ಆ ಇಬ್ಬರು ಸಹೋದರರು ಬೆಳಗ್ಗೆ ಮೈದಾನಕ್ಕೆ ಬಂದರೆ ಹೊರ ಹೋಗುತ್ತಿದ್ದುದು ಸಂಜೆಯೇ. ಇದರ ಮಧ್ಯೆ ಐದು ರೂಪಾಯಿಯ ಮ್ಯಾಗಿ ಪ್ಯಾಕೇಟ್ ತಂದು ಅಲ್ಲೇ ಬಿಸಿ ಮಾಡಿಕೊಂಡು ತಿನ್ನುತ್ತಿದ್ದರು. ಈ ಹುಡುಗರಿಗೆ ಅದೇ ಬ್ರೇಕ್ ಫಾಸ್ಟ್, ಅದೇ ಲಂಚ್. ಮ್ಯಾಗಿಗಿಂತ ಹೆಚ್ಚಿಗೆ ತಿನ್ನಲು ಆಸೆಯಾದರೂ ತಿನ್ನುವಂತಿಲ್ಲ, ಯಾಕೆಂದರೆ ಕಿಸೆ ಖಾಲಿ! ಊರಿನಲ್ಲಿ ತಿರುಗಾಡಿದರೆ ಎಲ್ಲಿ ಸಾಲ ಕೊಟ್ಟವರು ತಡೆದು ನಿಲ್ಲಿಸುತ್ತಾರೆ ಎಂಬ ಭಯ. ಹೀಗಾಗಿ ದಿನವಿಡೀ ಮೈದಾನದಲ್ಲಿ ಕಾಲ ಕಳೆಯುತ್ತಿದ್ದ ಹುಡುಗರು ತಮ್ಮ ಕೋಪವನ್ನೆಲ್ಲಾ ಆಟದಲ್ಲಿ ತೋರಿಸುತ್ತಿದ್ದರು. ಎದುರು ಬಂದ ಚೆಂಡನ್ನು ದೂರ ದೂರಕ್ಕೆ ಬಾರಿಸುತ್ತಿದ್ದರು. ಹೀಗೆ ಬಡತನ, ಅವಮಾನದಲ್ಲೇ ಬೆಳೆದ ಅವರಲ್ಲೊಬ್ಬ ಇದೀಗ ಟೀಂ ಇಂಡಿಯಾದ ಟಿ20 ತಂಡದ ನಾಯಕ. ಅವನೇ ಹಾರ್ದಿಕ್ ಹಿಮಾಂಶು ಪಾಂಡ್ಯ.
ತನ್ನ ಚೊಚ್ಚಲ ನಾಯಕತ್ವದಲ್ಲೇ ಐಪಿಎಲ್ ಕಪ್ ಗೆದ್ದ ಹಾರ್ದಿಕ್ ಪಾಂಡ್ಯ ಇದೀಗ ಭಾರತದ ಭವಿಷ್ಯದ ಕ್ಯಾಪ್ಟನ್ ಎಂದೇ ಬಿಂಬಿಸಲಾಗುತ್ತಿದೆ. ಅದರಲ್ಲೂ ಟಿ20ಯಲ್ಲಿ ಪಾಂಡ್ಯ ಸೀಟು ಬಹುತೇಕ ಭದ್ರ. ಹೀಗಿರುವಾಗ ಪಾಂಡ್ಯ ನಡೆದು ಬಂದ ಹಾದಿಯತ್ತ ಒಮ್ಮೆ ಕಣ್ಣು ಹಾಯಿಸೋಣ.
ಈಗ ನೋಡಿದರೆ ಸದಾ ಸ್ಟೈಲಿಶ್ ಆಗಿರುವ, ಐಷಾರಾಮಿ ಜೀವನಶೈಲಿಯ, ದುಬಾರಿ ಕಾರು ಹೊಂದಿರುವ, ತನ್ನ ಅತಿರೇಕದ ಮಾತಿನಿಂದಲೇ ವಿವಾದಕ್ಕೆ ಗುರಿಯಾಗಿರುವ ಹಾರ್ದಿಕ್ ಪಾಂಡ್ಯ ಬದುಕು ಕೆಲವೇ ವರ್ಷಗಳ ಹಿಂದೆ ಹೀಗಿರಲಿಲ್ಲ. ಅಂದು ಅಣ್ಣ ಕೃನಾಲ್ ಜತೆಗೆ ಹಾರ್ದಿಕ್ ದಿನದ ಊಟಕ್ಕೂ ಪರದಾಡಿದ್ದರು.
