Advertisement

ನೇಪಾಳದೊಂದಿಗೆ ಸಾಹಿತ್ಯಿಕ ನೆಂಟಸ್ಥನ

01:17 AM Sep 10, 2019 | Lakshmi GovindaRaju |

ಬೆಂಗಳೂರು: ನೇಪಾಳದೊಂದಿಗೆ ಈಗಾಗಲೇ ಸಾಹಿತ್ಯಿಕ ನೆಂಟಸ್ಥನ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ತು, ನೇಪಾಳಿ ಭಾಷೆಯ ಹೆಸರಾಂತ ಸಾಹಿತಿಗಳ ಕವಿತೆಗಳನ್ನು “ಆಧುನಿಕ ನೇಪಾಳಿ ಕವಿತೆಗಳು’ ಎಂಬ ಶೀರ್ಷಿಕೆಯಡಿ ಕನ್ನಡದಲ್ಲಿ ಹೊರತಂದಿದೆ.

Advertisement

ಕನ್ನಡದ ಜ್ಞಾನಪೀಠ ಪುರಸ್ಕೃತ ಕುವೆಂಪು, ದ.ರಾ.ಬೇಂದ್ರೆ, ವಿ.ಕೃ.ಗೋಕಾಕ್‌. ಡಾ.ಯು.ಆರ್‌.ಅನಂತಮೂರ್ತಿ, ಚಂದ್ರಶೇಖರ ಕಂಬಾರ ಹಾಗೂ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ, ನಿತ್ಯೋತ್ಸವ ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಸೇರಿದಂತೆ ಐವತ್ತು ಸಾಹಿತಿಗಳ ಕವಿತೆಗಳು ನೇಪಾಳಿ ಭಾಷೆಗೆ ಭಾಷಾಂತರಗೊಂಡು ಪ್ರಕಟಗೊಂಡಿವೆ.

ಇದೀಗ ನೇಪಾಳದ ಸುಮಾರು 50 ಸಾಹಿತಿಗಳ ಆಯ್ದ ಕವನ ಗುಚ್ಛ ಸಿದ್ಧವಾಗಿದೆ. ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ತು, ಈ ಹಿಂದೆ ನೇಪಾಳ ಕಲಾ ಡಾಟ್‌.ಕಾಂ (ಇದು ನೇಪಾಳಿ ಸಾಹಿತ್ಯ ಪರಿಷತ್ತು)ದೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಾಹಿತ್ಯದ ಕೊಡು ಕೊಳ್ಳುವಿಕೆಗೆ ಮುಂದಾಗಿತ್ತು. ಈ ಕಾರ್ಯದಿಂದಾಗಿ ಕನ್ನಡದ ಹೆಸರಾಂತ ಸಾಹಿತಿಗಳ ಕವಿತೆಗಳು ನೇಪಾಳಿ ಭಾಷೆಗೆ, ಹಾಗೂ ಆ ಭಾಷೆಯ ಹೆಸರಾಂತ ಕವಿಗಳ ಕವಿತೆಗಳು ಕನ್ನಡ ಭಾಷೆಯಲ್ಲಿ ದೊರೆಯುವಂತಾಗಿದೆ.

ಈ ಒಡಂಬಡಿಕೆಯಂತೆ ಕಳೆದ ಮಾರ್ಚ್‌ ತಿಂಗಳಲ್ಲಿ ಕನ್ನಡದ 50 ಮಂದಿ ಸಾಹಿತಿಗಳ ಕವಿತೆಗಳು ನೇಪಾಳಿ ಭಾಷೆಗೆ ಭಾಷಾಂತರ ಗೊಂಡು “ಭಾರತ್‌ ಶಾಶ್ವತ್‌ ಅವಾಜ್‌’ ಶೀರ್ಷಿಕೆಯಲ್ಲಿ ಪುಸ್ಥಕ ರೂಪ ನೀಡಲಾಗಿತ್ತು. ಕಂಠ್ಮಡುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಪಾಳದ ಉಪರಾಷ್ಟ್ರಪತಿ ನಂದ ಬಹದೂರ್‌ ಪೂನ್‌ ಅವರು ಲೋಕಾರ್ಪಣೆಗೊಳಿಸಿದ್ದರು.

