Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

10:18 PM Jan 07, 2025 | Team Udayavani |

ತಂದೆ ಕೊಲೆ ಆರೋಪಿ ಪುತ್ರ; ಪತ್ನಿ ಮನೆಯಲ್ಲಿ ಆತ್ಮಹತ್ಯೆ
ಕಾಸರಗೋಡು: ತೆಂಗಿನ ಕಾಯಿ ಸುಲಿಯುವ ಉಪಕರಣದಿಂದ ತಂದೆಯ ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ಪುತ್ರನ ಮೃತದೇಹ ಉದುಮ ನಾಲಾಂವಾದುಕಲ್‌ನಲ್ಲಿರುವ ಪತ್ನಿ ಮನೆಯ ಬಾವಿಯ ರಾಟೆ ಹಗ್ಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.

Advertisement

ಪಳ್ಳಿಕೆರೆ ಸೈಂಟ್‌ ಮೇರೀಸ್‌ ಶಾಲೆ ಸಮೀಪದ ದಿ| ಅಪ್ಪಕುಂಞಿ ಅವರ ಪುತ್ರ ಪ್ರಮೋದ್‌ (36) ಕೃತ್ಯ ಎಸಗಿದವರು.
ಮೇಲ್ಪರಂಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಂದೆ ಅಪ್ಪಕುಂಞಿ (65) ಅವರನ್ನು 2024 ಎಪ್ರಿಲ್‌ 1ರಂದು ಕೊಲೆಗೈದಿದ್ದ. ಈ ಘಟನೆಯ ಎರಡು ದಿನಗಳ ಮುನ್ನಾ ಅಪ್ಪಕುಂಞಿ ಅವರಿಗೆ ಪ್ರಮೋದ್‌ ಹಲ್ಲೆ ನಡೆಸಿದ್ದ. ಈ ಬಗ್ಗೆ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಕೇಸು ದಾಖಲಿಸಿದ ದ್ವೇಷದಿಂದ ಎ. 1ರಂದು ಸಂಜೆ ಮನೆಗೆ ಬಂದ ಪ್ರಮೋದ್‌ ಬಾಗಿಲು ತುಳಿದು ಮುರಿದು ಮನೆಯೊಳಗೆ ನುಗ್ಗಿ ಅಪ್ಪಕುಂಞಿ ಅವರ ತಲೆಗೆ ತೆಂಗಿನಕಾಯಿ ಸುಲಿಯುವ ಉಪಕರಣದಿಂದ ಹೊಡೆದು ಕೊಲೆಗೈದಿದ್ದ. ಈ ಪ್ರಕರಣದಲ್ಲಿ ಪೊಲೀಸರು ಪ್ರಮೋದ್‌ನನ್ನು ಬಂಧಿಸಿದ್ದರು. 2024ರ ಅಕ್ಟೋಬರ್‌ನಲ್ಲಿ ಆತನಿಗೆ ಜಾಮೀನು ಲಭಿಸಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿದ್ದು, ಜ. 13ರಂದು ಕೇಸು ಪರಿಗಣಿಸಲಿರುವಂತೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ತನಿಖೆಗೆ ಹೋದ ಎಸ್‌ಐಗೆ ಕಚ್ಚಿದ ಆರೋಪಿ ಸೆರೆ
ಕಾಸರಗೋಡು: ದೂರಿನ ಬಗ್ಗೆ ತನಿಖೆ ನಡೆಸಲು ಹೋಗಿದ್ದ ವೆಳ್ಳರಿಕುಂಡು ಠಾಣೆಯ ಎಸ್‌.ಐ. ಅರುಣ್‌ ಮೋಹನ್‌ ಅವರ ಕೈಗೆ ಕಚ್ಚಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಳ್ಳರಿಕುಂಡು ಮಾಲೋಂ ಕಾರ್ಯಾಟ್ಟುಚ್ಚಾಲ್‌ ಕಾಂಞಿರಕುಡಿ ನಿವಾಸಿ ಮಣಿಯರ ರಾಘವನ್‌(50)ನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿ ವೆಳ್ಳಚ್ಚಿ ಹಾಗೂ ಸಹೋದರನಿಗೆ ನಿರಂತರವಾಗಿ ಬೆದರಿಕೆಯೊಡ್ಡುತ್ತಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.

