Advertisement
ನಿರ್ದೇಶನದಲ್ಲಿ, ಬರವಣಿಗೆಯಲ್ಲಿ ನನಗೆ ಯೋಗ “ಪಾಗ’ ಇದೆ ಅಂತಾರೆ. ಆದರೆ ನಾನು ಇದಾವುದನ್ನೂ ಗಿಟ್ಟಿಸಿಕೊಳ್ಳಬೇಕು ಅಂದುಕೊಂಡು ಬಂದವನಲ್ಲ. ಇವತ್ತು ನಾನು ನಿರ್ದೇಶಕ, ಚಿತ್ರ ಸಾಹಿತಿ, ನಿರ್ಮಾಪಕ ಇತ್ಯಾದಿಗಳು ಸೇರಿ ಮಲ್ಟಿಪಲ್ ಫ್ರಾಕ್ಚರ್ ಆಗಿ ಆರೋಗ್ಯದಿಂದಿರುವವನು ಎನ್ನಬಹುದು. ಇವತ್ತು ನನ್ನನ್ನು ಬರಹಗಾರ ಅಂತಾರೆ. ಆದರೆ ಅಂದು ನಾನು ಶಾಲೆಗೆ ಹೋಗುವುದೇ ನನ್ನ ಮಟ್ಟಿಗೆ ದೊಡ್ಡ ಸಾಹಸವಾಗಿತ್ತು. ಮನೆಯಿಂದ ಹೊರಟರೆ ದಾರಿಯಲ್ಲಿ ಸಿಗುವವರನ್ನೆಲ್ಲಾ ಮಾತಾಡಿಸಿ, ಕೀಟಲೆಗಳನ್ನು ಮಾಡಿ ಶಾಲೆ ತಲುಪುವಷ್ಟರ ಹೊತ್ತಿಗೆ ಪ್ರೇಯರ್ ಮುಗಿದಿರುತ್ತಿತ್ತು. ನನ್ನನ್ನು ಬೇಗ ಶಾಲೆ ತಲುಪಿಸಲು ಅಣ್ಣ ಅಕ್ಕಂದಿರೆಲ್ಲಾ ಸರ್ಕಸ್ ಮಾಡುತ್ತಿದ್ದರು. ನಮ್ಮ ತಂದೆ ತಿಳುವಳ್ಳಿಯ ರಾಮಚಂದ್ರ ಭಟ್ ಅಂತ. ಅದೇ ಊರಿನ ಬಸ್‌ಸ್ಟ್ಯಾಂಡ್ ಬಳಿ ಒಂದು ಹೊಟೇಲ್ ನಡೆಸುತ್ತಿದ್ದರು. ನಮ್ಮದು ಏಳು ಮಕ್ಕಳಿದ್ದ ದೊಡ್ಡ ಕುಟುಂಬ, ನಾನೇ ಕೊನೆಯವನು. ಎಲ್ಲರಿಗೂ ನನ್ನ ಮೇಲೆ ಮುದ್ದು. ಅಣ್ಣ-ಅಕ್ಕಂದಿರೆಲ್ಲಾ ಪಾಳಿ ಮೇಲೆ ನನ್ನನ್ನು ಎತ್ತಿಕೊಂಡು ಓಡಾಡುತ್ತಿದ್ದರು.. ಒಂದು ಮತ್ತು ಎರಡನೇ ಕ್ಲಾಸಿನ ಟೀಚರನ್ನು ನಾವು “ಅಕ್ಕೋರು’ ಎನ್ನುತ್ತಿದ್ದೆವು. ಅವರು ಬಂದು “ರಾಜನನ್ನು ಶಾಲೆಗೆ ಕಳುಹಿಸಬೇಡಿ. ಮೈಂಟೇನ್ ಮಾಡಲು ಆಗೋದಿಲ್ಲ’ ಎಂದು ಅಳುತ್ತಿದ್ದರು. ನನ್ನ ಅಮ್ಮ ಗೋಳು ಕೇಳುತ್ತಾ ಕೇಳುತ್ತಾ “ಅವನನ್ನು ನಾವು ಮನೆಯಲ್ಲೂ ಇಟ್ಟು ಕೊಳ್ಳಲು ಆಗುವುದಿಲ್ಲ’ ಎಂದು ಟೀಚರ್ ಜೊತೆ ಅಳಲು ಶುರು ಮಾಡುತ್ತಿದ್ದರು.
