Advertisement

ಲಯನ್ಸ್‌ ಬೇಟೆಯಾಡಿದ ಭಾರತ “ಎ’

12:30 AM Feb 16, 2019 | Team Udayavani |

ಮೈಸೂರು: ಪ್ರವಾಸಿ ಇಂಗ್ಲೆಂಡ್‌ ಲಯನ್ಸ್‌ ಎದುರಿನ ದ್ವಿತೀಯ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಕೆ.ಎಲ್‌. ರಾಹುಲ್‌ ನಾಯಕತ್ವದ ಭಾರತ “ಎ’ ಇನ್ನಿಂಗ್ಸ್‌ ಗೆಲುವು ಸಾಧಿಸಿ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ. 

Advertisement

ಮೈಸೂರಿನ “ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯವನ್ನು ಭಾರತ “ಎ’ ತಂಡ ಇನ್ನಿಂಗ್ಸ್‌ ಹಾಗೂ 68 ರನ್ನುಗಳಿಂದ ಗೆದ್ದು ಬಂದಿತು. ಫಾಲೋಆನ್‌ಗೆ ತುತ್ತಾದ ಇಂಗ್ಲೆಂಡ್‌ ಲಯನ್ಸ್‌ ದ್ವಿತೀಯ ಸರದಿಯಲ್ಲೂ ಕುಸಿತ ಅನುಭವಿಸಿ 180 ರನ್ನಿಗೆ ಆಲೌಟ್‌ ಆಯಿತು. ವಯನಾಡ್‌ನ‌ಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳ ಹೋರಾಟದ ಪ್ರಯತ್ನದಿಂದ ಡ್ರಾಗೊಂಡಿತ್ತು. ಆದರೆ ಮೈಸೂರಿನಲ್ಲಿ ಪ್ರವಾಸಿಗರಿಂದ ಯಾವುದೇ ಮ್ಯಾಜಿಕ್‌ ನಡೆಯಲಿಲ್ಲ.

2ನೇ ದಿನದಾಟದಲ್ಲಿ 17 ವಿಕೆಟ್‌ ಪತನಗೊಂಡಾಗಲೇ ಇಲ್ಲಿ ಬ್ಯಾಟ್ಸ್‌ಮನ್‌ಗಳ ಆಟ ನಡೆಯದು ಎಂಬ ಸೂಚನೆ ಲಭಿಸಿತ್ತು. ಹೀಗಾಗಿ ಇನ್ನೊಂದು ದಿನದ ಆಟ ಬಾಕಿ ಇರುವಾಗಲೇ ಪಂದ್ಯ ಮುಗಿದದ್ದು ಅಚ್ಚರಿಯೇನೂ ಅಲ್ಲ. ಇದಕ್ಕೂ ಮೊದಲು ನಡೆದ ಏಕದಿನ ಸರಣಿಯನ್ನು ಭಾರತ 4-1 ಅಂತರದಿಂದ ವಶಪಡಿಸಿಕೊಂಡಿತ್ತು.

ಮಾರ್ಕಂಡೆ ಮೋಡಿ
ಲೆಗ್‌ಸ್ಪಿನ್ನರ್‌ ಮಾಯಾಂಕ್‌ ಮಾರ್ಕಂಡೆ ಇಂಗ್ಲೆಂಡ್‌ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ವಿಕೆಟ್‌ ಕೀಳಲು ವಿಫ‌ಲರಾಗಿದ್ದ ಮಾರ್ಕಂಡೆ ದ್ವಿತೀಯ ಸರದಿಯಲ್ಲಿ 31ಕ್ಕೆ 5 ವಿಕೆಟ್‌ ಉಡಾಯಿಸಿದರು. ಜಲಜ್‌ ಸಕ್ಸೇನಾ 2 ವಿಕೆಟ್‌, ನವದೀಪ್‌ ಸೈನಿ, ಶಾಬಾಜ್‌ ನದೀಂ ಮತ್ತು ವರುಣ್‌ ಆರೋನ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಇಂಗ್ಲೆಂಡ್‌ ಲಯನ್ಸ್‌ ತಂಡದ ದ್ವಿತೀಯ ಸರದಿಯಲ್ಲಿ ಬ್ಯಾಟಿಂಗ್‌ ಹೋರಾಟ ಪ್ರದರ್ಶಿಸಿದವರು ಆರಂಭಕಾರ ಬೆನ್‌ ಡಕೆಟ್‌ (50) ಮತ್ತು ಲೆವಿಸ್‌ ಗ್ರೆಗರಿ (44) ಮಾತ್ರ.

ಸಂಕ್ಷಿಪ್ತ ಸ್ಕೋರ್‌: ಭಾರತ “ಎ’-392. ಇಂಗ್ಲೆಂಡ್‌ ಲಯನ್ಸ್‌-144 ಮತ್ತು 180 (ಡಕೆಟ್‌ 50, ಗ್ರೆಗರಿ 44, ಬಿಲ್ಲಿಂಗ್ಸ್‌ 20, ಮಾರ್ಕಂಡೆ 31ಕ್ಕೆ 5, ಸಕ್ಸೇನಾ 40ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next