ಆಕೆ ಜನಿಸಿದ್ದು ತಮಿಳು ಕುಟುಂಬದಲ್ಲಿ. ಸಹಜ ಎಂಬಂತೆ ನೃತ್ಯದ ಮೇಲೆ ಆಸಕ್ತಿಯಿತ್ತು. ಆದರಲ್ಲೂ ಭರತನಾಟ್ಯದ ಆಸಕ್ತಿ ಸ್ವಲ್ಪ ಜಾಸ್ತಿಯೇ ಇತ್ತು. ಆದರೆ ಹತ್ತರ ಹರೆಯದ ಹುಡುಗಿಯ ಕೈಗೆ ಯಾವಾಗ ಕ್ರಿಕೆಟ್ ಬ್ಯಾಟ್ ಸಿಕ್ಕಿತೋ ಅಲ್ಲಿಗೆ ಆಕೆಯ ಅದೃಷ್ಟವೇ ಬದಲಾಗಿತ್ತು. ಆದರೆ ಅದೃಷ್ಟ ಬದಲಾಗಿದ್ದು ಆಕೆಯದ್ದು ಮಾತ್ರವಲ್ಲ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ್ದೂ ಕೂಡಾ. ಅಂದಹಾಗೆ ಇಂದಿನ ಕಥೆ ಭಾರತೀಯ ಮಹಿಳಾ ಕ್ರಿಕೆಟ್ ನ ಪೋಸ್ಟರ್ ಗರ್ಲ್ ಮಿಥಾಲಿ ದೊರೈ ರಾಜ್ ಬಗ್ಗೆ.
ಮಿಥಾಲಿ ರಾಜ್ ಜನಿಸಿದ್ದು 1982ರ ಡಿಸೆಂಬರ್ 3ರಂದು. ತಮಿಳು ಕುಟುಂಬದವರಾದರೂ ಈಕೆಯ ಹುಟ್ಟೂರು ರಾಜಸ್ಥಾನದ ಜೋಧಪುರ. ತಂದೆ ದೊರೈ ರಾಜ್ ವಾಯುಪಡೆಯಲ್ಲಿ ಕರ್ತವ್ಯದಲ್ಲಿದ್ದರು. ಆದರೆ ಬಾಲ್ಯದಲ್ಲಿಯೇ ಮಿಥಾಲಿ ಕುಟುಂಬಿಕರು ಆಂಧ್ರಪ್ರದೇಶದ ಸಿಕಂದರ್ ಬಾದ್ ಗೆ (ಈಗಿನ ತೆಲಂಗಾಣ) ಬಂದು ನೆಲೆಸಿದರು. ಹೀಗಾಗಿ ಮಿಥಾಲಿ ಶಾಲಾ ಜೀವನ ಸಿಕಂದರ್ ಬಾದ್ ನಲ್ಲಿ ನಡೆಯಿತು.
ನೃತ್ಯಪಟುವಾಗಬೇಕೆಂದು ಬಯಸಿದ್ದ ಮಿಥಾಲಿ ತನ್ನ 10ನೇ ಹರೆಯದಲ್ಲಿ ಬ್ಯಾಟ್ ಹಿಡಿದು ಆಡಲು ಆರಂಭಿಸಿದರು. ಹೀಗೆ ಆರಂಭವಾಯಿತು ಆಕೆಯ ಕ್ರಿಕೆಟ್ ಪ್ರೇಮ. ಮಗಳಿಗೆ ಭರತನಾಟ್ಯಕ್ಕಿಂತ ಕ್ರಿಕೆಟ್ ಆಟದಲ್ಲಿಯೇ ಹೆಚ್ಚಿನ ಆಸಕ್ತಿ ಕಂಡು ದೊರೈ ರಾಜ್ ಆತಂಕ ಎದುರಾಗಿತ್ತು. ಹೆಣ್ಣುಮಕ್ಕಳು ಕ್ರಿಕೆಟ್ ಆಡುತ್ತಾರೆ ಎಂದರೆ ಅದು ಆ ಕಾಲದಲ್ಲಿ ಅಚ್ಚರಿಯ ವಿಚಾರವೇ ಆಗಿತ್ತು. ಹೆಣ್ಣು ಮಕ್ಕಳು ಏನಿದ್ದರೂ ಸಂಗೀತ, ನೃತ್ಯಕ್ಕಷ್ಟೇ ಸೀಮಿತ, ಬ್ಯಾಟ್ – ಕ್ರಿಕೆಟ್ ಎಲ್ಲಾ ಹುಡುಗರ ಆಟ ಎಂಬ ಮನಸ್ಥಿತಿಯಿದ್ದ ಕಾಲದಲ್ಲಿ ಮಿಥಾಲಿ ಹೊಸ ಹೆಜ್ಜೆ ಇಟ್ಟಿದ್ದಳು. ತಂದೆ ದೊರೈ ರಾಜ್ ಪುತ್ರನೊಂದಿಗೆ ಆಕೆಯನ್ನು ಕ್ರಿಕೆಟ್ ಕೋಚಿಂಗ್ ಗೆ ಕಳುಹಿಸಲು ಒಪ್ಪಿಗೆ ನೀಡಿದ್ದರು.
