ಗದಗ: “ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ’ ಎಂಬಂತೆ ನಮ್ಮ ಅಡುಗೆ ಮನೆಯಿಂದಲೇ ವೈಜ್ಞಾನಿಕ ಚಿಂತನೆ ಆರಂಭವಾಗುತ್ತದೆ. ದಿನಸಿ ಬಳಸಿಕೊಂಡು ವ್ಯವಸ್ಥಿತವಾಗಿ ಅಡುಗೆ ಮಾಡುವುದು ಸಹ ವಿಜ್ಞಾನ. ಅನುಕ್ಷಣ ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ ಪ್ರಯತ್ನಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಎಂ. ಬಸವಲಿಂಗಪ್ಪ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ತೋಂಟದಾರ್ಯ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವ ವಿಜ್ಞಾನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ, ಕಾಲೇಜು, ಪ್ರಯೋಗಾಲಯ, ಸಂಶೋಧನಾ ಸಂಸ್ಥೆಗಳಿಗೆ ವಿಜ್ಞಾನ ಸೀಮಿತವಾಗಿಲ್ಲ. ಅದು ನಮ್ಮ ನಿತ್ಯ ಜೀವನದ ಪ್ರತಿಯೊಂದು ಕ್ರಿಯೆಯ ಭಾಗವಾಗಿದೆ ಎಂಬುದನ್ನು ಅರಿತುಕೊಳ್ಳಬೇಕು. ವಿಜ್ಞಾನದ ಮೂಲ ತತ್ವವನ್ನು ಅರಿತುಕೊಂಡು ಮುಂದಿನ ಪ್ರಗತಿ ಬಗ್ಗೆ ಚಿಂತಿಸಬೇಕೆಂದು ಸಲಹೆ ನೀಡಿದರು.
ಡಯಟ್ ಪ್ರಾಚಾರ್ಯ ಎಸ್.ಡಿ.ಗಾಂಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇಂದು ಶುದ್ಧ ವಿಜ್ಞಾನ ಮಾತ್ರವಲ್ಲದೇ ಎಲ್ಲ ಅಧ್ಯಯನ ಶಿಸ್ತುಗಳನ್ನು ವೈಜ್ಞಾನಿಕ ಚೌಕಟ್ಟಿನಲ್ಲಿ ಗುರುತಿಸಲಾಗುತ್ತಿದೆ. ಹೀಗಾಗಿ, ಪ್ರತಿಯೊಬ್ಬರೂ ವೈಜ್ಞಾನಿಕವಾಗಿ ಯೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಸಿ.ಕಡಿವಾಳ ಅವರು ಜಿಲ್ಲೆಯಲ್ಲಿ ವಿಜ್ಞಾನದ ಚಟುವಟಿಕೆ ಅತ್ಯಂತ ಕ್ರಿಯಾಶೀಲವಾಗಿ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕಳೆದ ಸಾಲಿನಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಕಾರ್ತಿಕ್ ದಾನಿ ಹಾಗೂ ಮಾರ್ಗದರ್ಶಕ ಜೆ.ಎಂ.ಮಠಪತಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತೋಂಟದಾರ್ಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೊಟ್ರೇಶ ಮಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಯುವ ವಿಜ್ಞಾನಿ ಜಿಲ್ಲಾ ಸಂಯೋಜಕ ಎಂ.ಎಚ್.ಸವದತ್ತಿ ಪ್ರಸ್ತಾವಿಕವಾಗಿ ಮಾತನಾಡಿ, ಕರಾವಿಪ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ವೇದಿಕೆ ಮೇಲೆ ಪ್ರೊ|ಈಶ್ವರ್ ಕೆ. ಪಟ್ಟಣಶೆಟ್ಟಿ, ಎಸ್. ಎಂ.ಕಲ್ಲೂರ್, ಎ.ವಿ.ಶಿವನಗೌಡರ, ಎಂ.ಎಂ.ಲೋಹಾನಿ, ವಿಜಯ ಕುಮಾರ್ ಕಪ್ಪಲಿ, ಶಿಲ್ಪ ಉಪಸ್ಥಿತರಿದ್ದರು. ವಿಷಯ ಪರಿವೀಕ್ಷಕ ಎಚ್.ಎ.ಫಾರೂಕಿ ಸ್ವಾಗತಿಸಿ, ಕೃಷ್ಣ ಗೌಡರ ನಿರೂಪಿಸಿ, ಗೀತಾ ಹಿರೇಮನಿ ವಂದಿಸಿದರು.
ಪ್ರಸಕ್ತ ಸಾಲಿನ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಲೊಯೊಲಾ ಪ್ರೌಢಶಾಲೆಯ ಶೋಯಬ್ ಕೊಪ್ಪಳ(ಪ್ರಥಮ), ಮುಂಡರಗಿ ಆದರ್ಶ ವಿದ್ಯಾಲಯದ ಅಮನ ಐ. ಮುಲ್ಲಾ(ದ್ವಿತೀಯ) ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.