Advertisement
ಕೃಷಿ ಹೇಗೆ?ತ್ಯಾಗರ್ತಿ ರಸ್ತೆಯ ಬೊಮ್ಮತ್ತಿ ತಿರುವಿನಿಂದ ಉಳ್ಳೂರು ಸಂಪರ್ಕ ದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಕೃಷ್ಣಮೂರ್ತಿಯವರ ಹೊಲವಿದೆ. ಇವರು 2016 ರ ಆಗಸ್ಟ್ 3 ನೇ ವಾರದಲ್ಲಿ ಬಾಳೆ ಗಿಡದ ನಾಟಿ ಮಾಡಿದ್ದರು. 2 ಎಕರೆ ವಿಸ್ತೀರ್ಣದ ತಮ್ಮ ಖಷ್ಕಿ ಭೂಮಿಯಲ್ಲಿ 1500 ಜಿ.9 ಬಾಳೆ ಮತ್ತು 500 ಏಲಕ್ಕಿ ತಳಿಯ ಬಾಳೆ ನಾಟಿ ಮಾಡಿದ್ದರು. ಇದಕ್ಕಿಂತ ಎರಡು ವರ್ಷ ಹಿಂದೆ ಕೊಳವೆ ಬಾವಿ ಕೊರೆಸಿ ಶುಂಠಿ ಕೃಷಿಗೆ ಕೈ ಹಾಕಿದ್ದರು. ಇಡೀ ಹೊಲವನ್ನು ಟ್ರಾÂಕ್ಟರ್ ನಿಂದ ಉಳುಮೆ ಮಾಡಿ ಹದಗೊಳಿಸಿದರು. ನಂತರ 1.5 ಅಡಿ ಅಗಲ, 1.5 ಅಡಿ ಆಳವಿರುವ ಗುಂಡಿಗಳನ್ನು ಮಾಡಿಸಿ ಅದಕ್ಕೆ ಥಿಮೆಟ್ ಮತ್ತು ಸಗಣಿ ಗೊಬ್ಬರ ಹಾಕಿ ಕಾಡಿನ ಒಣ ಎಲೆಗಳನ್ನು ಹಾಕಿಸಿದರು. ಗಿಡದಿಂದ ಗಿಡಕ್ಕೆ 6 ಅಡಿ ಅಂತರವಿರುವಂತೆ ಸಾಲು ಗುಂಡಿ ತೋಡಿಸಿದರು. ಸಾಗರದ ಹಕ್ರೆಯಲ್ಲಿರುವ ಅಂಗಾಂಶ ಕಸಿಯ ಜಿ9 ಬಾಳೆ ಸಸಿಗಳನ್ನು ತಲಾ 12 ರೂ.ನಂತೆ ನರ್ಸರಿಯಲ್ಲಿ ಖರೀದಿಸಿ ಒಟ್ಟು 1500 ಬಾಳೆ ಸಸಿ ನೆಟ್ಟರು. ನಂತರ ಪ್ರತಿ 25 ದಿನಕ್ಕೆ ಒಮ್ಮೆಯಂತೆ 19:19:19 ಕಾಂಪ್ಲೆಕ್ಸ್ ಗೊಬ್ಬರವನ್ನು ದ್ರವ ರೂಪದಲ್ಲಿ ಎಲ್ಲಾ ಗಿಡಗಳಿಗೂ ನೀಡಿದರು. ಗಿಡ ನೆಟ್ಟು ಸುಮಾರು 9 ತಿಂಗಳಿಗೆ ಅಂದರೆ 2017ರ ಮೇ ಅಂತ್ಯದ ಸುಮಾರಿಗೆ ಬಾಳೆ ಗಿಡಗಳು ಹೂಬಿಟ್ಟು ಗೊನೆ ನೀಡಲು ಆರಂಭಿಸಿದವು. ಗೊನೆ ಬಿಟ್ಟ ಮೂರು ತಿಂಗಳ ಅಂತ್ಯದಲ್ಲಿ ಮೊದಲ ಫಸಲು ಕಟಾವಿಗೆ ಬಂದಿತು.
ಇವರು 2 ಎಕರೆ ವಿಸ್ತೀರ್ಣದ ಹೊಲದಲ್ಲಿ 1500 ಜಿ.9 ಬಾಳೆ ಸಸಿ ಬೆಳೆಸಿದ್ದಾರೆ.
ಪ್ರತಿ ಮರದಿಂದ ಸರಾಸರಿ 25 ರಿಂದ 30 ಕಿ.ಗ್ರಾಂ.ತೂಕದ ಬಾಳೆ ಗೊನೆ ದೊರೆತಿದೆ. ಕಿ.ಗ್ರಾಂ.ಗೆ ಸರಾಸರಿ ರೂ.13 ರೂ.ನಂತೆ ಬಾಳೆ ಗೊನೆ ಮಾರಾಟವಾಗಿದೆ. ಮೊದಲ ಕಟಾವಿನಲ್ಲಿ 40 ಟನ್ ಮಾರಾಟವಾಗಿದೆ. ಇದರಿಂದ ಇವರಿಗೆ ರೂ.5 ಲಕ್ಷದ 50 ಸಾವಿರ ಆದಾಯ ದೊರೆತಿದೆ. ಬಾಳೆ ಸಸಿ ನೆಡುವಿಕೆ, ಗಿಡ ಖರೀದಿ, ನೀರಾವರಿ ವ್ಯವಸ್ಥೆ, ಕೂಲಿ ವೆಚ್ಚ, ಗೊಬ್ಬರ ನೀಡುವಿಕೆ, ಕಟಾವಿನ ಕೂಲಿ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ಸುಮಾರು ರೂ.2 ಲಕ್ಷ ಹಣ ಖರ್ಚಾಗಿದೆ. ಆದರೂ ಸುಮಾರು ರೂ.3 ಲಕ್ಷದ 50 ಸಾವಿರ ರೂ. ಲಾಭ ದೊರೆತಿದೆ. ಇವರು ಕೃಷಿ ಮಾಡಿದ 500 ಏಲಕ್ಕಿ ಬಾಳೆ ಗಿಡದಿಂದ 10 ಟನ್ ಫಸಲು ದೊರೆತಿದೆ. ಏಲಕ್ಕಿ ಬಾಳೆ ಕ್ವಿಂಟಾಲ್‌ಗೆ ರೂ.2500 ರಂತೆ ಮಾರಾಟವಾಗಿದ್ದು ಇದರಿಂದ ಇವರಿಗೆ ರೂ.2 ಲಕ್ಷದ 50 ಸಾವಿರ ಆದಾಯ ದೊರೆತಿದೆ. ಕೃಷಿ ವೆಚ್ಚ ಸುಮಾರು 1 ಲಕ್ಷ ತಗುಲಿದ್ದು ನಿವ್ವಳ 1 ಲಕ್ಷದ 50 ಸಾವಿರ ಲಾಭ ದೊರೆತಿದೆ.
Related Articles
Advertisement
ಮಾಹಿತಿಗೆ-9482949149
– ಎನ್.ಡಿ.ಹೆಗಡೆ ಆನಂದಪುರಂ