Advertisement
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ರಾಜ್ಯ, ಹೊರ ರಾಜ್ಯಗಳಲ್ಲಿ ನಡೆದರೂ ಹೋರಾಟ ತೀವ್ರತೆ ಪಡೆದಿದ್ದು ಮಾತ್ರ ಉತ್ತರ ಕರ್ನಾಟಕದಲ್ಲಿ. ಪರ-ವಿರೋಧ ಹೋರಾಟಗಳು ಸಾಕಷ್ಟು ತೀವ್ರತೆ ಪಡೆದಿದ್ದವು. ಪೈಪೋಟಿಗೆ ಬಿದ್ದಂತೆ ಸಮಾವೇಶದ ಮೇಲೆ ಸಮಾವೇಶ, ಹೇಳಿಕೆ, ಆರೋಪ-ಪ್ರತ್ಯಾರೋಪಗಳು ಕೇಳಿ ಬಂದವು.
Related Articles
Advertisement
ವಿಧಾನಸಭಾ ಚುನಾವಣೆ ನಂತರ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕಾವು ಕಳೆದುಕೊಂಡಿತ್ತು. ರಾಜಕಾರಣಿಗಳು ಹೋರಾಟದಿಂದ ಹಿಂದೆ ಸರಿದರೆ, ಹೋರಾಟದ ಪರವಾಗಿದ್ದ ಸ್ವಾಮೀಜಿಗಳಲ್ಲಿ ಪ್ರಮುಖರಾಗಿದ್ದ ಗದುಗಿನ ತೋಂಟದಾರ್ಯ ಮಠದ ಡಾ| ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯರಾದರು. ಹೋರಾಟದ ಜೀವಂತಿಕೆಗೆ ಯತ್ನಿಸಿದ್ದ ಮಾತೆ ಮಹಾದೇವಿಯವರು ಲಿಂಗೈಕ್ಯರಾಗಿದ್ದು ಹೋರಾಟಕ್ಕೆ ದೊಡ್ಡ ಪೆಟ್ಟು ಕೊಟ್ಟಿತು.
ತಣ್ಣಗಾದ ಮಹದಾಯಿ: ಅದೇ ರೀತಿ, ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಹದಾಯಿ ಹೋರಾಟ ಈ ಭಾಗದಲ್ಲಿ ತನ್ನದೇ ಆದ ಪ್ರಭಾವ ಬೀರಿತ್ತು. ವಿಶೇಷವಾಗಿ ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ನರಗುಂದ ಹಾಗೂ ನವಲಗುಂದದಲ್ಲಿ ಸತತ ಮೂರು ವರ್ಷಗಳವರೆಗೆ ಹೋರಾಟ ಜೀವಂತಿಕೆ ಪಡೆದುಕೊಂಡಿತ್ತು. ವಿಧಾನಸಭಾ ಚುನಾವಣೆ ವೇಳೆ ಹಲವು ರಾಜಕಾರಣಿಗಳಿಗೆ ಆತಂಕ ಮೂಡಿಸುವ ಹಂತಕ್ಕೆ ಹೋರಾಟದ ಧ್ವನಿ ಮೊಳಗತೊಡಗಿತ್ತು.
ದಿನ ಕಳೆದಂತೆ ಹೋರಾಟದಲ್ಲೇ ಭಿನ್ನ ಧ್ವನಿ ಕಾಣಿಸಿಕೊಂಡಿತು. ಹೋರಾಟಗಾರರಲ್ಲೇ ಪರಸ್ಪರ ಅಪನಂಬಿಕೆ, ಆರೋಪ-ಪ್ರತ್ಯಾರೋಪ, ತಾವು ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ, ವ್ಯಕ್ತಿ ಪ್ರತಿಷ್ಠೆ ಎಲ್ಲದರ ಫಲವಾಗಿ ಮಹದಾಯಿ ಹೋರಾಟ ಕಳೆಗುಂದಿತು. ಮಹದಾಯಿ ಬಗ್ಗೆ ನಮ್ಮ ಸಂಸದರು ಲೋಕಸಭೆಯಲ್ಲಿ ಸಂಘಟಿತ ಧ್ವನಿ ತೋರಲಿಲ್ಲ.
ನಮ್ಮ ಪರವಾಗಿ ಧ್ವನಿ ಎತ್ತಿ, ಪ್ರಧಾನಿ ಮಧ್ಯಪ್ರವೇಶಕ್ಕೆ ಯತ್ನಿಸಲಿಲ್ಲ ಎಂಬುದು ಹೋರಾಟಗಾರರ ಬಹುದೊಡ್ಡ ಆಕ್ಷೇಪ, ಆರೋಪವಾಗಿತ್ತು. ಇದೀಗ ಸಂಸದರ ಆಯ್ಕೆಯ ಲೋಕಸಭಾ ಚುನಾವಣೆ ಬಂದಿದೆ. ಈ ವೇಳೆ, ಹೋರಾಟದ ಧ್ವನಿ ಗಟ್ಟಿಯಾಗಿ ಮೊಳಗಬೇಕಾಗಿತ್ತು. ಆದರೆ, ಹೋರಾಟ ಎಲ್ಲೋ ಮುಳುಗಿದಂತೆ ತೋರುತ್ತಿದೆ. ಯಾವ ರಾಜಕೀಯ ಪಕ್ಷವೂ ಈ ವಿಚಾರವನ್ನು ಪ್ರಸ್ತಾಪಿಸುತ್ತಿಲ್ಲ.
ವಿಧಾನಸಭಾ ಚುನಾವಣೆ ಕಳೆದು ವರ್ಷದೊಳಗೆ ಎದುರಾದ ಲೋಕಸಭಾ ಚುನಾವಣೆಗೆ ಈ ಎರಡೂ ಚಳವಳಿಗಳು ಎಲ್ಲಿವೆ ಎಂದು ಹುಡುಕಾಡುವ ರೀತಿಯಲ್ಲಿ ಹೋರಾಟದ ಧ್ವನಿ ಮೌನಕ್ಕೆ ಜಾರಿದೆ.
* ಅಮರೇಗೌಡ ಗೋನವಾರ