ತಂದೆ ಹಿಮಾಂಶು ಪಾಂಡ್ಯ ಅವರು ಸೂರತ್ ನಲ್ಲಿ ಸಣ್ಣ ಕಾರು ಫೈನಾನ್ಸ್ ವ್ಯವಹಾರ ಹೊಂದಿದ್ದರು. ಆದರೆ ಮಕ್ಕಳ ಕ್ರಿಕೆಟ್ ಆಸಕ್ತಿ ಕಂಡು, ಅವರಿಗೆ ಉತ್ತಮ ತರಬೇತಿ ಕೊಡಿಸಲೆಂದು ಅದೆಲ್ಲವನ್ನೂ ಬಿಟ್ಟು ವಡೋದರಕ್ಕೆ ವಲಸೆ ಬಂದಿದ್ದರು. ಅಲ್ಲಿ ಕಿರಣ್ ಮೋರೆ ಅಕಾಡೆಮಿಯಲ್ಲಿ ಇಬ್ಬರು ಸಹೋದರರು ಸೇರಿದ್ದರು.
“ನಾನು ಮತ್ತು ಅಣ್ಣ ಐದು ರೂಪಾಯಿಯ ಮ್ಯಾಗಿ ತರುತ್ತಿದ್ದೆವು. ಮೈದಾನದ ಕೆಲಸಗಾರನ ಬಳಿ ಬೇಡಿ ಬಿಸಿ ನೀರು ಪಡೆಯುತ್ತಿದ್ದೆವು. ಅದರಲ್ಲಿ ಮ್ಯಾಗಿ ಮಾಡಿ ತಿನ್ನುತ್ತಿದ್ದೆವು. 365 ದಿನವೂ ಬೆಳಿಗ್ಗೆ ಮತ್ತು ಮಧ್ಯಾಹ್ನ ಇದೇ ನಮಗೆ ಊಟ ತಿಂಡಿ. ನಾವು ಇಡೀ ದಿನ ಮೈದಾನದಲ್ಲಿ ಕಳೆಯುತ್ತಿದ್ದೆವು. ತುಂಬಾ ಸಾಲದಲ್ಲಿದ್ದೆವು, ನಾವು ಗಳಿಸಿದ ಹಣ ಎಲ್ಲಾ ಸಾಲ ತೀರಿಸುವಷ್ಟರಲ್ಲೇ ಮುಗಿದು ಹೋಗುತ್ತಿತ್ತು. ಆ ಸಮಯದಲ್ಲಿ 10 ರೂಪಾಯಿ ಬಿಡಿ, ನನ್ನ ಬಳಿ 5 ರೂಪಾಯಿಯೂ ಇರುತ್ತಿರಲಿಲ್ಲ..” ಹೀಗೆಂದು ತಮ್ಮ ಜೀವನವನ್ನೊಮ್ಮೆ ಮೆಲುಕು ಹಾಕಿದ್ದರು ಹಾರ್ದಿಕ್. (ಇಂಡಿಯನ್ ಎಕ್ಸ್ ಪ್ರೆಸ್ 2016)
ಪಾಂಡ್ಯ ಕುಟುಂದ ಕಷ್ಟ ಅರಿತ ಮತ್ತು ಹುಡುಗರ ಪ್ರತಿಭೆ ಕಂಡ ಕಿರಣ್ ಮೋರೆ ಮೂರು ವರ್ಷ ಫೀಸ್ ಪಡೆಯದೆ ತಮ್ಮ ಅಕಾಡೆಮಿಯಲ್ಲಿ ಕೋಚಿಂಗ್ ನೀಡಿದ್ದರು. ಕುಟುಂಬದ ಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ ಇವರು ಸಹಾಯ ಮಾಡಲು ಮುಂದಾದರು. ಹೀಗಾಗಿ ಸ್ಥಳೀಯವಾಗಿ ನಡೆಯುವ ಟೂರ್ನಮೆಂಟ್ ಗಳಲ್ಲಿ ಆಡಲು ಹೋಗುತ್ತಿದ್ದರು. ಇದರಿಂದ 400-500 ಸಂಪಾದನೆ ಮಾಡುತ್ತಿದ್ದರು. ಇದರಿಂದ ಕನಿಷ್ಠ ಒಂದು ವಾರವಾದರೂ ನೆಮ್ಮದಿಯಿಂದ ಇರಬಹುದಿತ್ತು.
