ಆಲಂಕಾರು: ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಏಣಿತಡ್ಕದಲ್ಲಿ ಶಾಸಕರ ಅನುದಾನದಿಂದ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸುಳ್ಯ ಶಾಸಕ ಎಸ್. ಅಂಗಾರ ವೀಕ್ಷಣೆ ಮಾಡಿ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.
ಏಣಿತಡ್ಕದ ನೂತನ ಸೇತುವೆ ಬಳಿಯಿಂದ ಸಬಳೂರು ಅಯೋಧ್ಯಾ ನಗರ ಭಜನ ಮಂದಿರದ ತನಕ ಸುಮಾರು 97 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಡಾಮರು ಕಾಮಗಾರಿ ನಡೆಯುತ್ತಿದೆ. ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಕಾಮಗಾರಿ ವೀಕ್ಷಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಏಣಿತಡ್ಕ ಕಾಲನಿಗೆ ಅತ್ಯಧಿಕ ಅನುದಾನಗಳನ್ನು ನೀಡಿ ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ 94 ಲಕ್ಷ ರೂ. ಅನುದಾನದಲ್ಲಿ ರಸ್ತೆ ಡಾಮರು ಕಾಮಗಾರಿ ನಡೆಸಲಾಗಿದೆ. ಐವತ್ತು ಲಕ್ಷ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲಾಗಿದೆ. ಸುಮಾರು ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ಇದೀಗ 97 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.
ಮಾತ್ರವಲ್ಲದೆ ಈ ಹಿಂದೆ ತ್ರಿವೇಣಿ ಸರ್ಕಲ್ ಬಳಿಯಿಂದ ಅಯೋಧ್ಯಾನಗರ ಭಜನ ಮಂದಿರದ ತನಕ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಮರು ಕಾಮಗಾರಿ ನಡೆಸಲಾಗಿದೆ. ಕುದುಲೂರು ಭಾಗಕ್ಕೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಮರು ಕಾಮಗಾರಿ ಹಾಗೂ ಕಾಂಕ್ರೀಟೀಕರಣ ನಡೆಸಲಾಗಿದೆ. ಹತ್ತು ಲಕ್ಷ ರೂ. ವೆಚ್ಚದಲ್ಲಿ ಕುದುಲೂರು ರಸ್ತೆಯ ಉಳಿದ ಭಾಗದ ಡಾಮರು ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ತನಕ ರಸ್ತೆ ಗುಂಡಿ ಮುಚ್ಚುವುದಕ್ಕಾಗಿ ಹತ್ತು ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಶಾಸಕರು ವಿವರ ನೀಡಿದರು.
ನೆಲ್ಯಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಸುಳ್ಯ ಮಂಡಲ ಬಿಜೆಪಿ ಸೋಶಿಯಲ್ ಮೀಡಿಯಾ ಸಂಚಾಲಕ ಸದಾಶಿವ ಶೆಟ್ಟಿ ಮಾರಂಗ, ಕೊಯಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬೇಂಗದಪಡ್ಪು, ಸಂಜೀವ ಗೌಡ ಪರಂಗಾಜೆ, ಶೀನಪ್ಪ ಗೌಡ ವಳಕಡಮ ಮೊದಲಾದವರು ಉಪಸ್ಥಿತರಿದ್ದರು.
ಅನುದಾನ ಬಿಡುಗಡೆ
ಏಣಿತಡ್ಕ ಹಾಲಿನ ಸೊಸೈಟಿ ಬಳಿಯಿರುವ ತೋಡಿಗೆ ಸುಮಾರು 34 ಲಕ್ಷ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕರು ತಿಳಿಸಿದರು.