Advertisement

ಲೈಫ್ ಆಫ್ ಪೈಲ್ವಾನ್

10:48 AM Oct 06, 2019 | Lakshmi GovindaRaju |

ಜಟ್ಟಿಗಳ ನೈಜ ಕತೆ ಕೇಳುವಾಗ, ಈಗಲೂ ಮೈಮನಗಳಲ್ಲಿ ರೋಮಾಂಚನ ಹುಟ್ಟುತ್ತದೆ. ಸಮಾಜದ ಕಣ್ಣಿನಲ್ಲಿ ಹೀರೋ ಆಗಿ, ಸಿನಿಮಾ ಪರದೆಗೂ ಜಟ್ಟಿಗಳು ಜಿಗಿದು, ಮೆರೆದಾಡಿದ್ದು, ದಸರೆ ಕುಸ್ತಿಯ ಹೊತ್ತಿಗೆ ಸವಿನೆನಪಾಗಿ ಕಾಡುತ್ತಿದೆ. ಆಗಿನಂತೆ ಗರಡಿಮನೆಗಳು ಈಗಿಲ್ಲ. ಪೈಲ್ವಾನರ ಬದುಕು- ಆಹಾರಶೈಲಿಗಳೂ ಮೊದಲಿನಂತಿಲ್ಲ. ಮಲ್ಲ ಪ್ರಪಂಚದಲ್ಲಿ ಲೇಖಕರು ಓಡಾಡಿ ಕಂಡ, ಚಿತ್ರಣವನ್ನು ಇಲ್ಲಿ ನಿಮ್ಮ ಮುಂದಿಟ್ಟಿದ್ದಾರೆ…

Advertisement

ಕರುನಾಡು ಕಂಡ ಮಲ್ಲಣ್ಣನ ಪವಾಡಗಳು…
ಕುಸ್ತಿ ಅಥವಾ ಮಲ್ಲಯುದ್ಧವು ನಮ್ಮ ನೆಲದಲ್ಲಿ, ನಮ್ಮೊಳಗೆ ಹಾಸು ಹೊಕ್ಕಾಗಿದೆ. ಹೀಗಾಗಿ, ನಾವು ಆಡುವ ನಿತ್ಯದ ಮಾತುಗಳಲ್ಲೂ “ಕುಸ್ತಿಕೋಶ’ದ ಹಲವು ಪದಗಳು, ನಮಗೆ ಗೊತ್ತಿಲ್ಲದಂತೆ ನುಸುಳಿಬಿಡುತ್ತವೆ. ಉದಾ: ಅನಾಮತ್‌ ಎತ್ತಿ ಬಿಟ್ಟ, ಜಂಗೀಕುಸ್ತಿ, ಜಟ್ಟಿ ಜಾರಿದರೆ ಅದು ಒಂದು ಪಟ್ಟು, ಜಟ್ಟಿ ಬಿದ್ರೂ ಮೀಸೆ ಮಣ್ಣಾಗಲಿಲ್ಲ- ಹೀಗೆ ಹತ್ತು ಹಲವು. ಮೈಕಟ್ಟು, ನುಡಿಗಟ್ಟುಗಳಿಂದಲೇ, ಪೈಲ್ವಾನರು ಸಮಾಜವನ್ನು ಅತಿ ವೇಗದಲ್ಲಿ ಪ್ರಭಾವಿಸಿಬಿಟ್ಟರು. ಜಟ್ಟಿಗಳ ಜೀವನಶೈಲಿಯಂತೂ ಈಗಲೂ ಅನೇಕರ ಕಣ್ಣಲ್ಲಿ ಕಟ್ಟಿದೆ.

ಹಿಂದೆ ಸ್ವತಃ ರಾಜನೇ ಮಲ್ಲಯುದ್ಧ ಅಭ್ಯಸಿಸುತ್ತಿದ್ದಿದ್ದು, ಇದಕ್ಕೆ ಕಾರಣ ಇದ್ದಿರಬಹುದು. ಕ್ರಿ.ಶ. 1638ರಿಂದ 1659ರವರೆಗೆ ಮೈಸೂರನ್ನು ಆಳಿದ ಕಂಠೀರವ ನರಸರಾಜ ಒಡೆಯರ್‌, ನಿತ್ಯವೂ ಎಮ್ಮೆಯ ಕರುವನ್ನು ಹೆಗಲ ಮೇಲೆ ಕೂರಿಸಿಕೊಂಡು, ಚಾಮುಂಡಿಬೆಟ್ಟವನ್ನು ಹತ್ತಿ ಇಳಿಯುತ್ತಿದ್ದರಂತೆ. ಒಮ್ಮೆ ತಿರುಚಿನಾಪಳ್ಳಿಯಿಂದ ಗಟ್ಟಿಗನೂ, ಮಹಾಗರ್ವಿಯೂ ಆದ ಒಬ್ಬ ಮಲ್ಲ, ಮೈಸೂರು ನಗರಕ್ಕೆ ಬಂದಿದ್ದ. ಹಾಗೆ ಬಂದವನು, ಅಲ್ಲಿನ ಪೈಲ್ವಾನರನ್ನು ಮಾತುಗಳಲ್ಲಿ ಕೆಣಕಿದ್ದ. ತನ್ನನ್ನು ಸೋಲಿಸುವವರೇ ಇಲ್ಲವೆಂದು ಬೀಗುತ್ತಿದ್ದ.