ಮಿಥಾಲಿ 14 ವರ್ಷವಿದ್ದಾಗಲೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಳು. 1997ರ ವಿಶ್ವಕಪ್ ತಂಡದಲ್ಲಿ ಬಾಲಕಿ ಮಿಥಾಲಿ ರಾಜ್ ಹೆಸರಿತ್ತು. ಆದರೆ ಆಕೆಯ ಅಂತಿಮ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಆದರೆ 1999ರಲ್ಲಿ ಮತ್ತೆ ರಾಷ್ಟ್ರೀಯ ತಂಡದ ಕರೆ ಪಡೆದ ಮಿಥಾಲಿ ರಾಜ್ ಮೊದಲ ಪಂದ್ಯವನ್ನೇ ಸ್ಮರಣೀಯವನ್ನಾಗಿಸಿದರು. ಐರ್ಲೆಂಡ್ ವಿರುದ್ಧ ಆರಂಭಿಕ ಆಟಗಾರ್ತಿಯಾಗಿ ಆಡಲಿಳಿದ 16ರ ಬಾಲಕಿ ಮಿಥಾಲಿ ಅಜೇಯ 114 ರನ್ ಬಾರಿಸಿದ್ದರು. ಅಂದು ಆಕೆ ಇನ್ನಿಂಗ್ಸ್ ಆರಂಭಿಸಿದ್ದು ರೇಷ್ಮಾ ಗಾಂಧಿ ಜೊತೆ. ಆಕೆಯದ್ದೂ ಅದೇ ಮೊದಲ ಪಂದ್ಯ. ವಿಶೇಷವೆಂದರೆ ರೇಷ್ಮಾ ಕೂಡಾ ಶತಕ ಸಿಡಿಸಿದ್ದರು. ಭಾರತ ತಂಡ 50 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 258 ರನ್ ಬಾರಿಸಿತ್ತು!
2002ರಲ್ಲಿ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಮಿಥಾಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ 214 ರನ್ ಬಾರಿಸಿದರು. 2002ರಲ್ಲಿ ಅನಾರೋಗ್ಯದಿಂದ ವಿಶ್ವಕಪ್ ಅವಕಾಶ ತಪ್ಪಿಸಿಕೊಂಡ ಮಿಥಾಲಿ 2005ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. ತಂಡವನ್ನು ಫೈನಲ್ ಗೂ ಕೊಂಡೊಯ್ದಿದ್ದರು.
ಮಹಿಳಾ ಕ್ರಿಕೆಟ್ ನ ತೆಂಡೂಲ್ಕರ್ ಎಂದೇ ಹೆಸರಾದ ಮಿಥಾಲಿ ಇಂದಿಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಏಕದಿನ ತಂಡದ ನಾಯಕಿಯಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. 200ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನಾಡಿರುವ ಮಿಥಾಲಿ ಆರು ಸಾವಿರ ರನ್ ಗಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ್ತಿ ಮಿಥಾಲಿ ರಾಜ್. ಟೆಸ್ಟ್, ಏಕದಿನ ಮತ್ತು ಟಿ20 ಮೂರು ಮಾದರಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಭಾರತದ ಆಟಗಾರ್ತಿ ಎಂಬ ದಾಖಲೆಯನ್ನೂ ಮಿಥಾಲಿ ಹೊಂದಿದ್ದಾರೆ.
ಕನಸಿನ ದಾರಿಯಲ್ಲಿ ಅದೆಷ್ಟು ಅಡೆತಡೆಗಳು ಬಂದರೂ ಎಲ್ಲವನ್ನು ಮೆಟ್ಟಿನಿಂತು ಗುರಿ ಸಾಧಿಸಿದ ಮಿಥಾಲಿ ಇಂದು ಅದೆಷ್ಟೋ ಹುಡುಗಿಯರಿಗೆ ಇಂದು ರೋಲ್ ಮಾಡೆಲ್ ಆಗಿದ್ದಾರೆ. ಸದ್ಯ ಮಿಥಾಲಿ ರಾಜ್ ಜೀವನ ಆಧಾರಿತ ಚಲನಚಿತ್ರ ಚಿತ್ರೀಕರಣ ಹಂತದಲ್ಲಿದ್ದು, ತಾಪ್ಸಿ ಪನ್ನು ನಟಿಸಿದ್ದಾರೆ.
ಕೀರ್ತನ್ ಶೆಟ್ಟಿ ಬೋಳ