Advertisement

ಹುಳಿಯಾರು: ಲಿಂಗಪ್ಪನಪಾಳ್ಯಕ್ಕೆ ಮೂಲಸೌಕರ್ಯ ಕಲ್ಪಿಸಿ

04:27 PM Jan 20, 2021 | Team Udayavani |

ಹುಳಿಯಾರು: ಪಪಂ ವ್ಯಾಪ್ತಿಯ ಲಿಂಗಪ್ಪನಪಾಳ್ಯ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಸುಮಾರು 200 ಮನೆಗಳಿರುವ ಗ್ರಾಮದಲ್ಲಿ 650ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ರಸ್ತೆ, ನೀರು, ಬೀದಿ ದೀಪ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಇಲ್ಲಿದೆ. ಪಪಂ ವ್ಯಾಪ್ತಿಗೆ ಒಳಪಟ್ಟರೂ ಅಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ
ಸ್ಥಳೀಯರಿಗೆ ತೊಂದರೆಯಾಗಿದೆ.

Advertisement

ಇಡೀ ಗ್ರಾಮದಲ್ಲಿ ಮಾಡಿದ 2 ಸಿಮೆಂಟ್‌ ರಸ್ತೆಗಳು ಬಿಟ್ಟರೆ ಉಳಿದ ಕಡೆಯ ಕಲ್ಲುಮಣ್ಣಿನ ರಸ್ತೆಗಳಿವೆ. ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದೆ ತ್ಯಾಜ್ಯ ನೀರು ಅಲ್ಲಲ್ಲಿ ನಿಂತಿದ್ದು, ಅನೈರ್ಮಲ್ಯಕ್ಕೆ ಕಾರಣವಾಗಿದೆ. ರಸ್ತೆಗೆ ಕೊಳಚೆ ನೀರು ಹರಿಯುತ್ತಿದ್ದರೂ ಪಪಂ ಸಿಬ್ಬಂದಿ ಸ್ವತ್ಛ ಮಾಡದ ಪರಿಣಾಮ ಮೂಗು ಮುಚ್ಚಿಕೊಂಡು ಜನ ಓಡಾಡುವಂತ್ತಾಗಿದೆ ಎಂದು ಗ್ರಾಮಸ್ಥರದೂರಿದ್ದಾರೆ.

ನೀರಿಗೆ ತತ್ವಾರ: ಶುದ್ಧ ಕುಡಿವ ನೀರಿನ ಘಟಕ ನಿರ್ಮಿಸಲು ದಶಕಗಳಿಂದ ಮನವಿ ಮಾಡಿದರೂ ಸ್ಪಂದಿಸದ ಪರಿಣಾಮ ಎರಡು ಮೂರು ಕಿ.ಮೀ. ದೂರ ಕ್ರಮಿಸಿ ಶುದ್ಧ ನೀರು ತರಬೇಕಿದೆ. ಅಲ್ಲದೆ ಗ್ರಾಪಂನಿಂದ ಅಸಮರ್ಪಕವಾಗಿ ನೀರು
ಪೂರೈಸುತ್ತಿರುವುದರಿಂದ ನಿತ್ಯವೂ ಅವರಿವರ ಜಮೀನಿನ ಕೊಳವೆ ಬಾವಿಯಲ್ಲಿ ಬೇಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲನ್ನು ತೋಡಿಕೊಂಡರು.

ಇದನ್ನೂ ಓದಿ:ಹೆದ್ದಾರಿ ಕಾಮಗಾರಿಗೆ ಕಲ್ಲುಸ್ಫೋಟ : ರಸ್ತೆ ಅಕ್ಕಪಕ್ಕದ ಮನೆಗಳ ಗೋಡೆಗಳು ಬಿರುಕು, ಆಕ್ರೋಶ

ಹುಳಿಯಾರು ಪಟ್ಟಣದ ಸಮೀಪದಲ್ಲಿರುವ ಹಿಂದುಳಿದ ವರ್ಗದವರು, ರೈತಾಪಿ ವರ್ಗದವರು, ಕೂಲಿ ಕಾರ್ಮಿಕರು ವಾಸಿಸುತ್ತಿರುವ ಈ ಗ್ರಾಮದ ಸಮಸ್ಯೆಗೆ ಜನಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ. ಚುನಾವಣೆ ವೇಳೆ ಆಶ್ವಾಸನೆ ನೀಡಲು ಮಾತ್ರ
ರಾಜಕಾರಣಿಗಳು ಬರುತ್ತಾರೆ. ಚುನಾವಣೆಯಲ್ಲಿ ಗೆದ್ದ ತರವಾಯ ಇತ್ತ ತಿರುಗಿಯೂ ನೋಡುವುದಿಲ್ಲ ಎಂದು ಜನರು ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next