Advertisement
ಪ್ರಸ್ತುತ ಭಾರತದಲ್ಲಿ ಶೇ. 61ರಷ್ಟು ಮರಣಗಳು ಜೀವನ ಶೈಲಿಯ ಕಾಯಿಲೆಗಳಿಂದ ಸಂಭವಿಸುತ್ತಿವೆ ಎಂದು ಸಿಎಸ್‌ಇ ಪ್ರಕಟಿಸಿರುವ ವರದಿಯಿಂದ ಬಹಿರಂಗಗೊಂಡಿದೆ.ಅಂತೆಯೇ ಪರಿಸರ ಸಂಬಂಧಿ ಅಪಾಯಕಾರಿ ಅಂಶಗಳಿಗೆ ಮತ್ತು ಏಳು ವಿಧದ ಜೀವನ ಶೈಲಿಯ ಕಾಯಿಲೆಗಳಿಗೆ ಇರಬಹುದಾದ ಸಂಬಂಧದ ಸಂಭಾವ್ಯತೆಯನ್ನು ಈ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಸಿಎಸ್‌ಇ ವರದಿಯಂತೆ ಸ್ಥೂಲಕಾಯ, ಕ್ಯಾನ್ಸರ್, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಮಧುಮೇಹ (ಡಯಾಬಿಟಿಸ್), ಶ್ವಾಸಕಾಂಗಗಳ ವ್ಯಾಧಿಗಳು (ದೀರ್ಘಕಾಲೀನ ಶ್ವಾಸಕೋಶಗಳ ಅಡಚಣೆಯ ಸಮಸ್ಯೆ), ಹಾರ್ಮೋನ್ ಅಸಮತೋಲನ, ಆಹಾರ ಒಗ್ಗದಿರುವಿಕೆ (ಅಲರ್ಜಿ) ಮತ್ತು ಮಾನಸಿಕ ವ್ಯಾಧಿಗಳು ಜೀವನ ಶೈಲಿಯ ಕಾಯಿಲೆ ಮತ್ತು ಸಮಸ್ಯೆಗಳಲ್ಲಿ ಪ್ರಮುಖವಾಗಿವೆ. ಪ್ರಸ್ತುತ ಕ್ಯಾನ್ಸರ್ ಕಾಯಿಲೆಯನ್ನು ಉದಾಹರಣೆಯಾಗಿಸಿದಲ್ಲಿ 2020ಕ್ಕೆ ಮುನ್ನ ನಮ್ಮ ದೇಶದಲ್ಲಿ ವರ್ಷಂ ಪ್ರತಿ 1.73 ದಶಲಕ್ಷಕ್ಕೂ ಅಧಿಕ ಜನರು ಈ ಮಾರಕ ಕಾಯಿಲೆಗೆ ಈಡಾಗಲಿರುವರೆಂದು ವರದಿಯಲ್ಲಿ ಉಲ್ಲೇಖೀಸ ಲಾಗಿದೆ. ವಾಯುಮಾಲಿನ್ಯ, ತಂಬಾಕಿನ ಬಳಕೆ, ಮದ್ಯಪಾನ, ಆಹಾರ ಸೇವನೆ ಪದ್ಧತಿಯಲ್ಲಿ ಬದಲಾವಣೆಗಳು ಕ್ಯಾನ್ಸರ್ ಉದ್ಭವಿಸುವಲ್ಲಿ ಕಾರಣವೆನಿಸಿದರೂ, ಶೇ. 20ರಷ್ಟು ಕ್ಯಾನ್ಸರ್ ಪ್ರಕರಣಗಳು ಪರಿಸರದಲ್ಲಿನ ವಿಷಕಾರಕ ಅಂಶಗಳಿಂದಾಗಿ ಬರುತ್ತಿ¤ವೆ. ಇದೇ ಕಾರಣದಿಂದಾಗಿ ಪರಿಸರ ಸಂಬಂಧಿತ ಅಪಾಯಕಾರಿ ಅಂಶಗಳನ್ನು ಕ್ಷಿಪ್ರಗತಿಯಲ್ಲಿ ನಿವಾರಿಸುವ ಮೂಲಕ ಶೇ. 61 ರಷ್ಟು ಮರಣಗಳಿಗೆ ಕಾರಣವೆನಿಸುತ್ತಿರುವ ಜೀವನ ಶೈಲಿಯ ಕಾಯಿಲೆಗಳನ್ನು ನಿಯಂತ್ರಿಸಬೇಕೆಂದು ಈ ವರದಿಯಲ್ಲಿ ಹೇಳಲಾಗಿದೆ.
