ಲಿಂಗಸುಗೂರು: ಜಿಲ್ಲೆಯಲ್ಲಿಯೇ ಅತೀ ದೊಡ್ಡ ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಪಟ್ಟಣದಲ್ಲಿ ಈ ಹಿಂದೆ ಇದ್ದ ಹಳೆಯ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಹೊಸದಾಗಿ ಬಸ್ ನಿಲ್ದಾಣ ನಿರ್ಮಿಸಿ ನಾಲ್ಕೈದು ತಿಂಗಳ ಹಿಂದೆ ಉದ್ಘಾಟಿಸಲಾಗಿದೆ.
ಉದ್ಘಾಟನೆಗೊಂಡು ಕೆಲವು ತಿಂಗಳಲ್ಲಿ ಅವ್ಯವಸ್ಥೆಗಳ ತಾಣವಾಗಿದೆ. ಬಸ್ ನಿಲ್ದಾಣದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆಯಾದರೂ ಮತ್ತಷ್ಟು ಆಸನಗಳ ವ್ಯವಸ್ಥೆ ಅಗತ್ಯವಿದೆ. ಆಸನಗಳ ಕೊರತೆ ಇರುವುದರಿಂದ ಪ್ರಯಾಣಿಕರು ಪ್ಲಾಟ್‌ಫಾರಂ, ನೆಲದ ಮೇಲೆ ಕುಳಿತುಕೊಂಡು ಬಸ್‌ಗಾಗಿ ಕಾಯುವಂತಾಗಿದೆ.
ಈ ಬಸ್ ನಿಲ್ದಾಣದಲ್ಲಿ ಕರೆಂಟ್ ಹೋದರಂತೂ ಕತ್ತಲಲ್ಲೇ ಕಾಲ ಕಳೆಯುವಂತಾಗುತ್ತದೆ. ಜನರೇಟರ್ ಅಥವಾ ಸೋಲಾರ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಪ್ರಯಾಣಿಕರು ಭಯದಲ್ಲೇ ಕಳೆಯಬೇಕಿದೆ. ಪ್ರಯಾಣಿಕರ ಸುರಕ್ಷೆಗಾಗಿ ಜನರೇಟರ್ ವ್ಯವಸ್ಥೆ ಮಾಡಬೇಕಿದೆ. ನಿಲ್ದಾಣದಲ್ಲಿ ಪೊಲೀಸ್ ಚೌಕಿ ನಿರ್ಮಿಸುವುದು ಅಗತ್ಯವಾಗಿದೆ.
ಶುದ್ಧ ನೀರೇ ಇಲ್ಲ: ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಶುದ್ಧ ಕುಡಿವ ನೀರಿನ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ನಿಲ್ದಾಣದಲ್ಲಿರುವ ಅಂಗಡಿಗಳಲ್ಲಿ ದುಡ್ಡು ಕೊಟ್ಟು ನೀರು ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ದುರ್ನಾತ: ಬಸ್ ನಿಲ್ದಾಣ ಹೊಸತಾಗಿದ್ದರೂ ಶೌಚಾಲಯ ಮಾತ್ರ ಹಳೆಯದಾಗಿದೆ. ಅದು ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿದೆ. ಹೀಗಾಗಿ ಪ್ರಯಾಣಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ನಿಲ್ದಾಣದಲ್ಲಿ ದುರ್ನಾತ ಬೀರುತ್ತಿದೆ. ನಿಲ್ದಾಣ ಕಾಮಗಾರಿ ಸಮಯದಲ್ಲಿ ಹಾಕಲಾಗಿದ್ದ ತಾತ್ಕಾಲಿಕ ಶೆಡ್ ಇನ್ನೂ ತೆಗೆದಿಲ್ಲ. ಇದರಿಂದ ಅಲ್ಲಿ ಸಾಕಷ್ಟು ಕಸ ಕಡ್ಡಿಗಳು ಸಂಗ್ರಹವಾಗಿ ಅದು ಹಂದಿಗಳ ತಾಣವಾಗಿದೆ.
ಬಸ್ ನಿಲ್ದಾಣದಲ್ಲಿ ಜನರೇಟರ್ ವ್ಯವಸ್ಥೆಗಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ನಿಲ್ದಾಣದಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ. ನೀರಿನ ಪೂರೈಕೆ ಹಾಗೂ ಸ್ವತ್ಛತೆಗೆ ಹೆಚ್ಚು ಗಮನ ಹರಿಸಲಾಗುವುದು.
ರಾಹುಲ್ ಎಂ, ವ್ಯವಸ್ಥಾಪಕರು,
ಸಾರಿಗೆ ಘಟಕ ಲಿಂಗಸುಗೂರು.
ಶಿವರಾಜ ಕೆಂಭಾವಿ