ಅದು ರಣಧೀರ ಕಂಠೀರವ ಅರಸರ ಕಿವಿಗೂ ಬಿತ್ತು. ಅವರು ವೇಷ ಮರೆಸಿಕೊಂಡು ಹೊರಟೇಬಿಟ್ಟರು. ಕಿಕ್ಕಿರಿದ ಜನಸ್ತೋಮ. ಮಹಾಗರ್ವಿಯ ಮುಂದೆ, ಮಹಾರಾಜರು ತೊಡೆ ತಟ್ಟುವ ರೋಮಾಂಚಕ ಕ್ಷಣ. ಅವನು ಹಾಕಿದ ಪಟ್ಟಿಗೆ ಪ್ರತಿ ಪಟ್ಟು ಹಾಕುತ್ತಾ, ಜಟ್ಟಿಯ ಸೊಕ್ಕನ್ನು ಅಡಗಿಸಿಯೇಬಿಟ್ಟರು. ಮಟ್ಟಿಯಲ್ಲಿ ಮಲಗಿದ ಮಲ್ಲ, ಮತ್ತೆ ಮೇಲೇಳಲು ಕೆಲ ಕಾಲವೇ ಬೇಕಾಯಿತು. ಇಂಥ ನೈಜ ಕಥೆಗಳಿಂದಲೇ, ಜಟ್ಟಿಗಳು ಗಟ್ಟಿಯಾಗಿ, ಜನರ ಮನಸ್ಸಿನಲ್ಲಿ ಅಚ್ಚೊತ್ತಿಬಿಡುತ್ತಿದ್ದರು. 12ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ, ಸರ್ವಜ್ಞ ಸೋಮೇಶ್ವರನು ತನ್ನ “ಮಾನಸೋಲ್ಲಾಸ’ ಎಂಬ ಗ್ರಂಥದಲ್ಲಿ, ಮಲ್ಲರನ್ನು ಮೂರು ವಿಧವಾಗಿ ಗುರುತಿಸಿದ್ದ.

ಶರೀರ, ಆಕಾರ ಮತ್ತು ಮಲ್ಲನ ಶಕ್ತಿ ಸಾಮರ್ಥ್ಯ- ಇವುಗಳ ಆಧಾರದ ಮೇಲೆ “ಚೇಷ್ಠಕ’ ಅಥವಾ ಉತ್ತಮ, ಮಧ್ಯಮನು “ಅಂತರ ಜೇಷ್ಠಕ’, ಕನಿಷ್ಠವನ್ನು “ಗೋವಲ’ನೆಂದು ಕರೆದಿದ್ದ. ಹೆಸರಾಂತ ಕನ್ನಡದ ಲೇಖಕ, ಅಂತಾರಾಷ್ಟ್ರೀಯ ವ್ಯಾಯಾಮ ಪಟು ದಿ| ಕೆ.ವಿ. ಅಯ್ಯರ್‌ ಹೀಗೆ ಬರೆದಿದ್ದಾರೆ: “ಮಲ್ಲರು ಪುಂಡರಲ್ಲ, ಪೋಲಿಗಳಲ್ಲ. ಸಮಾಜದ ರಕ್ಷಣೆಗಾಗಿ ಸದಾಕಾಲ ಕಂಕಣ ಬದ್ಧರಾಗಿ ನಿಲ್ಲುತ್ತಿದ್ದರು. ಹೆಂಗಸರ, ಮಕ್ಕಳ, ಮಾನ ರಕ್ಷಣೆಗಾಗಿ ವೀರಯೋಧರಂತೆ ನಿಲ್ಲುತ್ತಿದ್ದರು’.

Advertisement

ಮೊಲೆ ಹಾಲು ಕೊಟ್ಟರು…: ದೈಹಿಕ ಶಕ್ತಿಯೇ ಮಲ್ಲರಿಗೆ ಧ್ಯಾನ. ಮತ್ತು ಮಲ್ಲ ಹಾಗೇ ಇರಬೇಕೆಂದು ಊರಿನ ಜನರೂ ಅಪೇಕ್ಷೆ ಪಡುತ್ತಿದ್ದರು. ಅನೇಕ ಮಲ್ಲರು, ಊರಿಗೇ ಮಗನಾಗಿ ಬಿಡುತ್ತಿದ್ದರು. ಮೈಸೂರಿನಲ್ಲಿ 70 ವರ್ಷಗಳ ಹಿಂದೆ ಕೊಪ್ಪಲು ಬಸವಯ್ಯನೆಂಬ ಭಾರಿ ಪೈಲ್ವಾನ್‌ ಇದ್ದ. ಕುಸ್ತಿಗೆ ಹೊರಡುವಾಗ ಆ ಊರಿನ ತಾಯಂದಿರುವ ತಮ್ಮ ಮೊಲೆಯ ಹಾಲನ್ನು ಬಸವಯ್ಯ ನವರಿಗೆ ನೀಡುತ್ತಿದ್ದರಂತೆ. ಆ ರೀತಿಯಲ್ಲಿ ಮಲ್ಲರನ್ನು ಕಾಣುವ ಸಂಪ್ರದಾಯವಿತ್ತು. ಕುಸ್ತಿಗೆ ಹೋಗುವ ಮುನ್ನ ಮಲ್ಲರ ತಾಯಿ ಹರಸುತ್ತಿದ್ದ ರೀತಿ ಹೀಗಿತ್ತು.

“ಹೊತ್ತಾರೆ ಹನುಮಾನ ನೆನೆಯುತ್ತಾ ಹಾಡೋನೆ
ಹತ್ತೂರ ಸಿರಿಮಲ್ಲ ನೀನಾಗು,
ಹತ್ತೂರ ಸಿರಿಮಲ್ಲ ನೀನಾಗು ಎಲೆ ಮಗನೇ…’

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಡೆದ ಘಟನೆ. ಮೈಸೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಜನರನ್ನು ಸಂಘಟಿಸಲು ಯತ್ನಿಸುತ್ತಿದ್ದಾಗ, ಜನ ಅಷ್ಟು ಪ್ರತಿಕ್ರಿಯೆ ತೋರಿಸಲಿಲ್ಲ. ಸಂಘಟನಕಾರರು ಆಗ ಮಾಡಿದ ಉಪಾಯವೆಂದರೆ, ಆ ಊರಿನ ದೊಡ್ಡ ಪೈಲ್ವಾನನನ್ನು ಪೊಲೀಸ್‌ ದಸ್ತಗಿರಿ ಮಾಡಿದ್ದಾರೆ. ಆ ಸುದ್ದಿ ಹಬ್ಬಿದಾಗ, ವಿಪರೀತ ಸಂಖ್ಯೆಯಲ್ಲಿ ಜನ ಜಮಾಯಿಸಿ ಪೊಲೀಸ್‌ ಠಾಣೆಯ ಮುಂದೆ ಮುಷ್ಕರ ಹೂಡಿದ್ದರಂತೆ.

ಆಹಾರ ಶೈಲಿ ಹೇಗಿತ್ತು?: ಕುಸ್ತಿಪಟುಗಳಿಗೆ ಪೌಷ್ಟಿಕ ಆಹಾರ- ಮೊಟ್ಟೆ, ಮೀನು, ಮಾಂಸ, ಹಾಲು ಇತ್ಯಾದಿ ಬೇಕಾಗುವುದಷ್ಟೇ. ಎಲ್ಲಾ ಪೈಲ್ವಾನರಿಗೂ ಈ ರೀತಿಯ ಆಹಾರ ಒಂದೇ ಸಮ ದೊರಕುತ್ತಿರಲಿಲ್ಲ. ಇದರಲ್ಲಿ ಬಹಳಷ್ಟು ಜನ ಬಡವರೇ ಇರುತ್ತಿದ್ದರು. ಮಾಂಸಾಹಾರಿಗಳಲ್ಲದೆ, ಸಸ್ಯಾಹಾರಿ ಪೈಲ್ವಾನರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಬಾದಾಮಿ, ಬೆಣ್ಣೆ, ತುಪ್ಪ, ಗಸಗಸೆ, ಕಲ್ಲುಸಕ್ಕರೆ, ಚಪಾತಿ, ರಾಗಿ ರೊಟ್ಟಿ- ಈ ರೀತಿಯ ಆಹಾರ ತೆಗೆದುಕೊಳ್ಳುತ್ತಿದ್ದರು. ಸೇವಿಸುವ ಆಹಾರದಲ್ಲಿ, ಉದ್ದಿನ ಅಂಶವಿರುವ ಪದಾರ್ಥಗಳಿಗೆ ಹೆಚ್ಚು ಆದ್ಯತೆ ಕೊಡುತ್ತಿದ್ದರು.

