Advertisement

Linganamakki Reservoir; ವಿದ್ಯುತ್ ಉತ್ಪಾದನೆಗೆ ಸಂಕಷ್ಟ

08:44 AM Jul 02, 2023 | Shreeram Nayak |

ಸಾಗರ: ನಾಡಿಗೆ ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸುತ್ತಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಮಳೆಯ ಕೊರತೆಯ ಹಿನ್ನೆಲೆಯಲ್ಲಿ ನೀರಿನ ಸಂಗ್ರಹ ತೀವ್ರ ಪ್ರಮಾಣ ಇಳಿಕೆಯಾಗಿದೆ. ಈಗಿರುವ ನೀರಿನ ಪ್ರಮಾಣದಲ್ಲಿ ಮುಂದಿನ 20 ದಿನಗಳ ಕಾಲ ಮಾತ್ರ ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಕೆಪಿಸಿ ಮೂಲಗಳು ತಿಳಿಸಿವೆ.

Advertisement

ಈ ಕುರಿತು ಮಾಹಿತಿ ನೀಡಿರುವ ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ನಾರಾಯಣ ಗಜಕೋಶ್, ಸಮುದ್ರ ಮಟ್ಟದಿಂದ 1819 ಅಡಿ ಗರಿಷ್ಠ ಮಟ್ಟದವರೆಗೆ ನೀರಿನ ಸಂಗ್ರಹ ಸಾಮರ್ಥ್ಯವಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ತುತ 1740.35 ಅಡಿ ನೀರಿನ ಸಂಗ್ರಹವಿದೆ. ಗರಿಷ್ಠ ಮಟ್ಟವನ್ನು ತಲುಪಲು 79 ಅಡಿ ನೀರಿನ ಸಂಗ್ರಹದ ಅಗತ್ಯ ಇದೆ. ಕಳೆದ ಸಾಲಿನ ಇದೇ ದಿನದಂದು ಸರಿಸುಮಾರು 14 ಅಡಿ ನೀರು ಜಾಸ್ತಿಯಿತ್ತು. ಆಗ 1754.64 ಅಡಿ ನೀರಿನ ಸಂಗ್ರಹವಿತ್ತು. ಇವತ್ತಿನ ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಂಡರೆ 10 ವರ್ಷಗಳಲ್ಲಿ ಅತಿ ಕಡಿಮೆ ನೀರಿನ ಸಂಗ್ರಹ ಇದೆ ಎನ್ನಬಹುದು ಎಂದು ಅವರು ತಿಳಿಸಿದರು.

ಈಗ ಜಲಾಶಯದ ಸ್ಲ್ಯೂಸ್ ಗೇಟ್ ಮೂಲಕ 1,356 ಕ್ಯುಸೆಕ್ ನೀರು ಹೊರಹಾಯುತ್ತಿದ್ದು, ಈ ನೀರಿನಿಂದ ಶರಾವತಿ ಜಲವಿದ್ಯುದಾಗರದಲ್ಲಿ 4 ದಶಲಕ್ಷ ಯೂನಿಟ್, ಮಹಾತ್ಮ ಗಾಂಧಿ ಮತ್ತು ಗೇರುಸೊಪ್ಪ ಜಲವಿದ್ಯುದಾಗರದಲ್ಲಿ ತಲಾ 1 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಶರಾವತಿ ಜಲಾನಯ ಪ್ರದೇಶವಾದ ಕಾರ್ಗಲ್ ಹಾಗೂ ಹೊಸನಗರ ಭಾಗಗಳಲ್ಲಿ ವ್ಯಾಪಕ ಮಳೆಯಾಗಿ ಜಲಾಶಯಕ್ಕೆ ನೀರಿನ ಹರಿವು ಜಾಸ್ತಿಯಾದರೆ ವಿದ್ಯುತ್ ಉತ್ಪಾದನೆ ಮುಂದುವರೆಯಲಿದೆ. ಒಂದೊಮ್ಮೆ ಮಲೆನಾಡಿನಲ್ಲಿ ಮಳೆ ಕೈಕೊಟ್ಟರೆ ಕೆಪಿಸಿ ಇತಿಹಾಸದಲ್ಲಿ ವಿದ್ಯುತ್ ಉತ್ಪಾದನೆಯೇ ನಿಂತ ಆತಂಕದ ಇತಿಹಾಸ ನಿರ್ಮಾಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next