Related Articles
Advertisement
ನಾಲ್ಕು ಅಂಶಗಳು ವಿಶ್ವ ಆರೋಗ್ಯ ಸಂಸ್ಥೆಯು ಮದ್ಯಪಾನ, ತಂಬಾಕಿನ ಉತ್ಪನ್ನಗಳ ಬಳಕೆ, ಅಪೌಷ್ಟಿಕ – ನಿರುಪಯುಕ್ತ ಆಹಾರ (ಜಂಕ್ ಫುಡ್) ಸೇವನೆ ಮತ್ತು ನಿಷ್ಕ್ರಿಯ ಬದುಕು ಜೀವನ ಶೈಲಿಯ ಅರ್ಥಾತ್ ಪರಸ್ಪರ ಒಬ್ಬರಿಂದ ಮತ್ತೂಬ್ಬರಿಗೆ ಹರಡದ ಕಾಯಿಲೆಗಳಿಗೆ ಕಾರಣವೆಂದು ಗುರುತಿಸಿದೆ. ಸಂಸ್ಥೆಯ ಅಭಿಪ್ರಾಯ ದಂತೆ ಜಗತ್ತಿನ ವಿವಿಧ ರಾಷ್ಟ್ರಗಳು ಕಿಂಚಿತ್ ಹಣವನ್ನು ವಿನಿಯೋಗಿಸುವ ಮೂಲಕ, ಈ ಗಂಭೀರ ಸಮಸ್ಯೆಯನ್ನು ಮತ್ತು ಇದರಿಂದಾಗಿ ಸಂಭವಿಸುವ ಮರಣದ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ.
ಸರಕಾರ- ಪ್ರಜೆಗಳ ಹೊಣೆಗಾರಿಕೆ
ದೇಶದ ಪ್ರಜೆಗಳ ಆರೋಗ್ಯ ರಕ್ಷಣೆಯ ಮಹತ್ತರವಾದ ಹೊಣೆಗಾರಿಕೆಯು ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೇಲಿದೆ. ಆದರೆ ಮಾನವಜನ್ಯ ಜಲ ಮತ್ತು ವಾಯು ಮಾಲಿನ್ಯ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಪರಿಸರ ಮಾಲಿನ್ಯದ ಸಮಸ್ಯೆಯನ್ನು ನಿವಾರಿಸಲು ಮತ್ತು ಜೀವನ ಶೈಲಿಯ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿ ಸಲು, ದೇಶದ ಪ್ರತಿಯೊಬ್ಬ ಪ್ರಜೆಯ ಮನಃಪೂರ್ವಕ ಸಹಕಾರದ ಅವಶ್ಯಕತೆಯಿದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದಲ್ಲಿ, ಮುಂದಿನ ಕೆಲವೇ ವರ್ಷಗಳಲ್ಲಿ ಜೀವನ ಶೈಲಿಯ ಕಾಯಿಲೆಗಳಿಗೆ ಬಲಿಯಾಗುವ ಭಾರತೀಯರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಪರಿಹಾರವೇನು?
ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸಲು ದಿನದಲ್ಲಿ ಒಂದಿಷ್ಟು ಸಮಯವನ್ನು ಮೀಸಲಿಡಿ. ನಿಮ್ಮ ಮಕ್ಕಳನ್ನೂ ಈ ಮಹಾನ್ ಕಾರ್ಯದಲ್ಲಿ ಸೇರುವಂತೆ ಪ್ರೇರೇಪಿಸಿ. ವಾಯು ಮತ್ತು ಜಲ ಮಾಲಿನ್ಯವನ್ನು ತಡೆಗಟ್ಟಲು ಶ್ರಮಿಸಿ. ಸಾಧ್ಯವಿರುವಷ್ಟು ಪುನರ್ ಆವರ್ತನಗೊಳಿಸಬಲ್ಲ ವಸ್ತುಗಳನ್ನೇ ಬಳಸಿ. ತ್ಯಾಜ್ಯಗಳ ಉತ್ಪಾದನೆಯನ್ನು ನಿಯಂತ್ರಿಸಿ. ದೈನಂದಿನ ಜೀವನದಲ್ಲಿ ಶಿಸ್ತು, ಪೌಷ್ಟಿಕ ಹಾಗೂ ಸಮತೋಲಿತ ಆಹಾರವನ್ನು ಮತ್ತು ತರಕಾರಿ, ಹಣ್ಣು ಹಂಪಲುಗಳನ್ನು ಸೇವಿಸಿ. ದಿನನಿತ್ಯ ವ್ಯಾಯಾಮ, ನಡಿಗೆ ಅಥವಾ ಕ್ರೀಡೆಗಳಲ್ಲಿ ಭಾಗವಹಿಸಿ. ನಿಮ್ಮ ಆರೋಗ್ಯ ಚೆನ್ನಾಗಿದೆ ಎಂದು ಭಾವಿಸಿ ಇದನ್ನು ನಿರ್ಲಕ್ಷಿಸಿದಲ್ಲಿ ಮುಂದೆ ಗಂಭೀರ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ ಎನ್ನುವುದನ್ನು ಮರೆಯದಿರಿ. ಈಗಾಗಲೇ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ಜೀವನ ಶೈಲಿಯ ಕಾಯಿಲೆಗಳಿಗೆ ನಿಮ್ಮ ಮಕ್ಕಳು – ಮೊಮ್ಮಕ್ಕಳು ಈಡಾಗದಂತೆ ಕಾಪಾಡಬೇಕಾದ ಹೊಣೆಗಾರಿಕೆ ನಿಮ್ಮದೇ ಎನ್ನುವುದನ್ನು ನೆನಪಿನಲ್ಲಿಡಿ. ಕೊನೆಯ ಮಾತು
ನಿಷ್ಕ್ರಿಯ ಜೀವನ ಶೈಲಿ, ನಿರುಪಯುಕ್ತ ಆಹಾರ ಸೇವನೆ ಮತ್ತು ಸುಖ ಲೋಲುಪ ಜೀವನಕ್ಕೆ ಒಗ್ಗಿಹೋಗಿರುವ ಬಹುತೇಕ ಶ್ರೀಮಂತರು, ಲಕ್ಷಾಂತರ ರೂಪಾಯಿಗಳ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡು ನಿಶ್ಚಿಂತರಾಗಿದ್ದೇವೆ ಎನ್ನುತ್ತಾರೆ. ಆದರೆ ಈ ಆರೋಗ್ಯ ವಿಮೆಯು ವ್ಯಾಧಿ ಪೀಡಿತರ ಚಿಕಿತ್ಸೆಯ ಖರ್ಚುವೆಚ್ಚಗಳನ್ನು ಪಡೆದುಕೊಳ್ಳಲು ನೆರವಾಗಬಹುದೇ ಹೊರತು, ಯಾವುದೇ ಕಾಯಿಲೆಗಳಿಂದ ರಕ್ಷಣೆ ನೀಡಲು ಸಫಲವಾಗದು ಎನ್ನುವ ಸತ್ಯವನ್ನು ಮರೆತುಬಿಡುತ್ತಾರೆ!. – ಡಾ| ಸಿ. ನಿತ್ಯಾನಂದ ಪೈ