ಮೂಡುಬಿದಿರೆ: ಸ್ವಂತಕ್ಕೆ ಕೃಷಿ ಭೂಮಿ ಇಲ್ಲದಿದ್ದರೂ ಕಲ್ಲಬೆಟ್ಟು ಗ್ರಾಮದ ನೂಯಿಯಲ್ಲಿ ಎರವಲು ಭೂಮಿ ಪಡೆದು ಭತ್ತದ ಸಾಗುವಳಿ ಮಾಡುತ್ತಿರುವ ಲಿಂಗಪ್ಪ ಗೌಡರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ವತಿಯಿಂದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆಯ ಸಹಕಾರ ಲಭಿಸಿದೆ.
ಉಡುಪಿ ಪ್ರಾದೇಶಿಕ ಬಿ.ಎಚ್.ಸಿ. ಕೇಂದ್ರದ ಸಮನ್ವಯಾಧಿಕಾರಿ ಅಶೋಕ್ ಅವರು ಶನಿವಾರ ಹೊಲಕ್ಕೆ ಆಗಮಿಸಿ ಯಾಂತ್ರೀಕೃತ ಭತ್ತ ನಾಟಿಯ ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ನಡೆಸಿದರು. ಭತ್ತದ ಕೃಷಿಯ ಬಗ್ಗೆ ಅಲಕ್ಷ ತೋರಿದರೆ ಮುಂದಿನ ದಿನಗಳಲ್ಲಿ ಆಹಾರದ ಅಭಾವ ಎದುರಿಸಬೇಕಾದೀತು. ಕೋವಿಡ್-19 ಕಾರಣ ಮತ್ತೆ ಊರು ಸೇರುತ್ತಿರುವ ಯುವಕರೂ ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಎಸ್‌ಕೆಡಿಆರ್‌ಡಿಪಿಯ ಮೂಡು ಬಿದಿರೆ ತಾಲೂಕಿನ ಯೋಜನಾಧಿಕಾರಿ ನಾರಾಯಣ ಶೆಟ್ಟಿ ಅವರು ಕೋವಿಡ್-19 ತಡೆ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಬಳಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿ ಸ್ಥಳದಲ್ಲಿದ್ದವರಿಗೆ ಮಾಸ್ಕ್ ಗಳನ್ನು ವಿತರಿಸಿದರು.
ಲಿಂಗಪ್ಪ ಗೌಡ ಅವರು 30 ಕೆಜಿ ಕಜೆ ಜಯ ಬೀಜ ಬಳಸಿ 250 ಟ್ರೇಗಳಲ್ಲಿ ಸಿದ್ಧಪಡಿಸಿದ “ಚಾಪೆ ನೇಜಿ’ಯನ್ನು 4 ಎಕ್ರೆ ಹೊಲದಲ್ಲಿ ಯಾಂತ್ರೀಕೃತವಾಗಿ ನಾಟಿ ಮಾಡಲಾಯಿತು.
ಯೋಜನೆಯ ವಲಯಾಧ್ಯಕ್ಷ ಸತೀಶ್ ಕೋಟ್ಯಾನ್, ಕಲ್ಲಬೆಟ್ಟು ಒಕ್ಕೂಟದ ನಿಯೋಜಿತ ಅಧ್ಯಕ್ಷ ಶಶಿಕಿರಣ್, ಬಂಟ್ವಾಳ ತಾಲೂಕು ಬಿಎಚ್‌ಸಿ ಪ್ರಬಂಧಕ ಸಂದೇಶ್, ಅಜೆಕಾರಿನ ಕೃಷಿ ಮೇಲ್ವಿಚಾರಕಿ ಶೋಭಾ, ಯೋಜನೆಯ ಸದಸ್ಯೆ ಪ್ರೇಮಶ್ರೀ ಮೊದಲಾದವರು ಉಪಸ್ಥಿತರಿದ್ದರು.ವಲಯ ಮೇಲ್ವಿಚಾರಕಿ ಭಾರತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.