Advertisement

ನಿಷೇಧಿತ PFI ಯ ಮೂವರಿಗೆ ಜೀವಾವಧಿ

11:41 PM Jul 13, 2023 | Team Udayavani |

ಕೊಚ್ಚಿ: ಕೇರಳದಲ್ಲಿ ಪ್ರಾಧ್ಯಾಪಕರೊಬ್ಬರ ಕೈಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಪರಾಧಿಗಳ ಪೈಕಿ ಮೂವರಿಗೆ ಎನ್‌ಐಎ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ಅಪರಾಧಿಗಳು ಈಗ ನಿಷೇಧಗೊಂಡಿರುವ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ(ಪಿಎಫ್ಐ) ಕಾರ್ಯಕರ್ತರಾಗಿದ್ದರು.

Advertisement

2010ರ ಜು.4ರಂದು ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳದ ನ್ಯೂಮನ್‌ ಕಾಲೇಜಿನ ಪ್ರಾಧ್ಯಾಪಕ ಟಿ.ಜೆ.ಜೋಸೆಫ್ ಅವರ ಬಲಗೈಯನ್ನು ಪಿಎಫ್ಐ ಕಾರ್ಯಕರ್ತರು ಕತ್ತರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಾದ ಸಾಜಿಲ್‌, ನಸರ್‌ ಮತ್ತು ನಜೀಬ್‌ಗ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾ.ಅನಿಲ್‌ ಭಾಸ್ಕರ್‌ ಶಿಕ್ಷೆ ವಿಧಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ), ಭಾರತೀಯ ದಂಡ ಸಂಹಿತೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಅನ್ವಯ ತಪ್ಪಿತಸ್ಥರೆಂದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ನ್ಯಾಯಾಲಯ ಬುಧವಾರ ತೀರ್ಪು ನೀಡಿತ್ತು.

ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪುಳದಲ್ಲಿ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಕುಟುಂಬದ ಜತೆ ಪ್ರಾಧ್ಯಾಪಕ ಜೋಸೆಫ್ ಅವರು ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಜೋಸೆಫ್ ಅವರನ್ನು ವಾಹನದಿಂದ ಹೊರಗೆಳೆದ 7 ಮಂದಿಯ ತಂಡ, ಕೈಕತ್ತರಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಸಾವದ್‌ ತಲೆಮರೆಸಿಕೊಂಡಿದ್ದಾನೆ. ನ್ಯೂಮನ್‌ ಕಾಲೇಜಿನ ಬಿಕಾಂ ಸೆಮಿಸ್ಟರ್‌ ಪರೀಕ್ಷೆಗೆ ಜೋಸೆಫ್ ಅವರು ತಯಾರಿಸಿದ ಪ್ರಶ್ನೆ ಪತ್ರಿಕೆಯಲ್ಲಿ ಇಸ್ಲಾಂ ಮತದ ಬಗ್ಗೆ ಅವಹೇಳನಕಾರಿ ವಿಷಯ ಸೇರಿಸಿದ್ದಾರೆ ಎಂಬ ಆರೋಪದಲ್ಲಿ ಅವರ ಹತ್ಯೆಗೆ ಸಾವದ್‌ ಯೋಜಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next