Related Articles
Advertisement
ಓಂಕಾರ್ ಸ್ಟುಡಿಯೋಸ್‌ನ ಮಾಲೀಕರು ದೂರದರ್ಶನಕ್ಕೆ ಒಂದು ಧಾರಾವಾಹಿ ನಿರ್ಮಾಣ ಮಾಡುತ್ತಿದ್ದರು. ಒಂದು ದಿನ ಎಪಿಸೋಡ್ ಡೈರೆಕ್ಟರ್ ಬರದ ಕಾರಣ, ಆ ಹುಡುಗನ ಕೈಯಲ್ಲಿ ಮಾಡಿಸಿಬಿಡಿ ಅಂದರು. ಇದು ನನಗೆ ಅರಗಿಸಿಕೊಳ್ಳದ ವಿಷಯವಾಗಿತ್ತು. ಆ ಎಪಿಸೋಡ್ನಲ್ಲಿ ವೈಶಾಲಿ ಕಾಸರವಳ್ಳಿ ನಟಿಸುತ್ತಿದ್ದರು, ನನಗೆ ತೋಚಿದಂಗೆ ಮಾಡಿ ಮುಗಿಸಿದೆ. ಅದು ನನ್ನ ಮೊದಲ ನಿರ್ದೇಶನ. ಈ ಮಧ್ಯೆ ಬಿ.ಸುರೇಶ್ “ಚಕ್ರ’ ಸೀರಿಯಲ್ ಕೊಡಿಸಿದ್ರು. ಸಾಧನೆ ಸೀರಿಯಲ್ಗೆ ಕೆಲಸ ಮಾಡಿದೆ. ತಿರುವು ಅಂತ ಸಿಕ್ಕಿದ್ದೇ ಇಲ್ಲಿ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಅನ್ನೋ ಸೀರಿಯಲ್ಗೆ ಕರಿಸುಬ್ಬು ನಟಿಸಲು ಬಂದಿದ್ದರು. ಅವರ ಮೇಲೆ ನಾನು ಆವತ್ತು ಕೂಗಾಡಿದ್ದೆ. ಈ ರೀತಿ ಎಗರಾಡಿದ್ದೇ, ಅವರಿಗೆ ಇಷ್ಟವಾಗಿ ನನಗೆ ಸಿನಿಮಾ ಮಾಡುವ ಆಫರ್ ನೀಡಿದರು. ಆಗ ಆಗಿದ್ದೇ “ಮಣಿ’ ಚಿತ್ರ.
ಮಣಿ ಸಿನಿಮಾದ ಎಡಿಟಿಂಗ್ ನಡೆಯುತ್ತಿತ್ತು, ಆಗ ರಾಜೇಶ್ ರಾಮನಾಥ್ ಸಿನಿಮಾವನ್ನು ಸುದೀಪ್‌ಗೆ ತೋರಿಸಿದರು. ಅವರು ತಕ್ಷಣವೇ “ರಂಗ ಎಸ್‌ಎಸ್‌ಎಲ್ಸಿ’ ಸಿನಿಮಾ ನೀಡಿದರು. ಮಣಿ ವಿಮರ್ಶಕರನ್ನು ಸೆಳೆದು, ಕಮರ್ಷಿಯಲ್ ಆಗಿ ಫೇಲ್ ಆಯಿತು. ರಂಗ ತಕ್ಕ ಮಟ್ಟಿಗೆ ಓಡಿತಾದರೂ ಕ್ರಿಟಿಕಲಿ ಏನೂ ಆಗಲಿಲ್ಲ. ಅಷ್ಟು ದೊಡ್ಡ ನಟ, ಒಳ್ಳೆ ಸೆಟಪ್ ಇದ್ದರೂ ಚಿತ್ರವನ್ನು ಗೆಲ್ಲಿಸಲಾಗಲಿಲ್ಲ ಎಂಬ ಆಪಾದನೆಯ ಜೊತೆ ನಾನು ಕಾರ್ಪೊರೇಟೆ ವಾಪಾಸ್ ಹೋದೆ. ಕನ್ನಡ ಮತ್ತು ಹಿಂದಿ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಸಹ ನಾನು ಕೆಲಸ ಮಾಡಿದ್ದೇನೆ. “ಕಭೀ ಕಭೀ ಮೇರೇ ದಿಲ್ ಮೇ’ ಎಂಬ ಅಮಿತಾಭ್ ಬಚ್ಚನ್ ಧ್ವನಿಯನ್ನು ಬಾಲ್ಯದಿಂದ ಅನುಕರಿಸಿದ್ದು ಪ್ರಾಯಶಃ ನನ್ನ ಕಂಠದಾನ ಕಿತಾಪತಿಗಳಿಗೆ ಸಹಕಾರಿಯಾಯಿತು.