ಪೈಲ್ವಾನರು “ಥಂಡಾಯಿ’ ಎನ್ನುವ ಒಂದು ಪಾನೀಯವನ್ನು (ಬಹುಶಃ ಪಂಜಾಬಿ ಮೂಲ) ಸೇವಿಸುತ್ತಿದ್ದುದುಂಟು. ಅನೇಕ ಪೈಲ್ವಾನ್‌ಗಳ ಬಗ್ಗೆ ಸಾಕಷ್ಟು ದಂತಕಥೆಗಳಿವೆ. ಅವನು ಇಷ್ಟು ಹಾಲು ಕುಡೀತಾನೆ, ಇಷ್ಟು ಮೊಟ್ಟೆ ತಿಂತಾನೆ ಅಂತೆಲ್ಲ ಕತೆಗಳಿದ್ದವು. ಅವು ಕೆಲವು ನಿಜವೇ ಆದರೂ, ಮತ್ತೆ ಕೆಲವು ಜನರ ಬಾಯಿಯಲ್ಲಿ ಸೇರಿ, ಕಟ್ಟುಕತೆಗಳೇ ಆಗಿಬಿಡುತ್ತಿದ್ದವು. ಇಂಗ್ಲೆಂಡಿನ ನೆಲದಲ್ಲಿ, ಸೆಣಸಾಡಿ ಗೆದ್ದ ಜಗಜ್ಜಟ್ಟಿ ಗಾಮ ಎಂಬಾತ, “ಕಡ್ಲೆಕಾಯಿಯನ್ನು ಹೊಸಕುವ ರೀತಿಯಲ್ಲಿ ಬಾದಾಮಿ ಕಾಯಿಗಳನ್ನು ಎರಡೇ ಎರಡು ಬೆರಳಿನಿಂದ ಹೊಸಕಿ ತಿನ್ನುತ್ತಿದ್ದ’ ಎನ್ನುವ ಮಾತುಗಳೂ ಚಾಲ್ತಿಯಲ್ಲಿದ್ದವು.

ಖಡಕ್‌ ಸಿಂಗ್‌ ಎಂಬ ಪೈಲ್ವಾನ್‌ನನ್ನು ಬೆಂಗಳೂರಿನ ಅರಳೇಪೇಟೆ ದೊಡ್ಡ ಗರಡಿಯ ಉಸ್ತಾದ್‌ ಕೆಂಪಣ್ಣ ಕರೆಸುತ್ತಿದ್ದರು. ಆತನನ್ನು ಹತ್ತಿರದಿಂದ ಕಂಡ, ದೇವನಹಳ್ಳಿಯ ಹಿರಿಯ ಪೈಲ್ವಾನ್‌ ನರಸಿಂಹಯ್ಯ, “ಖಡಕ್‌ ಸಿಂಗ್‌ ದಿನಕ್ಕೆ ಒಂದು ಕೋಳಿಯನ್ನು ಒಬ್ಬನೇ ತಿನ್ನುತ್ತಿದ್ದ. ಗಟಗಟನೆ ಹಾಲು ಕುಡಿಯುವುದರಲ್ಲಿ ನಿಸ್ಸೀಮ. ಹಾಲು ಸ್ವಲ್ಪ ನೀರಾಗಿದೆ ಅಂದರೂ ಅದನ್ನು ಮುಟ್ಟುತ್ತಿರಲಿಲ್ಲ’ ಎನ್ನುತ್ತಾರೆ.

ಬಹುಶಃ ಈಗಿನ ದಿನಗಳಲ್ಲಿ, ಅಂದಿನ ಚಿತ್ರವನ್ನು ಊಹಿಸಿಕೊಳ್ಳುವುದೂ ಕಷ್ಟ. ಅಂಥ ಗರಡಿಮನೆಗಳೂ ಈಗ ಬೆರಳೆಣಿಕೆ. ಪರಂಪರಾಗತ ಮಲ್ಲಶೈಲಿಯಲ್ಲಿ, ಇಂದಿನ ಪೈಲ್ವಾನ್‌ಗಳು ದೇಹ ಸಾಕುವುದು ಅಷ್ಟು ಸುಲಭವೂ ಅಲ್ಲ. ಗರಡಿ ಅಭ್ಯಾಸದ ಬಳಿಕ, ಪೈಲ್ವಾನ್‌ಗೆ ಸಾಕಷ್ಟು ವಿಶ್ರಾಂತಿ ಅತ್ಯವಶ್ಯ. ಹಾಗೆ ನಿದ್ರಿಸುತ್ತ, ಆರಾಮವಾಗಿ, ಕೂರುವುದು, ಇಂದಿನ ವೇಗದ ಕಾಲದಲ್ಲಿ ಅಸಾಧ್ಯ ಕೂಡ. ಪೈಲ್ವಾನ್‌ಗಳನ್ನು ಪೋಷಿಸುವ, ಇವನು ನಮ್ಮ ಆಪತಾºಂಧವ ಎಂದು ಪರಿಗಣಿಸುವ ಸಮಾಜದ ಮನಸ್ಸುಗಳೂ ಬದಲಾಗಿವೆ.

