Advertisement

Desi Swara: ಬದುಕು ಸ್ವಾತಂತ್ರ್ಯದ ಸವಿಯುಣ್ಣಲಿ : ವಿದೇಶದಲ್ಲಿದ್ದರೂ ಸ್ವದೇಶದ ಪ್ರೀತಿ ಅಮರ

01:28 PM Aug 17, 2024 | Team Udayavani |

“ಸ್ವಾತಂತ್ರ್ಯದ ಸವಿಯುಣ್ಣದ ಬದುಕೆಂಬುದು ಬರಡು’ ಎನ್ನುವ ಕವಿವಾಣಿ ಮನುಷ್ಯನ ಜೀವನದಲ್ಲಿ ಸ್ವಾತಂತ್ರ್ಯಪಡೆಯುವ ಪ್ರಮುಖ ಪಾತ್ರವನ್ನು ಸೂಚಿಸುತ್ತದೆ. ಅದರಲ್ಲಿಯೂ ಒಂದು ದೇಶದ ಸ್ವಾತಂತ್ರ್ಯ ಆ ದೇಶದಲ್ಲಿ ವಾಸಿಸುವ ಎಲ್ಲ ಜನರಿಗೂ ಬಹಳ ಮುಖ್ಯವೆನಿಸುತ್ತಿದೆ. ಎಲ್ಲ ಕಡೆ ಯುದ್ಧ, ಅಶಾಂತಿ ಹರಡುತ್ತಿರುವ ಈ ದಿನಗಳಲ್ಲಿ ಸ್ವಾತಂತ್ರ್ಯದ ಬಗೆಗೆ ಚಿಂತಿಸುವ ಅಗತ್ಯ ಬಹಳವಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಯಿತು. ಈ ಸಂದರ್ಭದಲ್ಲಿ ಅತ್ಯಂತ ಅಮೂಲ್ಯವಾದ ದೇಶದ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ಸ್ವಲ್ಪ ಚಿಂತಿಸೋಣ.

Advertisement

ಸ್ವತಂತ್ರ ಭಾರತದಲ್ಲಿ ಜನಿಸಿದ ನಮಗೆಲ್ಲ ಈ ಸ್ವಾತಂತ್ರ್ಯದ ಬೆಲೆ ಅರ್ಥವಾಗುವುದು ಅಷ್ಟು ಸುಲಭವಲ್ಲ. ಯಾವುದು ಸುಲಭವಾಗಿ ಸಹಜವಾಗಿ ನಮಗೆ ಸಿಗುತ್ತದೋ ಅದರ ನಿಜವಾದ ಬೆಲೆ ಅರ್ಥವಾಗುವುದು ಮನುಷ್ಯನಿಗೆ ಕಷ್ಟ. ವಿದೇಶಿಯರ ಆಳ್ವಿಕೆ, ದಬ್ಟಾಳಿಕೆ ಇವೆಲ್ಲ ಈಗಿನ ಪೀಳಿಗೆಯ ಶಾಲೆಯ ಇತಿಹಾಸದ ಪಾಠವಾಗಿ ಅವರು ಪರೀಕ್ಷೆಯ ದೃಷ್ಟಿಯಿಂದ ಮಾತ್ರ ಅವುಗಳನ್ನು ಓದುತ್ತಾರೆ.

ಸುಮಾರು ಇನ್ನೂರ ಐವತ್ತು ವರ್ಷಗಳ ಬ್ರಿಟಿಷರ ಆಡಳಿತದ ವಿರುದ್ಧ ಅನೇಕ ತರಹದ ಸ್ವಾತಂತ್ರ್ಯ ಹೋರಾಟಗಾರರು ಹಲವಾರು ರೀತಿಯ ತಂತ್ರಗಳನ್ನು ಪ್ರಯೋಗಿಸಿ, ಬಲಿದಾನಗಳನ್ನು ನೀಡಿ ಸಿಕ್ಕಿದ ಈ ಸ್ವಾತಂತ್ರ್ಯ ನಮ್ಮ ದೇಶವನ್ನು ಪ್ರಜಾಪ್ರಭುತ್ವವನ್ನಾಗಿ ಮಾಡಿದೆ.