ಎಲ್ಲವನ್ನೂ ಬದಲು ಮಾಡಿದ್ದು ಐಪಿಎಲ್ ಎಂಬ ಮಾಯಾಲೋಕ. 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಈ ಹುಡುಗ ಹಾರ್ದಿಕ್ ನನ್ನು 10 ಲಕ್ಷ ರೂ. ಮೂಲ ಬೆಲೆಗೆ ಖರೀದಿ ಮಾಡಿತ್ತು. 10 ಲಕ್ಷವೆಂದರೆ ಆಗ ಹಾರ್ದಿಕ್ ಪಾಂಡ್ಯ ಕುಟುಂಬಕ್ಕೆ ತುಂಬಾ ದೊಡ್ಡ ಮೊತ್ತ. ಎಷ್ಟೋ ಸಾಲಗಳು ಅದರಿಂದ ತೀರಿತ್ತು.
“ಆಗ ಹಾರ್ದಿಕ್ ಪಾಂಡ್ಯ ಯಾರೆಂದು ಜನರಿಗೆ ಗೊತ್ತಿರಲಿಲ್ಲ. ಇಲ್ಲದಿದ್ದರೆ ಹೆಚ್ಚು ಹಣ ಸಿಗುತ್ತಿತ್ತು. ಆದರೆ ಆ ಹಣವೂ ನಮಗೆ ತುಂಬಾ ಮುಖ್ಯವಾಗಿತ್ತು. ಅಪ್ಪನ ಆರೋಗ್ಯವೂ ಆ ಸಮಯದಲ್ಲಿ ಸರಿ ಇರಲಿಲ್ಲ. ಹೀಗಾಗಿ ಈ ಹಣ ತುಂಬಾ ದೊಡ್ಡದೇ ಆಗಿತ್ತು. ಈಗ ನಾವೇನಾದರೂ ಆಗಿದ್ದರೆ ಅದಕ್ಕೆ ಕಾರಣ ಆ ಕಷ್ಟದ ಸಮಯವನ್ನು ನಾವು ನಿಭಾಯಿಸಿದ ರೀತಿಯಿಂದ” ಎನ್ನುತ್ತಾರೆ ಹಾರ್ದಿಕ್. (2017ರ ಚಾಂಪಿಯನ್ಸ್ ಟ್ರೋಫಿ ಸಮಯ)
ಮುಂಬೈ ಇಂಡಿಯನ್ಸ್ ಎಂಬ ಸಾಗರ ಸೇರಿದ ಯುವಕನಿಗೆ ಕೆಲ ಪಂದ್ಯಗಳಲ್ಲಿ ಆಡುವ ಅವಕಾಶವೂ ಸಿಕ್ಕಿತ್ತು. ಕೆಕೆಆರ್ ವಿರುದ್ಧ ಅರ್ಧ ಶತಕ ಸಿಡಿಸಿದ ಪಾಂಡ್ಯ ಮೊದಲ ಬಾರಿಗೆ ಕ್ರಿಕೆಟ್ ಲೋಕಕ್ಕೆ ಪರಿಚಯವಾಗಿದ್ದ. ಆದರೆ ಚೆನ್ನೈ ವಿರುದ್ದದ ಪಂದ್ಯದಲ್ಲಿ ಕೇವಲ ಎಂಟು ಎಸೆತಗಳಲ್ಲಿ ಬಹುಮೂಲ್ಯ 21 ರನ್ ಸಿಡಿಸಿದ್ದ ಹಾರ್ದಿಕ್ ತನ್ನ ಶಕ್ತಿ ಏನೆಂದು ತೋರಿಸಿಕೊಟ್ಟಿದ್ದ. ಅಷ್ಟಕ್ಕೂ ಅಂದು ಆತನ ಒಂದು ನಿರ್ಧಾರ ಎಲ್ಲವನ್ನೂ ಬದಲು ಮಾಡಿತ್ತು.
