Advertisement

ಫೈನಲ್‌ ಪ್ರವೇಶಿಸಿದ ಲಿಂಗಾಯತ ರ್ಯಾಲಿ

12:31 PM Nov 06, 2017 | |

ಹುಬ್ಬಳ್ಳಿ: ಬಸವ ತತ್ವದಡಿ ಸ್ಥಾಪನೆಗೊಂಡು ಇದೀಗ ಬಸವ ಧರ್ಮ ಹೋರಾಟ ವಿರೋಧಿಸುತ್ತಿರುವ ವಿರಕ್ತ ಮಠಾಧೀಶರು ಮುಂದಿನ ರ್ಯಾಲಿಗಳಲ್ಲಿ ಭಾಗವಹಿಸದಿದ್ದರೆ ಅವರ ವಿರುದ್ಧ ರಾಷ್ಟ್ರೀಯ ಬಸವ ಸೇನೆಯಿಂದ ಹೋರಾಟ ಅನಿವಾರ್ಯವಾಗಲಿದೆ ಎಂದು ಸೇನೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಚಿವ ವಿನಯ ಕುಲಕರ್ಣಿ ಗುಡುಗಿದರು. 

Advertisement

ಹುಬ್ಬಳ್ಳಿಯಲ್ಲಿ ನಡೆದ ಪ್ರತ್ಯೇಕ ಧರ್ಮ ರ್ಯಾಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮದು ಯಾವುದೇ ಧರ್ಮ, ಪಕ್ಷ, ಜಾತಿ ವಿರುದ್ಧದ ಹೋರಾಟವಲ್ಲ. ಬದಲಾಗಿ ಸ್ವತಂತ್ರ ಧರ್ಮ ಮಾನ್ಯತೆ ಬೇಡಿಕೆಯಾಗಿದೆ. ಲಿಂಗಾಯತ ಸಮಾಜ ದೇಶಕ್ಕೆ ಅನ್ನ ಹಾಕುವ ಸಮಾಜವಾಗಿದೆ. ಸಮಾಜದ ಯುವಕರಿಗೆ ಉದ್ಯೋಗ ಇನ್ನಿತರ ಸೌಲಭ್ಯಗಳು ಇಲ್ಲವಾಗಿದ್ದು,

ಈ ಕಾರಣಕ್ಕೆ ಹೋರಾಟಕ್ಕಿಳಿದಿದ್ದೇವೆ. ಬಸವಣ್ಣವರ ಹೆಸರೇಳಿಕೊಂಡು ಮಠಾಧೀಶರಾದವರು ಲಿಂಗಾಯತ ಧರ್ಮ ಹೋರಾಟಕ್ಕೆ ವಿರೋಧಿಸುವ ಅಥವಾ ಪಾಲ್ಗೊಳ್ಳದಿರುವವರಿಗೆ ಕಡಿವಾಣ ಹಾಕುತ್ತೇವೆ. ಅವರು ಮುಂದಿನ ರ್ಯಾಲಿಗಳಲ್ಲಿ ಭಾಗವಹಿಸದಿದ್ದರೆ ಅವರ ವಿರುದ್ಧ ಹೋರಾಟಕ್ಕಿಳಿಯುತ್ತೇವೆ. ಮಠ ಖಾಲಿ ಮಾಡಿಸುವುದಕ್ಕೂ ಹಿಂದೇಟು ಹಾಕುವುದಿಲ್ಲ ಎಂದರು.

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ವಿರೋಧಿಸುವವರಿಗೆ ನಾಚಿಕೆಯಾಗಬೇಕು. ಸಮಾಜ ಋಣ ತೀರಿಸುವುದು ನಮ್ಮ ಕರ್ತವ್ಯ. ಇದಕ್ಕಾಗಿ ತಾವು ಯಾವುದೇ ತ್ಯಾಗಕ್ಕೂ ಸಿದ್ಧ. ಕೆಲವರು ಚುನಾವಣೆ ಬರಲಿ ಎಂದು ತಮ್ಮನ್ನು ಬೆದರಿಸುತ್ತಿದ್ದು, ಅದಕ್ಕೂ ಸಿದ್ಧರಾಗಿರುವುದಾಗಿ ಹೇಳಿದರಲ್ಲದೆ, ನಾವು ಜಂಗಮರ ವಿರೋಧಿಗಳಲ್ಲ.