ಪ್ರಜಾಪ್ರಭುತ್ವ ಅಂದರೆ ಪ್ರಜೆಗಳು. ಅಂದರೆ ನಾವೇ ಪ್ರಭುಗಳು. ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಜನರು ಆರಿಸುವ ಪ್ರತಿನಿಧಿಗಳೇ ನಮ್ಮನ್ನಾಳುತ್ತಾರೆ. ಅವರ ರೀತಿ ನೀತಿಗಳು ಸರಿಯಾಗದಿದ್ದಲ್ಲಿ ನಮ್ಮ ಟೀಕೆಯನ್ನು, ಸಲಹೆಗಳನ್ನು ಸರಕಾರಕ್ಕೆ ನೀಡಲು, ನಮ್ಮ ಪ್ರತಿಭಟನೆಗಳನ್ನು ತೋರ್ಪಡಿಸಲು ಪತ್ರಿಕೆಗಳು, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬಹುದು. ಅವುಗಳಿಗೆಲ್ಲ ಪ್ರಜಾಪ್ರಭುತ್ವದಲ್ಲಿ ಮುಕ್ತ ಸ್ಥಾನವಿದೆ. ಭಾರತವು ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂಬ ಕೀರ್ತಿಗೆ ಪಾತ್ರವಾಗಿದೆ. ಭಾರತದಲ್ಲಿ ಜನರಿಗೆ ಇರುವ ಅಧಿಕಾರಗಳು, ಅವಕಾಶಗಳು ಇಲ್ಲದ ವ್ಯವಸ್ಥೆಯನ್ನು ನೋಡಿದಾಗಲೇ ಇದರ ಬೆಲೆ ನಮಗೆ ಅರಿವಾಗುವುದು.

Advertisement

ಮಧ್ಯಪ್ರಾಚ್ಯದ ದೇಶಗಳಾದ ಯುಎಇ, ಬಹ್ರೈನ್‌, ಸೌದಿ ಅರೇಬಿಯಾ, ಕತಾರ್‌ ಮುಂತಾದ ದೇಶಗಳಲ್ಲಿ ರಾಜಾಡಳಿತವಿದ್ದು ರಾಜನ ನಿಯಮಕ್ಕೆ ನಡೆಯುವುದು ಪ್ರಜೆಗಳ ಕರ್ತವ್ಯವಾಗಿದೆ. ನಾವು ಕಳೆದ 20 ವರ್ಷಗಳಿಂದ ವಾಸಿಸುತ್ತಿರುವ ಈ ಪ್ರದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಇಲ್ಲವೇ ಇಲ್ಲ. ಸುದ್ದಿ ಮಾಧ್ಯಮಗಳಲ್ಲಿ ಅನುಮತಿ ಇರುವ ಸುದ್ದಿಗಳನ್ನು ಮಾತ್ರ ಹಾಕಬಹುದು. ದೇಶದಲ್ಲಾದ ಯಾವುದೇ ಘಟನೆಯ ಮಾಹಿತಿ ಸರಿಯಾಗಿ ಯಾರಿಗೂ ಸಿಗುವುದಿಲ್ಲ. ತಮ್ಮ ಧ್ವನಿ ಎತ್ತಲು ಪ್ರಜೆಗಳಿಗೆ ಒಂದು ವೇದಿಕೆಯೇ ಈ ದೇಶಗಳಲ್ಲಿ ಇರುವುದಿಲ್ಲ. ಇಲ್ಲಿನ ವ್ಯವಸ್ಥೆಯನ್ನು ನೋಡುವಾಗ ಭಾರತದ ಜನಕ್ಕೆ ಎಷ್ಟು ಸ್ವಾತಂತ್ರ್ಯವಿದೆ ಎನ್ನುವ ಅರಿವು ಆಗುತ್ತದೆ. ನಮ್ಮ ಪ್ರಜಾಪ್ರಭುತ್ವ ಎಷ್ಟು ದೊಡ್ಡದು ಎನ್ನುವ ಅರಿವು ಆಗುತ್ತದೆ. ಆದರೆ ಸ್ವಾತಂತ್ರ್ಯದ ಬೆಲೆಯರಿತು ನಡೆಯುವುದು ಆರೋಗ್ಯಕರ ಸಮಾಜಕ್ಕೆ ಬಹಳ ಮುಖ್ಯವೆನಿಸುತ್ತದೆ.