ಅಣ್ಣಾವ್ರಿಗೆ ಪ್ರಿಯವಾಗಿದ್ದ ಏಕ್‌ಲಾಂಗ್‌
ಡಾ. ರಾಜ್‌ ಕುಮಾರ್‌ ನಟಿಸಿರುವ ಹಲವು ಚಿತ್ರಗಳಲ್ಲಿ ಕುಸ್ತಿಯ ಸನ್ನಿವೇಶಗಳಿರುವುದು ಗೊತ್ತಿರುವ ಸಂಗತಿಯೇ. ಈ ಪಾತ್ರಗಳನ್ನು ಇವರಿಗೆಂದೇ ಸೃಷ್ಟಿಸುತ್ತಿದ್ದರೋ ಇಲ್ಲಾ ಆ ಥರದ ಅವಕಾಶಗಳು ಇವರನ್ನು ಮಾತ್ರವೇ ಹುಡುಕಿ ಕೊಂಡು ಬರುತ್ತಿದ್ದವೋ; ಒಟ್ಟಿನಲ್ಲಿ ಅಣ್ಣಾವ್ರು ಸೊಗಸಾಗಿ ನಟಿಸುತ್ತಿದ್ದರು. “ಮಯೂರ’, “ರಣಧೀರ ಕಂಠೀರವ’, “ಶ್ರೀಕೃಷ್ಣ ದೇವರಾಯ’, “ಹುಲಿಯ ಹಾಲಿನ ಮೇವು’ …- ಕೆಲ ಉದಾಹರಣೆ ಗಳಷ್ಟೇ. ಬೆಂಗಳೂರು ಅಲ್ಲದೆ, ಕೊಲ್ಹಾಪುರದಲ್ಲಿನ ಗರಡಿಮನೆಗಳಲ್ಲೂ ಅಂಗಸಾಧನೆಗೈದಿದ್ದ ಅಣ್ಣಾವ್ರು, ಮಲ್ಲಯುದ್ಧದ ಪಟ್ಟುಗಳನ್ನು ಚೆನ್ನಾಗಿ ಅರಿತಿದ್ದರು. ಒಮ್ಮೆ ಬೆಂಗಳೂರಿನ ಗಿರಿನಗರದಲ್ಲಿ ಒಂದು ಕುಸ್ತಿ ಪಂದ್ಯ ವೀಕ್ಷಿಸಿಯಾದ ಮೇಲೆ ಮಾಡಿದ ಭಾಷಣದಲ್ಲಿ, “ಯಾರಾದರೂ ಏಕ್‌ಲಾಂಗ್‌ ಪಟ್ಟನ್ನು ಮಾಡ್ತಾರೇನೋ ಅಂತ ಕಾದಿದ್ದೆ. ಯಾಕೋ ಯಾರೂ ಮಾಡಲಿಲ್ಲ. ಅದು ನನಗೆ ಇಷ್ಟದ ಪಟ್ಟು’ ಎಂದಿದ್ದರು.