ಸಿಹಿಕಹಿ ಚಂದ್ರು ಅವರ ಜತೆ ಧಾರಾವಾಹಿಯೊಂದಕ್ಕೆ ಕೆಲಸ ಮಾಡುವಾಗ ಗಣೇಶ್, ಸೂರಿ, ದುನಿಯಾ ವಿಜಯ…, ಪ್ರೀತಂ ಗುಬ್ಬಿ, ಶ್ರೀನಗರ ಕಿಟ್ಟಿ, ತುಷಾರ್ ರಂಗನಾಥ್, ವಿಕಾಸ್, ನಾಗಶೇಖರ್ ಹಾಗೂ ಅಸಂಖ್ಯಾತ ಸ್ನೇಹಿತರು ಸಿಕ್ಕಿದ್ದರು. ನಾವೆಲ್ಲಾ “ಗೂಡು’ ಎಂಬ ಬಸವನಗುಡಿಯ ನನ್ನ ಬಾಡಿಗೆ ಮನೆಯಲ್ಲಿ ಸೇರುತ್ತಿಲ್ಲೆವು. ಆಗ ನಮ್ಮನ್ನು ನೋಡಿಕೊಳ್ಳುತ್ತಿದ್ದುದು ಪ್ರಕಾಶ್ ಭಟ್ ಎಂಬ ನಮ್ಮ ಅಣ್ಣ. ಅವನು ಈಗಿಲ್ಲ. ಆ ಟೈಮ್ನಲ್ಲಿ ಗಣೇಶನಿಗೆ ಒಂದು ಕಥೆಯ ತರಹ ಕೇಳುವಂತಹದ್ದೇನನ್ನೋ ಹೇಳಿದ್ದೆ. ನಂಗೆ ಆಗಲೂ ಈಗಲೂ ನೆಟ್ಟಗೆ ಬಾಯಲ್ಲಿ ಕಥೆ ಹೇಳಲು ಬರುವುದಿಲ್ಲ.
ಅಷ್ಟೊತ್ತಿಗಾಗಲೇ ಗಣೇಶ “ಚೆಲ್ಲಾಟ’ ಸಿನಿಮಾ ಮಾಡಿದ್ದ. ಹೀಗೆ ಒಂದು ದಿನ ರಾಜರಾಜೇಶ್ವರಿ ನಗರದಲ್ಲಿ ಯಾವುದೋ ಶೂಟಿಂಗ್ ಮಾಡುತ್ತಿದ್ದೆ. ಅಲ್ಲಿಗೆ ನನ್ನನ್ನು ಹುಡುಕಿಕೊಂಡು ಬಂದ ಗಣೇಶ, ನಮ್ಮ ಊರಿನಲ್ಲಿ ಒಬ್ಬರು ಪೊ›ಡ್ನೂಸರ್ ಇದ್ದಾರೆ. ಅವರಿಗೆ ಕತೆ ಹೇಳಿ. ನಾನು ಹೇಳಿದರೆ ಸಿನಿಮಾ ಮಾಡುತ್ತಾರೆ ಅಂದ. ನಾನು, ಬೇಡ, ಈಗಾಗಲೇ ಎರಡು ಸಿನಿಮಾ ಮಾಡಿ ದಬ್ಟಾಕ್ಕಿಕೊಂಡಿದ್ದೇನೆ ಎಂದೆ. ಆದರೂ ಬಿಡಲಿಲ್ಲ ಗಣೇಶ. ಅವನ ಪ್ರೀತಿಗೆ ಸಾರ್ವಕಾಲಿಕ ಶರಣು. ಮಾರನೇ ದಿನ ನಾನು ಪ್ರೀತಂ ಮತ್ತು ಗಣೇಶ ಈ.