“ಸಿಎಸ್ ಕೆ ವಿರುದ್ದದ ಪಂದ್ಯದಲ್ಲಿ ನಾನು ಆಡಲು ಸಿದ್ದನಿರಲಿಲ್ಲ. ನನ್ನ ಕುತ್ತಿಗೆ ಹಿಡಿದುಕೊಂಡಿತ್ತು. ನಾನು ಆಡುವುದಿಲ್ಲ ಎಂದಿದ್ದೆ. ಆದರೆ ಮುಂಬೈ ತಂಡದ ಪೌಲ್ ಚಾಪ್ಮನ್ ಬಂದು, ಕೇವಲ ಕುತ್ತಿಗೆ ನೋವೆಂದು ನೀನು ಈ ಪಂದ್ಯವನ್ನು ಕಳೆದುಕೊಳ್ಳುತ್ತೀಯಾ? ಇದರ ಬಗ್ಗೆಲ್ಲಾ ಯಾರು ಟೆನ್ಶನ್ ಮಾಡಿಕೊಳ್ಳುತ್ತಾರೆ. ಪೆಯಿನ್ ಕಿಲ್ಲರ್ ತಿಂದು ಆಡು ಎಂದಿದ್ದರು. ಹಾಗೆ ಮಾಡಿ ಕಣಕ್ಕಿಳಿದೆ. ಪಂದ್ಯದ ಸುಮಾರು ಹತ್ತು ಓವರ್ ನನಗೆ ಕತ್ತು ತಿರುಗಿಸಲೂ ಆಗುತ್ತಿರಲಿಲ್ಲ. ನಾನು ಐದು ಪೆಯಿನ್ ಕಿಲ್ಲರ್ ಮಾತ್ರೆ ನುಂಗಿದ್ದೆ. ಪಂದ್ಯದ ಬಳಿಕ ನಾನು ಹೋಗಿ ಚಾಪ್ಮನ್ ರನ್ನು ಅಪ್ಪಿಕೊಂಡಿದ್ದೆ. ನಾನು ಕೇವಲ ನೋವೆಂದು ಅಂದು ಆಡದೇ ಹೋಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಬಹುಶಃ ನನ್ನ ಬದುಕು ಇಂದು ಹೀಗೆ ಇರುತ್ತಿರಲಿಲ್ಲ. ಆ ಪಂದ್ಯ ನನ್ನ ಕೆರಿಯರ್ ನ ಟರ್ನಿಂಗ್ ಪಾಯಿಂಟ್..” ಎನ್ನುತ್ತಾರೆ ಹಾರ್ದಿಕ್ (ಇಎಸ್ ಪಿಎನ್ ಕ್ರಿಕ್ ಇನ್ಫೋ)
ಹಾರ್ದಿಕ್ ಎಂಬ ಪ್ರತಿಭೆಯ ಮೇಲೆ ಸ್ವತಃ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಂಬಿಕೆ ಇರಿಸಿದ್ದರು. ವಾಂಖೆಡೆ ಸ್ಟೇಡಿಯಂನಲ್ಲಿ ಪ್ರಾಕ್ಟಿಸ್ ಮುಗಿಸಿದ ಬಂದ ಹಾರ್ದಿಕ್ ಪಾಂಡ್ಯ ಜತೆ ಮಾತನಾಡಿದ ಸಚಿನ್, “ಇನ್ನು ಒಂದು ಒಂದೂವರೆ ವರ್ಷದಲ್ಲಿ ನೀನು ಭಾರತ ತಂಡಕ್ಕೆ ಆಡುತ್ತೀಯಾ” ಎಂದಿದ್ದರು. ಇದಾಗಿ ಕೆಲವೇ ಸಮಯದಲ್ಲಿ ಅಂದರೆ 2016 ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಆಡಿದ್ದ.
“ಯಶಸ್ಸು ಆಕಸ್ಮಿಕವಲ್ಲ. ಇದು ಕಠಿಣ ಕೆಲಸ, ಪರಿಶ್ರಮ, ನಿರಂತರ ಕಲಿಕೆ, ಅಧ್ಯಯನ, ತ್ಯಾಗ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನೀವು ಏನು ಮಾಡುತ್ತಿದ್ದೀರಿ ಅದನ್ನು ಪ್ರೀತಿಸಿದಾಗ ಸಿಗುತ್ತದೆ” ಎಂಬ ಫುಟ್ಬಾಲ್ ಲೆಜೆಂಡ್ ಪೀಲೆ ಮಾತಿಗೆ ಹಾರ್ದಿಕ್ ಓರ್ವ ಉತ್ತಮ ಉದಾಹರಣೆ.
ಕೀರ್ತನ್ ಶೆಟ್ಟಿ ಬೋಳ