ಏನ್ಲ , ಏ ಐವಾನ್‌… ಎಂ.ಪಿ. ಶಂಕರ್‌ ಪಾಠ
ಕುಸ್ತಿಯ ಆಳ- ಅಗಲ ಅರಿತಿದ್ದ ಇನ್ನೊಬ್ಬ ಹಿರಿಯ ನಟ, ದಿ. ಎಂ.ಪಿ. ಶಂಕರ್‌, ತೆರೆಯ ಮೇಲೂ ಪೈಲ್ವಾನ್‌ ರೂಪಿಯೇ ಎನ್ನಬಹುದು. ಖಳನಾಯಕ ಪಾತ್ರ ಮಾಡಿದರೂ, ನಾಯಕನಿಗೆ ಪ್ರತಿಯೇಟು ನೀಡುವಾಗ, ಆ ಕಾದಾಟ ನೋಡಲು, ಅನೇಕರು ಕಾತರರಾಗುತ್ತಿದ್ದರು. ಇವರ ದೇಹದಾಡ್ಯìವನ್ನು ಗುರುತಿಸಿ, ಹುಣಸೂರು ಕೃಷ್ಣಮೂರ್ತಿ ಅವರು “ಸತ್ಯಹರಿಶ್ಚಂದ್ರ’ ಸಿನಿಮಾದಲ್ಲಿ ವೀರಬಾಹುವಿನ ಪಾತ್ರ ನೀಡಿದ್ದರಂತೆ. ಬಲಿಷ್ಠ, ಭಾರ ಹೆಜ್ಜೆಗಳನ್ನು ಹಾಕುತ್ತಾ ನಡೆಯುವುದು, ಕುಣಿಯುವುದನ್ನು ನೋಡಿದರೆ, ಸಾಕ್ಷಾತ್‌ ಯಮರಾಜನ ಕಲ್ಪನೆಯೇ ಬಂದುಬಿಡುತ್ತಿತ್ತು.

ಪುಟ್ಟಣ್ಣ ಕಣಗಾಲ್‌ ನಿರ್ದೇಶನದ, ವಿಷ್ಣುವರ್ಧನ್‌ ನಟನೆಯ “ನಾಗರಹಾವು’ ಚಿತ್ರದಲ್ಲಿ ಗರಡಿ ಉಸ್ತಾದ್‌ನ ಪಾತ್ರ ಇವರಿಗೆ ಹೇಳಿಮಾಡಿಸಿ­ದ್ದಾಗಿತ್ತು. ಪೈಲ್ವಾನರು ಸಮಾಜದಲ್ಲಿ ಹೇಗೆ ವರ್ತಿಸಬೇಕೆಂಬು­ದರ ಚಿತ್ರಣವನ್ನು ಇಲ್ಲಿ ನೀಡಲಾಗಿದೆ. ಗರಡಿಮನೆಯ ಶಿಷ್ಯ ರಾಮಾಚಾರಿ, ಪ್ರಾಂಶುಪಾಲರನ್ನು ಕಟ್ಟಿಹಾಕಿ, ಅನುಚಿತವಾಗಿ ವರ್ತಿಸಿದಾಗ, ಉಸ್ತಾದ್‌ ಬಂದು ಹೀಗೆ ಹೇಳುತ್ತಾನೆ: “ಏನ್ಲ ಏ ಐವಾನ್‌, ಏನೋ ಬಾಳ ದೊಡ್ಡ ಕೆಲ್ಸ ಅಂತ ನಿಮ್‌ ಗುರುಗೋಳ್ಗೆ ಔಮಾನ ಮಾಡೆª. ದೊಡ್‌ಕೆಲ್ಸ ಸಾಧಿಸ್‌ಬುಟ್ಟೆ. ಏ ತಿಳ್ಕೊ… ಹೊಡಿಬೇಕು ಬಡಿಬೇಕು, ಯಾರ್‍ನಾ? ಕಳ್ಳರನ್ನ, ಮೋಸ ಮಾಡೋರ್ನ, ಉಪ್ಪ್ ತಿಂದ್‌ ಮನೆಗೆ ದ್ರೋಹ ಬಗೆಯೋರಿಗೆ, ಅದು ಬುಟ್‌ಬುಟ್ಟು… ಏ ಐವಾನ್‌, ಮನ್ಸ ದೇಹ್‌ದಾಗೆ ಶಕ್ತಿ ಬೆಳೆಸ್ಕೋಬೇಕು, ಅದು ಬುಟ್‌ಬುಟ್ಟು, ಮನಸ್ನಾಗೆ ರೋಷ, ದ್ವೇಸ ಬೆಳೆಸ್ಕೋಬಾರ್ಧು, ತಿಳಿತೇನ್ಲ…’

