ಕಾಡಿನ ಅಂಚಿನಲ್ಲಿ ದೇವದತ್ತನೆಂಬ ಸನ್ಯಾಸಿಯೊಬ್ಬ ವಾಸಿಸುತ್ತಿದ್ದನು. ರುದ್ರಪ್ಪನು ಕಾಡಿನ ಹಾದಿಯ ಮೂಲಕ ಆ ಕಗ್ಗತ್ತಲಲ್ಲಿ ಸಾಗಲು ಸಿದ್ಧನಾಗುತ್ತಿದ್ದುದನ್ನು ನೋಡಿದ ದೇವದತ್ತನು ಆತನನ್ನು ತಡೆದು ಈ ರಾತ್ರಿಯಲ್ಲಿ ಕಾಡಿನ ಹಾದಿಯಲ್ಲಿ ಸಾಗುವುದು ಸರಿಯಲ್ಲ. ಆದ್ದರಿಂದ ನೀನು ಈ ರಾತ್ರಿ ನನ್ನ ಕುಟೀರದಲ್ಲೇ ಉಳಿದುಕೊಂಡು ನಾಳೆ ನಸುಕಿನಲ್ಲೇ ಜಾತಪುರಕ್ಕೆ ತೆರಳುವುದು ಉತ್ತಮ ಎಂದು ಸಲಹೆ ನೀಡಿದರು.
ದೇವದತ್ತ ಮುನಿಗಳು ಹೇಳಿದ ಮಾತನ್ನು ಕೇಳದ ರುದ್ರಪ್ಪನು, ಇಲ್ಲ ನಾನು ತುರ್ತಾಗಿ ಜಾತಪುರಕ್ಕೆ ಹೋಗಲೇ ಬೇಕು ಎಂದ. ಆಗ ದೇವದತ್ತ ಮುನಿಗಳು “ಸರಿ ಹಾಗಾದರೆ ನಾನು ನಿನಗೆ ದೀವಟಿಗೆ ಮತ್ತು ಎಣ್ಣೆ ತುಂಬಿದ ಪಾತ್ರೆಗಳನ್ನು ನೀಡುತ್ತೇನೆ. ಈ ದೀವಟಿಗೆಯ ದೀಪವು ನಂದುವ ಮೊದಲು ನೀನು ಈ ಕಾಡನ್ನು ದಾಟಬೇಕು, ಇಲ್ಲವಾದರೆ ನೀನು ಕಾಡಿನಲ್ಲಿರುವ ಪ್ರಾಣಿಗಳಿಗೆ ಬಲಿಯಾಗುವೆ. ಇವುಗಳು ನಿನ್ನನ್ನು ಈ ಕಾಡಿನ ಹಾದಿಯುದ್ದಕ್ಕೂ ರಕ್ಷಿಸುತ್ತವೆ, ಇನ್ನು ಸಮಯವನ್ನು ವ್ಯರ್ಥ ಮಾಡಬೇಡ ಕೂಡಲೇ ಹೊರಡು’ ಎಂದು ಹೇಳಿ ದೀವಟಿಗೆ ಮತ್ತು ಎಣ್ಣೆಯ ಪಾತ್ರೆಯನ್ನು ರುದ್ರಪ್ಪನಿಗೆ ನೀಡಿದರು.
ಮುನಿಗಳ ಮಾತಿನಂತೆ ದಿವಟಿಗೆಯ ಬೆಳಕಿನಲ್ಲಿ ಕಾಡನ್ನು ಪ್ರವೇಶಿಸಿದ ರುದ್ರಪ್ಪನಿಗೆ ದೂರದಲ್ಲಿ ಏನೋ ಮಿಂಚಿನ ಬೆಳಕು ಕಾಣಿಸಿತು. ಕುತೂಹಲದಿಂದ ಅದೇನಿರಬಹುದು ಎಂದು ಅತ್ತ ಹೆಜ್ಜೆ ಹಾಕತೊಡಗಿದ. ಈ ಸಂದರ್ಭದಲ್ಲಿ ಮುನಿಗಳು ಹೇಳಿದ್ದ ಮಾತನ್ನು ರುದ್ರಪ್ಪ ಮರೆತೇ ಬಿಟ್ಟಿದ್ದ. ಮಿಂಚಿನ ಬೆಳಕು ಕಾಣುತ್ತಿದ್ದ ಸ್ಥಳದಲ್ಲಿ ದೊಡ್ಡ ಮಣ್ಣಿನ ಪಾತ್ರೆಯಲ್ಲಿ ಚಿನ್ನದ ನಾಣ್ಯಗಳು ಫಳಫಳ ಹೊಳೆಯುತ್ತಿರುವುದನ್ನು