ಅದು 1984. ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ಕ್ರೀಡಾ ಲೋಕದ ಅತೀ ದೊಡ್ಡ ಕೂಟ ಒಲಿಂಪಿಕ್ಸ್ ನಡೆಯುತ್ತಿತ್ತು. ಅಥ್ಲೆಟಿಕ್ಸ್ ನಲ್ಲಿ ಅದುವರೆಗೆ ನಿರಾಸೆಯನ್ನೇ ಅನುಭವಿಸಿದ ಭಾರತ ಮೊದಲ ಬಾರಿಗೆ ಕನಸು ಕಣ್ಣಿನಿಂದ ಕಾದು ಕುಳಿತಿತ್ತು. ಕಾರಣ ಟ್ರ್ಯಾಕ್ ನಲ್ಲಿ ಇದ್ದುದು ಭಾರತದ ಚಿನ್ನದ ಹುಡುಗಿ ಪಿ ಟಿ ಉಷಾ. 400 ಮೀಟರ್ ಹರ್ಡಲ್ಸ್ ಆರಂಭವಾಗಿತ್ತು. 20ರ ಹುಡುಗಿ ಉಷಾ ಚಿಗರೆಯಂತೆ ಓಡಿದ್ದರು. ಒಟಗಾರ್ತಿಯರನ್ನು ಹಿಂದುಕ್ಕುತ್ತಾ ಓಡಿದ ಉಷಾರ ಮುಂದೆ ಇದ್ದಿದ್ದು ಕೇವಲ ಇಬ್ಬರು ಮಾತ್ರ. ಉಷಾ ಗುರಿ ಮುಟ್ಟಿದರು, ಕಂಚಿನ ಪದಕ ಗ್ಯಾರಂಟಿ, ಲಾಸ್ ಏಂಜಲೀಸ್ ನಲ್ಲಿ ಭಾರತದ ಧ್ವಜ ರಾರಾಜಿಸಿತು ಎನ್ನುವಷ್ಟರಲ್ಲಿ ಎದುರಾಗಿತ್ತು ಆಘಾತ. ಕಣ್ಣವೆ ಮಿಟುಕಿಸುವಷ್ಟರಲ್ಲಿ ಪಿ ಟಿ ಉಷಾ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಕಂಚಿನ ಪದಕ ತಪ್ಪಿತ್ತು. ಉಷಾಗೂ ಮೂರನೇ ಸ್ಥಾನಿಗೂ ನಡುವಿನ ಅಂತರ ಎಷ್ಟು ಗೊತ್ತಾ? ಕೇವಲ 1/100 ಸೆಕೆಂಡ್.
ಪಿಲವುಲ್ಲಕಂಡಿ ತೆಕ್ಕಪರಂಬಿಲ್ ಉಷಾ ಉರುಫ್ ಪಿ ಟಿ ಉಷಾ ಜನಿಸಿದ್ದು 1964 ಜೂನ್ 27ರಂದು ಕೇರಳದಲ್ಲಿ. ಕೋಯಿಕ್ಕೋಡ್ ಜಿಲ್ಲೆಯ ಕೂತಲಿ ಗ್ರಾಮದ ಇಪಿಎಂ ಪೈತಲ್ ಮತ್ತು ಟಿವಿ ಲಕ್ಷ್ಮಿ ದಂಪತಿಗಳ ಪುತ್ರಿಯಾದ ಉಷಾ ಬಾಲ್ಯದ ದಿನಗಳನ್ನು ಕಳೆದದ್ದು ತ್ರಿಕೊಟ್ಟೂರು ಮತ್ತು ಪಯ್ಯೋಲಿಯಲ್ಲಿ. ಬಾಲ್ಯದಲ್ಲಿ ಉಷಾ ತುಂಬಾ ಕಷ್ಟದ ದಿನಗಳನ್ನು ಕಂಡಿದ್ದರು. ಬಡತನದಿಂದ ಬಾಲ್ಯದಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು ಉಷಾ.
