ್ಲಿ ಒಂದು ಗಂಟೆ ಸಾಹಿತ್ಯ ಕಾರ್ಯಕ್ರಮಕ್ಕೆ ಅಂತ ಮೀಸಲಿಟ್ಟು ಮಕ್ಕಳೇ ಬರೆದ ರಚನೆಗಳ ಪ್ರಸ್ತುತಿಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಬಹುದು.
Related Articles
ಅಂತರ್ಜಾಲ ಮಾಧ್ಯಮಗಳು ವ್ಯಾಪಕವಾಗತೊಡಗಿದಂತೆಲ್ಲ ಸಾಹಿತ್ಯಿಕವಾಗಿ ತೊಡಗಿಸಿಕೊಳ್ಳುವಿಕೆ, ಸಾಹಿತ್ಯ ಓದುವಿಕೆ ಆಸಕ್ತಿ ವಿದ್ಯಾರ್ಥಿಗಳಲ್ಲಿ ಖಂಡಿತವಾಗಿಯೂ ಕಡಿಮೆಯಾಗಿದೆ. ವಾಟ್ಸಪ್ ಸಾಹಿತ್ಯವೇ ಸಾಹಿತ್ಯ ಎಂಬ ಭ್ರಮೆ ವಿದ್ಯಾರ್ಥಿ ಸಹಿತ ಬಹುತೇಕ ಎಲ್ಲರಲ್ಲೂ ಆವರಿಸಿದೆ. ಮೊಬೈಲ್ ಎಂಬ ಯಂತ್ರದಂಡದ ಮಾದಕತೆ ಆವರಿಸಿ ಪಂಪ, ಪಂಜೆ ಮರೆತು ಹೋಗಿದ್ದಾರೆ.
Advertisement
ಧನ್ಯಾ ಬಾಳೆಕಜೆ