ಮೈ ಬಿಸಿ ಆರಿದ ಮೇಲೆ ತಣ್ಣೀರ ಸ್ನಾನ: ಬೆಳಗಾವಿಯಲ್ಲಿ ರಸ್ತೆಗೆ ಹೊಂದಿಕೊಂಡಂತೆ, ಬಾಂದರಗಲ್ಲಿ ಗರಡಿಮನೆ ಇದೆ. ಈ ಗರಡಿಯ ಹಿತ್ತಲಿನಲ್ಲಿ ಇವತ್ತಿಗೂ ಒಂದು ಬಾವಿ ಇದೆ. ಪೈಲ್ವಾನರು ಸಾಧನೆ ಮಾಡಿ, ಏರಿದ ಮೈಬಿಸಿಯನ್ನು ತಂಪಾಗಿಸಿದ ನಂತರ, ಕೊಡಪಾನಗಳಲ್ಲಿ ಬಾವಿ ನೀರನ್ನು ಸೇದಿ ಸ್ನಾನ ಮಾಡುತ್ತಿದ್ದರು. ನಾಡಿನ ಬೇರೆ ಬೇರೆ ಕಡೆಯ ಪೈಲ್ವಾನ್‌ಗಳು, ಗರಡಿ ಅಭ್ಯಾಸದ ಬಳಿಕ, ಹೊಳೆ- ನದಿಗಳಲ್ಲಿ ಈಜುವ ಪರಿಪಾಠವನ್ನೂ ರೂಢಿಸಿಕೊಂಡಿದ್ದರು.

ರಾಜನಿಂದ ತಾಂಬೂಲಾತಿಥ್ಯ: ವಿಜಯ ನಗರ ಅರಸರಿಂದ ಹಿಡಿದು, ಮೈಸೂರಿನ ಅರಸರ ತನಕ ಪೈಲ್ವಾನರು, ಅಪಾರ ಪ್ರಮಾಣದಲ್ಲಿ ರಾಜಾತಿಥ್ಯ ಸ್ವೀಕರಿಸಿದ್ದಾರೆ. ಅಂದು ಮಹಾರಾಜ, ಪೈಲ್ವಾನನ ಜತೆ ಮಾತ್ರವೇ ಕುಳಿತು ತಾಂಬೂಲ ಹಂಚಿಕೊಳ್ಳುತ್ತಿದ್ದ. ಅದು ಅವನ ವಾರದ ಚಟುವಟಿಕೆಗಳಲ್ಲಿ ಒಂದು ಭಾಗ ಕೂಡ ಆಗಿತ್ತು. ದೇವರಾಜ ಅರಸು ಅವರ ಕಾಲದಲ್ಲೂ, ಅಂಥದ್ದೇ ದೃಶ್ಯವಿತ್ತು. ಎಷ್ಟೋ ಸಲ ಅವರು ಪೈಲ್ವಾನರೊಂದಿಗೆ ಊಟ- ತಿಂಡಿ ಮಾಡಿದ್ದೂ ಇದೆ. ಪೈಲ್ವಾನರು ಅವರ ಮನೆಗೆ ಹೋದಾಗ, “ಅಮ್ಮಾ, ಲೀಟರ್‌ಗಟ್ಟಲೆ ಹಾಲು ಕುಡಿದು ಹೊಟ್ಟೆ ತುಂಬಿದೆ’ ಎಂದಾಗ, ಅರಸು ಅವರ ಪತ್ನಿ, “ಹಾಗನ್ನಬೇಡ್ರೋ… ತಿಂಡಿಗೆ ಬನ್ನಿ… ನೀವೆಲ್ಲ ಇದ್ದರೆ, ನಿಮ್ಮ ಜತೆ ಅವರೂ ನಾಲ್ಕು ತುತ್ತು ಜಾಸ್ತಿ ತಿಂತಾರೆ’ ಎನ್ನುತ್ತಿದ್ದರಂತೆ.

ಕೆಲವು ಭಲೇ ಪೈಲ್ವಾನರು…: ಕುಸ್ತಿ ಅಂದರೆ, ಮೈಸೂರು. ಮೈಸೂರು ಅಂದರೆ, ಪೈಲ್ವಾನರು ಅಂತ ಅಂದುಕೊಳ್ಳುವವರಿದ್ದಾರೆ. ಆದರೆ, ಮೈಸೂರಿನಂತೆಯೇ, ಕರುನಾಡಿನ ಬೇರೆ ಬೇರೆ ಭಾಗಗಳಲ್ಲಿ ಎದೆ ನಡುಗಿಸುವಂಥ ಪೈಲ್ವಾನ್‌ಗಳಿದ್ದರು.

1.ಆ ಕಾಲದಲ್ಲಿ ಚಿತ್ರದುರ್ಗದ ನಂಜಪ್ಪ ಬಹಳ ಹೆಸರುವಾಸಿ. “ದುರ್ಗದ ನಂಜ’ ಎಂದೇ ಪ್ರಸಿದ್ಧರು. ಯಾವಾಗಲೂ ಅರಳೇಪೇಟೆ ಗರಡಿ ಮನೆಯಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ಒಂದು ಭಾರೀ ಸೆಡ್‌ ಹೊಡೆದು ಅಖಾಡದಲ್ಲಿ ನಿಲ್ಲುತ್ತಿದ್ದಂತೆ, ಜನ “ಹೋ’ ಎಂದು ಹರ್ಷೋದ್ಗಾರ ಮಾಡುತ್ತಿದ್ದರು.

