ನವದೆಹಲಿ: ಈ ಹಿಂದೆ ಆಧಾರ್ ಜತೆಗೆ ಪ್ಯಾನ್ ಸಂಖ್ಯೆಯನ್ನು ಜೋಡಿಸುವ ಗಡುವನ್ನು ಕೇಂದ್ರ ಸರ್ಕಾರ ಮಾರ್ಚ್ 3ರವರೆಗೆ ವಿಸ್ತರಿಸಿತ್ತು. ಆದರೆ ಇದೀಗ ನೌಕರರ ಭವಿಷ್ಯ ನಿಧಿ ಸಂಸ್ಥೆಯು ಆಧಾರ್ ಮತ್ತು ಪ್ಯಾನ್ ಸಂಖ್ಯೆ ಜೋಡಿಸುವ ನೂತನ ನಿಯಮವನ್ನು ಜೂನ್ 1ರಿಂದ ಕಡ್ಡಾಯವಾಗಿ ಮಾಡುವಂತೆ ಸೂಚನೆ ನೀಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:‘ಮೇಡಂ ನಿಮ್ಮ ಮದುವೆ ಯಾವಾಗ?’ ಸ್ಯಾಂಡಲ್ವುಡ್ ಪದ್ಮಾವತಿಗೆ ಅಭಿಮಾನಿಗಳ ಪ್ರಶ್ನೆ
ಒಂದು ವೇಳೆ ಪಿಎಫ್ ಖಾತೆದಾರರು ಪ್ಯಾನ್ ಸಂಖ್ಯೆಯನ್ನು ಜೋಡಿಸಲು ವಿಫಲರಾದರೆ ಇದರಿಂದ ಭಾರೀ ಪ್ರಮಾಣದ ಆರ್ಥಿಕ ನಷ್ಟ ಎದುರಿಸುವಂತಾಗಲಿದೆ ಎಂದು ಹೇಳಿದೆ.
ನೂತನ ಇಪಿಎಫ್ ಒ ನಿಯಮದ ಪ್ರಕಾರ, ಪ್ರತಿಯೊಬ್ಬ ಪಿಎಫ್ ಖಾತೆದಾರ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸಬೇಕು. ಪ್ರತಿಯೊಬ್ಬ ನೌಕರನು ತನ್ನ ಪಿಎಫ್ ಖಾತೆಯನ್ನು ಪರಿಶೀಲಿಸುವುದು ಹೊಣೆಗಾರಿಕೆಯಾಗಿದೆ. ಒಂದು ವೇಳೆ ಜೂನ್ 1ರಿಂದ ನೌಕರರು ಆಧಾರ್ ಲಿಂಕ್ ಮಾಡುವುದನ್ನು ನಿರ್ಲಕ್ಷಿಸಿದರೆ ಇದರಿಂದ ಹಲವು ನಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಯಾಕೆಂದರೆ ಪಿಎಫ್ ಖಾತೆಗೆ ಸಂಸ್ಥೆ ನೀಡುವ ಕೊಡುಗೆ (ಹಣದ ಪಾಲು) ಜಮೆಯಾಗುವುದನ್ನು ನಿಲ್ಲಿಸಬಹುದು. ಈ ಹಿನ್ನೆಲೆಯಲ್ಲಿ ಇಪಿಎಫ್ ಒ ಅಧಿಸೂಚನೆಯನ್ನು ಹೊರಡಿಸಿದೆ ಎಂದು ತಿಳಿಸಿದೆ.
ಸಾಮಾಜಿಕ ಭದ್ರತಾ ಸಂಹಿತೆ 2020ರ ಸೆಕ್ಷನ್ 142ರ ಅಡಿಯಲ್ಲಿ ಇಪಿಎಫ್ ಒ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಒಂದು ವೇಳೆ ಜೂನ್ 1ರಿಂದ ಪಿಎಫ್ ಖಾತೆಯನ್ನು ಆಧಾರ್ ಗೆ ಲಿಂಕ್ ಮಾಡದಿದ್ದರೆ ಅಥವಾ ಯುಎಎನ್ ಆಧಾರ್ ಅನ್ನು ಪರಿಶೀಲಿಸದಿದ್ದಲ್ಲಿ ಇದರ ಪರಿಣಾಮ ಇಸಿಆರ್ -ಎಲೆಕ್ಟ್ರಾನಿಕ್ ಚಲನ್ ಪಿಎಫ್ ಜಮೆಯಾಗುವುದನ್ನು ತಡೆಯಲಿದೆ ಎಂದು ಹೇಳಿದೆ.
ಅಂದರೆ ಇದರಿಂದ ನೌಕರ ತನ್ನ ಪಾಲಿನ ಪಿಎಫ್ ಖಾತೆಯ ಪಾಲನ್ನು ಮಾತ್ರ ನೋಡಲು ಸಾಧ್ಯವಾಗುತ್ತದೆ. ಆದರೆ ಯಜಮಾನ(ಸಂಸ್ಥೆ/ಕಂಪನಿ)ಯ ಪಾಲಿನ ಹಣ ಖಾತೆಗೆ ಜಮೆಯಾಗುವುದಿಲ್ಲ ಎಂದು ಇಪಿಎಫ್ ಒ ವಿವರಿಸಿದೆ.