ಬೆಂಗಳೂರು: “ಹೆಣ್ಣಿನ ಅಂತರಾಳದ ಹಲವು ವಿಷಯ ಯಾರಿಗೂ ಅರ್ಥವಾಗುವುದಿಲ್ಲ. ನಾನಂತೂ ಹೊರ ಮತ್ತು ಒಳಪ್ರಪಂಚದಲ್ಲಿ ತುಂಬಾ ನೋವು ಅನುಭವಿಸಿದ್ದೇನೆ’ ಇದು ಹಿರಿಯ ನಟಿ ಲೀಲಾವತಿ ಅವರ ಮನದ ಮಾತುಗಳು.
ಕಸಾಪ, ಲೇಖಕಿಯರ ಸಂಘವು ಪರಿಷತ್‌ನಲ್ಲಿ ಆಯೋಜಿಸಿದ್ದ “ಸಾಧಕರೊಡನೆ ಸಂವಾದ’ದಲ್ಲಿ ಮಾತನಾಡಿದ ನಟಿ ಲೀಲಾವತಿ ತಮ್ಮ ಜೀವನದ ಸಿಹಿ ಕಹಿ ಅನುಭವಗಳನ್ನು ಬಿಡಿಸಿಟ್ಟರು. “ಅನಾರೋಗ್ಯಕ್ಕೊಳಗಾಗಿ ನಾನು ಆಸ್ಪತ್ರೆ ಸೇರಿದಾಗ ಯಾರೂ ನೋಡಲು ಬರಲಿಲ್ಲ. ಹೊರಗಿಂದಲೇ ಅಯ್ಯೋ ಪಾಪ ಎಂದರು.
ಪಾತ್ರಕ್ಕಾಗಿ ನಿರ್ಮಾಪಕರ ಮನೆ ಅಲೆದೆ. ತಾಯಿ ಪಾತ್ರವಲ್ಲ ನಾಯಿ ಪಾತ್ರವನ್ನಾದರೂ ಕೊಡಿ ಎಂದು ಅಂಗಲಾಚಿದ್ದೆ,’ ಎಂದು ನೊಂದು ನುಡಿದರು. “ನನ್ನ ಬಾಲ್ಯ ಎಲ್ಲರಂತೆ ಸಂತೋಷವಾಗಿರಲಿಲ್ಲ. ಅದೆಷ್ಟೋ ರಾತ್ರಿ ಗಂಜಿ ಕುಡಿದು ಮಲಗಿದ್ದುಂಟು. ಸಿನಿಮಾ ರಂಗಕ್ಕೆ ಸೇರಿದರೆ ಕೈ ತುಂಬ ಹಣ ಬರುತ್ತದೆ ಎಂದು ಯಾರೋ ಹೇಳಿದ ನಂತರ ಸುಬ್ಬಯ್ಯ ನಾಯ್ಡು ಕಂಪನಿ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದೆ,” ಎಂದು ವೃತ್ತಿ ರಂಗದ ಪ್ರವೇಶದ ಬಗ್ಗೆ ಮೆಲುಕು ಹಾಕಿದರು.
“ಕಳ್ಳತನ ಮಾಡಿದರೆ ಶಿಕ್ಷೆ ನೀಡಲಾಗುತ್ತದೆ ಎಂಬ ಸಂದೇಶ ಸಾರುತ್ತಿದ್ದ ಚಿತ್ರರಂಗ, ಇಂದು ಕಳ್ಳತನ ಮಾಡುವುದು ಹೇಗೆ ಎನ್ನುವುದನ್ನು ಚಿತ್ರಗಳ ಮೂಲಕ ತೋರಿಸುತ್ತಿದೆ. ಇಂದಿನ ಚಿತ್ರಗಳಲ್ಲಿ ಕಲಾವಿದರ ವಸ್ತ್ರವಿನ್ಯಾಸವೇ ಆಕ್ಷೇಪಾರ್ಹವಾಗಿದೆ,’ ಎಂದು ಚಿತ್ರರಂಗದ ದಿಕ್ಕಿನ ಬಗ್ಗೆ ಆಕ್ಷೇಪಿಸಿದರು. ಕೃಷಿ ಜೀವನದ ದಾರಿ: “ಬಾಳ ದಾರಿಯಲ್ಲಿ ಕಷ್ಟಗಳ ಸರಮಾಲೆ ನೋಡುತ್ತಾ ಬಂದ ನಾನು ನೆಮ್ಮದಿ, ಮನಸ್ಸಿನ ನೋವು ಮರೆಯಲು ಕೃಷಿ ಆಯ್ದುಕೊಂಡೆ.
ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಮಗನೊಂದಿಗೆ ಕೃಷಿ ಚಟುವಟಿಕೆ ಆರಂಭಿಸಿದೆ. ಇದನ್ನೂ ಸಹಿಸದವರು ತೋಟಕ್ಕೆ ಐದು ಬಾರಿ ಬೆಂಕಿಯಿಟ್ಟರು,’ ಎಂದು ಬೇಸರಪಟ್ಟರು. ಮಗ ಸಿನಿಮಾ ರಂಗ ಪ್ರವೇಶ ಮಾಡುವುದು ಸ್ವಲ್ಪವೂ ಇಷ್ಟ ಇರಲಿಲ್ಲ. ವಿನೋದ್ ಬೇಡವೆಂದರೂ ಚಿತ್ರರಂಗ ಪ್ರವೇಶಿಸಿದ. ಅವನನ್ನು ಕೃಷಿಕನಾಗಿ, ಹಾಡುಗಾರನಾಗಿ ನೋಡಬಯಸುತ್ತೇನೆ. ಅವನು ನಿತ್ಯ ಮ್ಯೂಸಿಕ್ ಹಾಕಿಕೊಂಡು ವ್ಯಾಯಾಮ ಮಾಡುವಾಗ ಅವನ ಜತೆಗೆ ನಾನೂ ಹೆಜ್ಜೆ ಹಾಕುವುದುಂಟು ಹೇಳಿದರು.