ಕೃಷ್ಣಪ್ಪನವರ ಭೇಟಿಗೆ ಹೋದೆವು. ಅವತ್ತು ಕೃಷ್ಣಪ್ಪನವರು ಎಣ್ಣೆ ಸ್ನಾನ ಮಾಡುತ್ತಿದ್ದರು. ಎಣ್ಣೆ ಮೆತ್ತಿದ ಒಂದು ಕಣ್ಣು ತೆಗೆದು ನಮ್ಮತ್ತ ನೋಡಿ, “ಹೋಗಿ ಮಾಡ್ಕಳ್ರಪ್ಪಾ’ ಎಂದು ಹೇಳಿ ಕಳುಹಿಸಿದರು. ನನಗೆ ಆಶ್ಚರ್ಯ. ಅಷ್ಟು ಸುಲಭಕ್ಕೆ ಎಣ್ಣೆ ಸ್ನಾನದ ಟೈಮಿನಲ್ಲಿ, ಸಿನಿಮಾ ಮಾಡಿ ಎಂದರೆ ಹೇಗೆ ಮಾಡುವುದು?! ಅದರಲ್ಲೂ ನನ್ನ ಮೊದಲ ಎರಡೂ ಸಿನಿಮಾಗಳು ಮಾರುಕಟ್ಟೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದವು. ನಾನು ತೀರಾ ಯೋಚಿಸದೇ, ನನ್ನ “ಘನ ಇತಿಹಾಸ’ವನ್ನು ಈ.ಕೃಷ್ಣಪ್ಪನವರಿಗೆ ಹೇಳಿಬಿಟ್ಟೆ. ಕ್ಷಣಕಾಲ ನನ್ನನ್ನು, ಗಣೇಶನನ್ನು ದಿಟ್ಟಿಸಿದ ಕೃಷ್ಣಪ್ಪ, “ನಿಜಾ ಹೇಳಿದಿಯ, ಹೋಗು ಒಳ್ಳೆಯದಾಗ್ತದೆ’ ಎಂದರು. ಹಾಗೇ, ಆರಂಭವಾಗಿದ್ದೇ ಮುಂಗಾರು ಮಳೆ’. ಅಲ್ಲಿಯವರೆಗೂ ನನ್ನ ಸಿನಿಮಾಗಳಿಗೆ ಸೂರಿ ಡೈಲಾಗ್ ಬರೆದಿದ್ದ. ಮುಂಗಾರು ಮಳೆಯಲ್ಲಿ ನಾನು ಮೊದಲ ಬಾರಿಗೆ ಡೈಲಾಗ್ಗಳನ್ನು ಬರೆದೆ. ಪ್ರೇಮದ ಬಗ್ಗೆ ಒಂಚೂರು ಉಲ್ಟಾ-ಸೀದಾ ಎನಿಸುವ ಬರವಣಿಗೆ ಇರಬೇಕು, ಮುಖ್ಯವಾಗಿ ಯುವಕರನ್ನು ಸಿನಿಮಾ ತಟ್ಟಬೇಕು ಎನ್ನವುದು ನನ್ನಲ್ಲಿತ್ತು. ಈ ನಿಟ್ಟಿನಲ್ಲಿ ಮಾಡಿದ ಎಲ್ಲಾ ಕೆಲಸಗಳು ಊಹಿಸಲಸಾಧ್ಯವಾಗದಷ್ಟು ದೊಡ್ಡ ಮಟ್ಟದಲ್ಲಿ ವರ್ಕ್ ಆಗುತ್ತೆ ಎನ್ನುವುದು ನನ್ನನ್ನು ಸೇರಿಸಿ ಯಾರಿಗೂ ಗೊತ್ತಿರಲಿಲ್ಲ. ಮೊದಲ ಎರಡು ವಾರ ಸಿನಿಮಾ ಗೆಲ್ಲುವ ಯಾವುದೇ ಲಕ್ಷಣ ಇರಲಿಲ್ಲವೆನ್ನಿ. ಉತ್ತರ ಕರ್ನಾಟಕದಿಂದ ಪ್ರಿಂಟುಗಳೆಲ್ಲಾ ವಾಪಸ್ಸು ಬಂದವು. ಸಣ್ಣಪುಟ್ಟ ಟಿವಿ ಕಾರ್ಯಕ್ರಮಗಳಲ್ಲಿ ತಂಡದ ಜೊತೆ ಪ್ರಚಾರಕ್ಕೆ ಯತ್ನಿಸುತ್ತಿದ್ದೆ. ಅದೇನಾಯಿತೋ ಇದುವರೆಗೂ ಗೊತ್ತಿಲ್ಲ, ಜನ ಚಿತ್ರಮಂದಿರದ ಕಡೆಗೆ ಬರತೊಡಗಿದರು. ಉತ್ತರ ಕರ್ನಾಟಕದಲ್ಲಿ ಒಂದು ತಿಂಗಳ ನಂತರ ರೀ-ರಿಲೀಸ್ ಮಾಡಿದೆವು. ನಾಲ್ಕನೇ ವಾರ ಒಂದೆರಡು ರಜೆಗಳಿತ್ತು. ಆಗ ಸಿನಿಮಾ ಎದ್ದು ನಿಲು¤. ಆಮೇಲೆ ನಡೆದಿದ್ದೆಲ್ಲಾ ಇತಿಹಾಸ.. ನಾನು “ಮನಸಾರೆ’ ಮಾಡುತ್ತಿದ್ದಾಗ, ಅದೇ ನಿರ್ಮಾಪಕರಿಗೆ ಸೂರಿ ಜಂಗ್ಲಿಮಾಡುತ್ತಿದ್ದ. ಆಗ ಅವನು ನನ್ನನ್ನು ಹಾಡು ಬರೆಯುವಂತೆ ಮಾಡಿದ. ಹಾಗೆಯೇ ಜಯಂತ ಕಾಯ್ಕಿಣಿಯವರ ಸಹವಾಸದಿಂದ ನನ್ನ ಬರವಣಿಗೆಗೆ ಚಿಂತನೆಗೆ ವಿಪರೀತ ಒಳ್ಳೆಯ ದಿಕ್ಕುಗಳು ಸಿಕ್ಕವು. ಅವರಿಬ್ಬರಿಗೆ ನಾನು ಋಣಿ. ಇವೆಲ್ಲದರ ಜತೆಜತೆಯಲ್ಲಿ ಮದುವೆಯಾಯಿತು, ಹೆಂಡತಿಯ ಹೆಸರು ರೇಣುಕ. ಇಬ್ಬರು ಹೆಣ್ಣು ಮಕ್ಕಳಾದರು, ಪೂರ್ವಿ ಮತ್ತು ಪಂಚಮಿ. ಯೋಗರಾಜ ಮೂವೀಸ್ ಹುಟ್ಟಿತು.
ಏನೇ ಇರಲಿ, ನಾನು ನಿರ್ದೇಶಕನಾಗಬೇಕು ಎಂದುಕೊಂಡು ನಿರ್ದೇಶಕನಾದವನಲ್ಲ, ಏನೇನೋ ಆಗಬೇಕು ಎಂದು ನಿರ್ದೇಶಕನಾಗಿದ್ದೇನೆ. ಆದರೂ ಈ ಜರ್ನಿ ಒಂಥರಾ ಚೆನ್ನಾಗಿದೆ. ಪೂರ್ಣಪ್ರಮಾಣದ ಕವಿ ಅಲ್ಲವಾದ್ದರಿಂದ ನಾನು ಎರಡೂ ಬಣಗಳಲ್ಲಿ ಇಡ್ಲಿ ತಿನ್ನುತ್ತಾ ಆರಾಮಾಗಿದ್ದೇನೆ.
— ಯೋಗರಾಜ್ ಭಟ್