ಇದೀಗ ನೇಪಾಳಿ ಭಾಷೆಯ ಪ್ರಸಿದ್ಧ ಸಾಹಿತಿಗಳಾದ ಗೋಪಾಲ ಪ್ರಸಾದ್‌ ರಿಮಾಲ್‌, ಲಕ್ಷಿ ಪ್ರಸಾದ್‌ ದೇವ್‌ಕೋಟ, ತುಳಸಿ ದಿವಾಸ್‌, ಶೈಲೇಂದ್ರ ಸರ್ಕಾರ್‌, ನರೇಶ್‌ ಶಕ್ಯಾ, ಎಸ್‌.ಪಿ.ಕೋಯಿರಾಲ, ಅವಿನಾಶ್‌ ಶ್ರೇಷ್ಠ, ಕೃಷ್ಣ ಸೇನ್‌ ಸೇರಿದಂತೆ ಇನ್ನಿತರ ಕವಿಗಳ ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಲಾಗಿದ್ದು, ಇದಕ್ಕೆ ಕಸಾಪ ಪುಸ್ಥಕ ರೂಪ ನೀಡಿದೆ.

Advertisement

ಸದ್ಯದಲ್ಲೇ ಬಿಡುಗಡೆ: “ಆಧುನಿಕ ನೇಪಾಳಿ ಕವಿತೆಗಳು’ ಪುಸ್ಥಕ ಸದಸ್ಯದಲ್ಲೇ ಲೋಕಾರ್ಪಣೆಗೊಳ್ಳಲ್ಲಿದ್ದು ಇದಕ್ಕಾಗಿ ಪರಿಷತ್ತು ಎಲ್ಲ ತಯಾರಿ ಮಾಡಿಕೊಂಡಿದೆ.ರಾಜ್ಯಪಾಲರಿಂದ ಈ ಪುಸ್ಥಕ ಬಿಡುಗಡೆ ಮಾಡಬೇಕೆಂಬುದು ಪರಿಷತ್ತಿನ ಆಡಳಿತ ಮಂಡಳಿಯ ಬಯಕೆಯಾಗಿದ್ದು, ಆ ಹಿನ್ನೆಲೆಯಲ್ಲಿ ರಾಜ್ಯಪಾಲರ ಬಳಿ ಸಮಯ ಕೋರಲಾಗಿದೆ.

ಅವರು ದಿನಾಂಕ ನಿಗದಿಪಡಿಸಿದ ನಂತರ “ಆಧುನಿಕ ನೇಪಾಳಿ ಕವಿತೆಗಳು’ ಪುಸ್ಥಕ ಲೋಕಾರ್ಪಣೆಯಾಗಲಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ತಿಳಿಸಿದ್ದಾರೆ. ನೇಪಾಳದಿಂದಲೂ ಸಾಹಿತಿಗಳು ಮತ್ತು ರಾಜತಾಂತ್ರಿಕ ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅವರಿಗೂ ಆಹ್ವಾನ ನೀಡಲಾಗುವುದು ಎಂದು ಹೇಳಿದ್ದಾರೆ.

ಕಳೆದ ವರ್ಷ ಮಾತುಕತೆ: ಕಳೆದ ವರ್ಷ ನೇಪಾಳ ಕಲಾ ಡಾಟ್‌.ಕಾಂ ಮುಖ್ಯಸ್ಥೆ ಮಮಿಲಾ ಜೋಷಿ ನೇತೃತ್ವದ ನಿಯೋಗ ಬೆಂಗಳೂರಿಗೆ ಭೇಟಿ ನೀಡಿತ್ತು. ಆ ವೇಳೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ರನ್ನು ಭೇಟಿ ಮಾಡಿ, ಕವಿತೆಗಳ ವಿನಿಮಯದ ಸಂಬಂಧ ಮಾತುಕತೆ ನಡೆಸಿತ್ತು. ನಮ್ಮ ನಾಡಿನ ಸಾಹಿತಿಗಳ ಕವಿತೆಗಳು ಅಲ್ಲಿನ ಸಾಹಿತ್ಯಾಸಕ್ತರಿಗೆ ತಿಳಿಯಲಿ ಎಂಬುವುದು ಮುಖ್ಯ ಉದ್ದೇಶವಾಗಿದೆ.

“ಆಧುನಿಕ ನೇಪಾಳಿ ಕವಿತೆಗಳು’ ಪುಸ್ಥಕ ಲೋಕಾರ್ಪಣೆಗಾಗಿ ಎಲ್ಲಾ ಸಿದ್ಧತೆಗಳು ನಡೆದಿದ್ದು ರಾಜ್ಯಪಾಲರ ಸಮಯ ಕೋರಲಾಗಿದೆ.
-ಮನು ಬಳಿಗಾರ್‌, ಕಸಾಪ ಅಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next