ರುದ್ರಪ್ಪ ನೋಡಿದ. ಸಂತಸದಿಂದ ಪಾತ್ರೆಯಲ್ಲಿದ್ದ ನಾಣ್ಯಗಳನ್ನು ಒಂದೊಂದಾಗಿ ಎಣಿಸಲು ಪ್ರಾರಂಭಿಸಿದ. ಆರಂಭದಲ್ಲಿ ಬರೋಬ್ಬರಿ 999 ನಾಣ್ಯಗಳು ರುದ್ರಪ್ಪನ ಲೆಕ್ಕಕ್ಕೆ ಸಿಕ್ಕಿದವು. ಅರೇ, ಇನ್ನೊಂದು ಎಲ್ಲಿಗೆ ಹೋಯಿತು, ಕಾಣುತ್ತಿಲ್ಲವಲ್ಲ ಎಂದು ರುದ್ರಪ್ಪ ಮತ್ತೂಮ್ಮೆ ನಾಣ್ಯಗಳನ್ನು ಎಣಿಸಿದ. ಆಗ ಮತ್ತೂ ಒಂದು ನಾಣ್ಯ ಕಡಿಮೆ ಲೆಕ್ಕಕ್ಕೆ ಸಿಕ್ಕಿದವು. ಮೇಲಿಂದ ಮೇಲೆ ರುದ್ರಪ್ಪ ಬಂಗಾರದ ನಾಣ್ಯಗಳನ್ನು ಎಣಿಸಿದಾಗ ಕೊನೆಯಲ್ಲಿ ಸರಿಯಾಗಿ 100 ಚಿನ್ನದ ನಾಣ್ಯಗಳು ರುದ್ರಪ್ಪನ ಲೆಕ್ಕಕ್ಕೆ ಸಿಕ್ಕಿದವು. ಆದರೆ ಅಷ್ಟಾಗುವಾಗ ನಡುರಾತ್ರಿಯಾಗಿತ್ತು. ಮುನಿಗಳು ನೀಡಿದ್ದ ಪಾತ್ರೆಯಲ್ಲಿದ್ದ ಎಣ್ಣೆಯು ಮುಗಿದು ದೀವಟಿಗೆಯ ದೀಪವು ನಂದಿ ಹೋಯಿತು. ಆ ಕರ್ಗತ್ತಲಲ್ಲಿ ಕಾಡಿನ ಕ್ರೂರ ಪ್ರಾಣಿಗಳು ರುದ್ರಪ್ಪನ ಮೇಲೆ ಆಕ್ರಮಣ ಮಾಡಿ ಅವನನ್ನು ಕೊಂದು ತಿಂದು ಹಾಕಿದವು.
ನಾವೂ ನಮ್ಮ ಬದುಕಿನಲ್ಲಿ ಲೌಖೀಕ ಸಂಪತ್ತಿನ ಲೆಕ್ಕಾಚಾರ ಮತ್ತು ಕ್ರೋಡೀಕರಣದಲ್ಲಿಯೇ ಕಾಲಹರಣ ಮಾಡುತ್ತೇವೆ. ಜ್ಞಾನವೆಂಬ ಬೆಳಕಿನ ಮೂಲಕ ಬದುಕೆಂಬ ದಟ್ಟ ಮತ್ತು ಕರ್ಗತ್ತಲಿನ ಕಾಡನ್ನು ದಾಟಿ ಭಗವಂತನ ಸನ್ನಿಧಾನ ಎಂಬ ಊರನ್ನು ಸುರಕ್ಷಿತವಾಗಿ ತಲುಪಬೇಕು ಎಂಬ ಕನಿಷ್ಠ ಪ್ರಜ್ಞೆಯೂ ನಮ್ಮಲ್ಲಿರುವುದಿಲ್ಲ. ಜೀವನದಲ್ಲಿ ಜ್ಞಾನವೆಂಬ ದೀಪ ಮತ್ತು ಆಯಸ್ಸೆಂಬ ಎಣ್ಣೆ ಇರುವರೆಗೂ ಕಠಿನ ಪರಿಶ್ರಮದಿಂದ ನಿರಂತರ ಸಾಧನೆಯನ್ನು ಮಾಡಬೇಕು. ಆಯಸ್ಸು ಎಂಬ ಎಣ್ಣೆ ಖಾಲಿಯಾದರೆ ಜೀವನವೆಂಬ ದೀವಟಿಗೆಯ ದೀಪವೂ ನಂದಿ ಬಿಡುತ್ತದೆ. ಆಸೆ ಇಲ್ಲದೆ ಜೀವನ ನಡೆಸಲಸಾಧ್ಯ. ಆದರೆ ದುರಾಸೆ ಎಂದಿಗೂ ಒಳ್ಳೆಯದಲ್ಲ.
Advertisement