ಪಾಟ್ನಾ: ಗುಡುಗು, ಸಿಡಿಲು ಸಹಿತ ಭಾರೀ ಗಾಳಿ ಮಳೆಯ ಪರಿಣಾಮ ಕನಿಷ್ಠ 33 ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿರುವವರ ಕುಟುಂಬಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದು, ಶನಿವಾರ (ಮೇ 21) ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ:ಯೋಗ್ಯತೆ ಇದ್ದರೆ ಬೆಂಗಳೂರು ನಗರದ ಆರೋಗ್ಯ ಸರಿಪಡಿಸಿ: ಸೋಮಣ್ಣಗೆ ಕುಮಾರಸ್ವಾಮಿ ಟಾಂಗ್
ಭಾರೀ ಗಾಳಿ, ಮಳೆಯ ಹಿನ್ನೆಲೆಯಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಬಿಹಾರದಲ್ಲಿನ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಸಂತಾಪ ವ್ಯಕ್ತಪಡಿಸಿದ್ದಾರೆ.
“ ಬಿಹಾರದಲ್ಲಿ ಭಾರೀ ಗಾಳಿ, ಮಳೆ, ಸಿಡಿಲಿನಿಂದಾಗಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಸಂತ್ರಸ್ತರ ಕುಟುಂಬ ವರ್ಗಕ್ಕೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ. ಬಿಹಾರ ಸರ್ಕಾರದ ಜಿಲ್ಲಾಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿ, ಜನರಿಗೆ ನೆರವು ನೀಡಲಿ ಎಂದು ಪ್ರಧಾನಿ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಭಾರೀ ಗಾಳಿ, ಮಳೆ, ಸಿಡಿಲಿಗೆ ಬಿಹಾರದ 16 ಜಿಲ್ಲೆಗಳಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ವಿವರಿಸಿದೆ. ಜನರು ಹವಾಮಾನ ವೈಪರೀತ್ಯದ ಬಗ್ಗೆ ಗಮನಹರಿಸಬೇಕು. ಅಲ್ಲದೇ ಅನಗತ್ಯವಾಗಿ ಮನೆಯಿಂದ ಹೊರಬರದಿರುವಂತೆ ವಿಪತ್ತು ನಿರ್ವಹಣಾ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.