ಪೆರಿಯ ಅವಳಿ ಕೊಲೆ ಪ್ರಕರಣ
ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ
ಕಾಸರಗೋಡು: ಪೆರಿಯ ಕಲ್ಯೊಟ್ ನ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌ ಮತ್ತು ಶರತ್‌ಲಾಲ್‌ ಕೊಲೆ ಪ್ರಕರಣದಲ್ಲಿ ಕೊಚ್ಚಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಶಿಕ್ಷೆಗೊಳಗಾದ ಸಿಪಿಎಂ ನೇತಾರ, ಮಾಜಿ ಶಾಸಕ ಕೆ.ವಿ. ಕುಂಞಿರಾಮನ್‌ ಸಹಿತ ನಾಲ್ವರು ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ನಾಲ್ವರಿಗೆ ನ್ಯಾಯಾಲಯ ಐದು ವರ್ಷ ಜೈಲು ಹಾಗೂ ದಂಡ ವಿಧಿಸಿತ್ತು.

ಲಿಫ್ಟ್‌ನೊಳಗೆ ಸಿಲುಕಿಕೊಂಡ ವಿವಾಹ ತಂಡ
ಕಾಸರಗೋಡು: ಮದುವೆಗೆಂದು ಲಿಫ್ಟ್‌ನಲ್ಲಿ ಸಭಾಂಗಣಕ್ಕೇರುತ್ತಿದ್ದ ವೇಳೆ ಲಿಫ್ಟ್‌ ದಿಢೀರ್‌ ಕೈಕೊಟ್ಟು ವಧೂ-ವರರ ಸಹಿತ 18 ಮಂದಿಯಿದ್ದ ವಿವಾಹ ತಂಡ ಎರಡು ಗಂಟೆಗಳ ತನಕ ಲಿಫ್ಟ್‌ನಲ್ಲೇ ಸಿಲುಕಿಕೊಂಡ ಘಟನೆ ತೃಕ್ಕರಿಪುರ ವಡಕ್ಕೇ ಕೊವ್ವಲ್‌ನಲ್ಲಿ ನಡೆದಿದೆ.

Advertisement

ಪಳಯಂಗಾಡಿ ನಿವಾಸಿಯಾದ ವರ ಹಾಗೂ ಹೊಸದುರ್ಗ ನಿವಾಸಿಯಾದ ವಧು ಮತ್ತು ಅವರ ಕುಟುಂಬದವರು ಒಂದನೇ ಮಹಡಿಯಲ್ಲಿರುವ ಸಭಾಂಗಣಕ್ಕೆ ಹೋಗಲು ಲಿಫ್ಟ್‌ಗೇರಿದ್ದರು. ಲಿಫ್ಟ್‌ ಮೆಲೇರುತ್ತಿದ್ದಂತೆ ಭಾರೀ ಸದ್ದಿನೊಂದಿಗೆ ಅರ್ಧದಲ್ಲೇ ನಿಂತಿತ್ತು. ಅಗ್ನಿಶಾಮಕ ದಳದ ಎರಡು ಗಂಟೆಗಳ ಪ್ರಯತ್ನದಿಂದ ಲಿಫ್ಟ್‌ನ ಬಾಗಿಲು ತೆರೆದು ಅದರಲ್ಲಿ ಸಿಲುಕಿಕೊಂಡಿದ್ದವರನ್ನು ಏಣಿಯ ಮೂಲಕ ರಕ್ಷಿಸಲಾಯಿತು. ನಿಗದಿತ ಸಂಖ್ಯೆಗಿಂತ ಅಧಿಕ ಮಂದಿ ಲಿಫ್ಟ್‌ಗೇರಿದ್ದು, ಲಿಫ್ಟ್‌ ನಿಲುಗಡೆಗೆ ಕಾರಣವೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next