ಲಿಂಗಾಯತ ಸ್ವತಂತ್ರ ಧರ್ಮದ ಸೌಲಭ್ಯಗಳಲ್ಲಿ ಅವರು ಪಾಲು ಪಡೆಯುತ್ತಾರೆ ಎಂಬುದನ್ನು ಅವರು ಅರಿಯಲಿ. ರಾಷ್ಟ್ರೀಯ ಬಸವಸೇನೆ ಹಳ್ಳಿ ಹಳ್ಳಿಗಳಲ್ಲಿ ಶಾಖೆ ತೆರೆಯಲಿದ್ದು, ಧರ್ಮ ಹಾಗೂ ದೇಶ ರಕ್ಷಣೆಗೆ ತೊಡಗಿಸಿಕೊಳ್ಳಲಿದೆ ಎಂದರು. ತಡವಾಗಿ ಬುದ್ಧಿ ಬಂದಿದೆ: ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಇದು ಲಿಂಗಾಯತ ಸಮಾಜದ ಬದುಕಿನ ಪ್ರಶ್ನೆ.

Advertisement

ಇಲ್ಲಿಯವರೆಗೆ ಕತ್ತಲಲ್ಲಿದ್ದ ನಮಗೆ ಸತ್ಯದ ಅರಿವಾಗಿದೆ. ತಡವಾಗಿ ಬುದ್ಧಿ ಬಂದಿದೆ ಎಂದರೂ ತಪ್ಪಲ್ಲ. ಬುದ್ಧಿ ಬಂದ ನಂತರವೂ ಬುದ್ಧಿಗೇಡಿ ಕಾರ್ಯಕ್ಕೆ ತೊಡಗುವ ಜಾಯಮಾನ ನಮ್ಮದಲ್ಲ ಎಂದರು. ಯಾವುದೇ ರಾಜಕೀಯ ಲಾಭಕ್ಕಾಗಿ ನಾವು ಈ ಹೋರಾಟದಲ್ಲಿ ತೊಡಗಿಲ್ಲ. ಸಮಾಜಕ್ಕಾದ ಅನ್ಯಾಯ ಸರಿಪಡಿಸಲು ಮುಂದಾಗಿದ್ದೇವೆ. ಇನ್ಮುಂದೆ ಮೋಸ ಮಾಡುವವರ ಆಟ ನಡೆಯದು.

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಬೆಂಬಲ ನೀಡುವಂತೆ ಕೋರಿ ವೀರಶೈವ ಮಹಾಸಭಾ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಪತ್ರ ಬರೆದಿದ್ದು, ಇನ್ನು ಉತ್ತರ ಬಂದಿಲ್ಲ. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಹಿಂದೂ ಧರ್ಮದ ವಿರುದ್ಧವಲ್ಲ, ಅದಕ್ಕೆ ಧಕ್ಕೆಯೂ ಆಗದು. ವೀರಶೈವ ಮಹಾಸಭಾಕ್ಕೆ ಕೊನೆ ಎಚ್ಚರಿಕೆ ನೀಡಲಾಗುತ್ತಿದ್ದು, ಅವರು ಸ್ಪಂದಿಸದಿದ್ದರೆ ಲಿಂಗಾಯತ ಮಹಾಸಭಾ ರಚನೆ ಅನಿವಾರ್ಯವಾಗಲಿದೆ ಎಂದರು. 

ಮುಖಂಡರಾದ ಅರವಿಂದ ಜತ್ತಿ, ಸದಾನಂದ ಡಂಗನವರ, ಮೋಹನ ಹಿರೇಮನಿ, ರಾಜಶೇಖರ ಮೆಣಸಿನಕಾಯಿ, ರಾಜಣ್ಣ ಕೊರವಿ, ಅನೀಲ ಕುಮಾರ ಪಾಟೀಲ, ಸತೀಶ ಮೆಹರವಾಡೆ, ಸುಭಾಸ ದ್ಯಾಮಕ್ಕನವರ, ಅಜ್ಜಪ್ಪ ಬೆಂಡಿಗೇರಿ, ಎಂ.ಆರ್‌.ಪಾಟೀಲ, ತಾರಾದೇವಿ ವಾಲಿ, ಸಾಹಿತಿಗಳಾದ ವೀರಣ್ಣ ರಾಜೂರು, ರಂಜಾನ್‌ ದರ್ಗಾ, ವಸಂತ ಹೊರಟ್ಟಿ ಇನ್ನಿತರರು ಇದ್ದರು. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಂದ ಲಿಂಗಾಯತ ಪ್ರತಿನಿಧಿಗಳು, ಮಠಾಧೀಶರು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next