ಕೇರಳ ಸರ್ಕಾರ 1976ರಲ್ಲಿ ಕಣ್ಣೂರಿನಲ್ಲಿ ಮಹಿಳಾ ಕ್ರೀಡಾ ವಿಭಾಗವನ್ನು ತೆರೆದಾಗ ಉಷಾ ಅದೃಷ್ಟ ಬದಲಾಗಿತ್ತು. ಅಲ್ಲಿ ಸೇರಿದ ಉಷಾ ಕೋಚ್ ಓಂ ನಂಬಿಯಾರ್ ಬಳಿ ತರಬೇತಿ ಪಡೆಯಲಾರಂಭಿಸಿದರು.
1978 ರಲ್ಲಿ 14 ವರ್ಷದ ಬಾಲಕಿ ಉಷಾ ಇಂಟರ್ ಸ್ಟೇಟ್ ಮೀಟ್ ನ ಜೂನಿಯರ್ ವಿಭಾಗದಲ್ಲಿ ಆರು ಪದಕ ಗೆದ್ದರು. ಅದೇ ವರ್ಷ ಕೇರಳ ಸ್ಟೇಟ್ ಕಾಲೇಜ್ ಮೀಟ್ ನಲ್ಲಿ 14 ಪದಕಕ್ಕೆ ಕೊರಳೊಡ್ಡಿದ ಉಷಾ ಹೊಸ ಸಂಚಲನ ಮೂಡಿಸಿದರು. 1979ರಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದ ಕೇರಳದ ಹುಡುಗಿ 1980ರಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕಾಲಿಟ್ಟಿದ್ದರು. ಪಾಕಿಸ್ತಾನದ ಕರಾಚಿಯಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕೂಟದಲ್ಲಿ 16 ವರ್ಷದ ಕೋಯಿಕ್ಕೋಡ್ ನ ಹುಡುಗಿ ನಾಲ್ಕು ಚಿನ್ನದ ಪದಕ ಬೇಟೆಯಾಡಿದ್ದರು. ಈ ಮೂಲಕ ಅಥ್ಲೆಟಿಕ್ ವಿಶ್ವಕ್ಕೆ ತನ್ನ ಆಗಮನವನ್ನು ಭರ್ಜರಿಯಾಗಿಯೇ ಸಾರಿದ್ದರು.
1980ರ ಮಾಸ್ಕೋ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಪ್ರವೇಶ ಪಡೆದ ಉಷಾ ಅಲ್ಲಿ ಮಾತ್ರ ನಿರಾಶೆ ಅನುಭವಿಸಿದರು. 100 ಮೀ ಓಟದಲ್ಲಿ ಉಷಾ ಐದನೇಯವರಾಗಿ ಓಟ ಮುಗಿಸಿದರು.ಆದರೆ 1982ರಲ್ಲಿ ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 200 ಮೀಟರ್ ಓಟದಲ್ಲಿ ಜಯಿಸಿದ್ದ ಉಷಾ 100 ಮೀ. ಓಟದಲ್ಲಿ ಕಂಚಿನ ಪದಕ ಪಡೆದಿದ್ದರು.
1983ರಲ್ಲಿ ಓಂ ನಂಬಿಯಾರ್ ಅವರನ್ನು ತನ್ನ ವೈಯಕ್ತಿಕ ಕೋಚ್ ಆಗಿ ನೇಮಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಕೇರಳ ಸರ್ಕಾರವೂ ಇದಕ್ಕೆ ಒಪ್ಪಿಗೆ ನೀಡಿತ್ತು. ಈ ಮೂಲಕ ಪ್ರತ್ಯೇಕ ತರಬೇತುದಾರರನ್ನು ಹೊಂದಿದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಕೀರ್ತಿ ಪಿ.ಟಿ ಉಷಾ ಅವರದಾಗಿತ್ತು.
ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಎಂ.ಡಿ ವಲ್ಸಮ್ಮ ಅವರ ಕೋಚ್ ಎ.ಕೆ. ಕುಟ್ಟಿ ಒಮ್ಮೆ ಉಷಾ ಬಗ್ಗೆ ಟೀಕೆ ಮಾಡಿದ್ದರು. ಒಂದು ವೇಳೆ ವಲ್ಸಮ್ಮ ಅವರಿಗೆ ಸಿಂಥೆಟಿಕ್ಸ್ ಟ್ರ್ಯಾಕ್ ನಲ್ಲಿ ಅಭ್ಯಾಸ ನಡೆಸಿದ್ದರೆ, ಆಕೆ ಉಷಾರನ್ನು ಸೋಲಿಸುತ್ತಾರೆ ಎಂದಿದ್ದರು. ಈ ವಿಡಿಯೋ ಕ್ಲಿಪ್ಪಿಂಗ್ ಅನ್ನು ತನ್ನ ಬಳಿ ಇರಿಸಿಕೊಂಡಿದ್ದ ಉಷಾ ಪ್ರತಿ ಬಾರಿ ಅಭ್ಯಾಸ ನಡೆಸವಾಗಲೂ ಸ್ಪೂರ್ತಿ ಪಡೆಯಲು ಆ ವಿಡಿಯೋವನ್ನು ನೋಡುತ್ತಿದ್ದರಂತೆ.
1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಪಿ.ಟಿ ಉಷಾರ ಮೇಲೆ ದೇಶಕ್ಕೆ ದೇಶವೇ ಭರವಸೆ ಇಟ್ಟುಕೊಂಡಿತ್ತು. ಆದರೆ ಅತ್ಯಂತ ಸಣ್ಣ ಅಂತರದಲ್ಲಿ ಉಷಾ ಕಂಚಿನ ಪದಕ ಪಡೆಯಲಾಗಲಿಲ್ಲ. ಆ ಸಮಯದಲ್ಲಿ ಸರಿಯಾದ ಆಹಾರ ಸಿಕ್ಕಿರಲಿಲ್ಲ. ನಾನು ಪಂದ್ಯದ ದಿನ ಗಂಜಿ ಸೇವಿಸಿ ಹೋಗಿದ್ದೆ. ಹೀಗಾಗಿ ಓಟದ ಅಂತ್ಯದಲ್ಲಿ ಸುಸ್ತಾಗಿತ್ತು ಎಂದು ಉಷಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
1988ರ ಸಿಯೋಲ್ ಒಲಿಂಪಿಕ್ಸ್ ವೇಳೆ ಗಾಯಗೊಂಡ ಉಷಾ ಪದಕ ಗೆಲ್ಲಲಾಗಲಿಲ್ಲ. ನಂತರ 1990ರ ಬೀಜಿಂಗ್ ಏಶ್ಯನ್ ಗೇಮ್ಸ್ ನಲ್ಲಿ ಮೂರು ಪದಕ ಗೆದ್ದ ಪಿ.ಟಿ ಉಷಾ ಅದೇ ವರ್ಷ ವಿದಾಯ ಹೇಳಿದರು. 1991ರಲ್ಲಿ ವಿ ಶ್ರೀನಿವಾಸ್ ಎಂಬವರನ್ನು ಉಷಾ ವಿವಾಹವಾದರು. 1998ರ ಏಶ್ಯನ್ ಗೇಮ್ಸ್ ಗೆ ಮತ್ತೆ ಟ್ರ್ಯಾಕ್ ಗೆ ಮರಳಿದ ಪಯ್ಯೋಲಿ ಎಕ್ಸ್ ಪ್ರೆಸ್ ಉಷಾ 200 ಮೀಟರ್ ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದರು.
ಪ್ರಶಸ್ತಿಗಳು
1983ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಪಿ ಟಿ ಉಷಾ, 1985ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತನ್ನ ಓಟದ ಜೀವನದಲ್ಲಿ ಒಟ್ಟು 101 ಪದಕಗಳಿಗೆ ಕೊರಳೊಡ್ಡಿದ್ದ ಉಷಾ, ಶತಮಾನದ ಕ್ರೀಡಾಪಟು ಎಂಬ ಪುರಸ್ಕಾರಕ್ಕೆ ಪಾತ್ರರಾಗಿದ್ದರು.
ಕೀರ್ತನ್ ಶೆಟ್ಟಿ ಬೋಳ