2.ಮತ್ತೂಬ್ಬ ಭಾರಿ ಪೈಲ್ವಾನ್‌ ರಾಣೆಬೆನ್ನೂರು ನಂಜಪ್ಪ. ಈತನೂ ಭಾರೀ ಪೈಲ್ವಾನ್‌. ಈತನ ಕುಸ್ತಿ ಎಂದರೆ ಸಾಕು, ಜನ ಜಮಾಯಿಸಿ ಬಿಡುತ್ತಿದ್ದರು. ಮೈಸೂರಿನಲ್ಲಿ ಇವರ ಕುಸ್ತಿ ಎಂದರೆ, ಬೆಂಗಳೂರಿನಿಂದ ವಿಶೇಷ ರೈಲಿನಲ್ಲಿ ಜನ ಹೋಗುತ್ತಿದ್ದರಂತೆ. ಅವರ ಕುಸ್ತಿಯ ದಿವಸ ಮೈಸೂರಿನ ಮಾರ್ಕೆಟ್‌ ಎಲ್ಲಾ ಬಂದ್‌ ಆಗುತ್ತಿತ್ತು.

3.ಧಾರವಾಡದ ಮಲ್ಲ ಶಿವರುದ್ರ ಅವರನ್ನು “ಅಖಾಡ ಸಿಂಹ’ ಅಂತಲೇ ಕರೆಯುತ್ತಿದ್ದರು. ಇವರ ವಿರುದ್ಧ ಮೆಹಬೂಬ್‌, ಸಣ್ಣಬೋರಯ್ಯ, ಅಜ್ಜಪ್ಪ, ದೊಡ್ಡ ಚಾರ್ಲಿ, ದೇವನ­ ಹಳ್ಳಿ ನರಸಿಂಹಯ್ಯ ಸೆಣೆಸುತ್ತಿದ್ದಾಗ, ಅಪಾರ ಪ್ರಮಾಣದಲ್ಲಿ ಜನರು ಸೇರುತ್ತಿದ್ದರು.

4.ಹುಡ್ಕೇರಿಯ ಪೈಲ್ವಾನ್‌ ಸೋಮಲಿಂಗಪ್ಪ, ಇನ್ನೂ ಪ್ರಚಂಡ. ಪಂಜಾಬ್‌ನ ಸಾಬುದ್ದೀನ್‌ ವಿರುದ್ಧಧ ಜಂಗೀಕುಸ್ತಿಯಲ್ಲಿ, ಕೇವಲ 13 ನಿಮಿಷದಲ್ಲಿ ಚಿತ್‌ ಮಾಡಿ ಬಿಟ್ಟಿದ್ದ. ಇಂಥ ಸಾಕಷ್ಟು ಪೈಲ್ವಾನ್‌ಗಳು, ಧಾರವಾಡದ ಗರಡಿ ಕಾರ್ಖಾನೆಗಳಿಂದ ಹೊರಬರುತ್ತಿದ್ದರು.

5.ಬೆಳಗಾವಿಯ ಅಗರ್ಭ ಶ್ರೀಮಂತ, ಕುಸ್ತಿಪಟು ಜೀವಪ್ಪ ಕಳ್ಳಿàಮನಿ, ಅಪ್ಪಾಜಿ, ಬೈಲಹೊಂಗಲದ ಹಣ್ಣಿಕೇರಿಯ ಬಸವಣ್ಣಪ್ಪ ಬಹಳ ಜನಪ್ರಿಯ ಅಂಗಸಾಧಕರು.

6.ಬಿಜಾಪುರದ ಪೈ. ನಾಗಪ್ಪ ಅಮೃತವೆಗೆ, ಜ್ಯೋತಿಗುಂಡ, ರಾಜಾರಾಮ ದುಂಡಿಬಾ ಪವಾರ್‌- ಇವರೆಲ್ಲ ಮಲ್ಲ ಪರಾಕ್ರಮಿಗಳು.

7.ಶಿವಮೊಗ್ಗದ ಪೈ. ದೊಡ್ಡ ನಾಗಪ್ಪ, ಭವಾನಿ ರಾವ್‌ ಹಾರ್ನಳ್ಳಿ, ಈಸ್ಲಾಪುರದ ಈರಪ್ಪ ಅವರ ಪಟ್ಟುಗಳನ್ನು ಕುಸ್ತಿಪ್ರಿಯರು ಇನ್ನೂ ಮರೆತಿಲ್ಲ.

* ಎಂ. ನರಸಿಂಹಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next