ಈಗ ನಮ್ಮ ದೇಶದ ಸ್ವಾತಂತ್ರ್ಯ ಸ್ವೇಚ್ಛೆಯಾಗುತ್ತಿದೆ ಎಂದು ಅನೇಕ ವೇಳೆ ನಮಗೆ ಅನ್ನಿಸುತ್ತದೆ. ಯಾರಿಗೂ ಸಮಾಜದ, ಇತರರ ಪರಿವೆಯೇ ಇಲ್ಲ ತಮ್ಮ ಮೂಗಿನ ನೇರಕ್ಕೆ ನಿಯಮಗಳನ್ನು ಗಾಳಿಗೆ ತೂರುವ ಜನರು, ತಮ್ಮ ಲಾಭಕ್ಕಾಗಿ ಏನನ್ನು ಬೇಕಾದರೂ ಮಾಡಲು ತಯಾರಿರುವ ಜನರ ಅತಿಯಾಸೆಯ ಬುದ್ಧಿಯನ್ನು ನೋಡುವಾಗ ನಮ್ಮ ಸ್ವಾತಂತ್ರ್ಯ ಯಾವ ದಿಕ್ಕಿನಲ್ಲಿ ಸಾಗಿದೆ ಎಂದು ದಿಗಿಲಾಗುತ್ತದೆ. ನಮ್ಮ ವ್ಯವಸ್ಥೆಯಲ್ಲಿ ಏನು ತಪ್ಪಾಗಿದೆ ಎನ್ನುವತ್ತ ಮನಸ್ಸು ಯೋಚಿಸುತ್ತದೆ.

ಕೊರೊನಾ ಸಂಕಷ್ಟದಲ್ಲಿ ನಡೆದ ಭ್ರಷ್ಟಾಚಾರ ಅಮಾನವೀಯ ಸ್ವೆಚ್ಛೆಯ ನಡತೆಗಳು, ರಾಜಕೀಯ ಲಾಭಕ್ಕಾಗಿ ದೇಶದ ಗೌರವವನ್ನು ಎಂತಹ ವೇದಿಕೆಯಲ್ಲಾದರೂ ಹರಾಜು ಹಾಕುವ ನಾಯಕರು, ದೇಶದ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆಹೊಡೆಯುತ್ತಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ- ಇವುಗಳನ್ನೆಲ್ಲ ನೋಡುವಾಗ ಮಿತಿ ಮೀರಿದ ಸ್ವಾತಂತ್ರ್ಯವೇ ಇವುಗಳಿಗೆಲ್ಲ ಕಾರಣ ಎಂದು ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆಯೇ ಜಿಗುಪ್ಸೆ ಬರುವಂತಾಗುತ್ತದೆ.

ಮಧ್ಯಪ್ರಾಚ್ಯದ ದೇಶಗಳಲ್ಲಿರುವ ಶಿಸ್ತು, ನಿಯಮಗಳು ನಮ್ಮಲ್ಲಿ ಏಕಿಲ್ಲ ಎನ್ನುವ ದುಃಖ ನಮ್ಮನ್ನು ಕಾಡುತ್ತದೆ. ಡಿ. ವಿ.ಜಿಯವರಂತಹ ಚಿಂತಕರೂ ದೇಶದ ಸ್ವಾತಂತ್ರ್ಯ ಹಳಿ ತಪ್ಪುತ್ತಿರುವ ಬಗೆಗೆ ತಮ್ಮ ಕಳಕಳಿಯನ್ನು ಅವರ ಅನೇಕ ಲೇಖನಗಳಲ್ಲಿ ವ್ಯಕ್ತಪಡಿಸಿದ್ದರು.

ಸ್ವಾತಂತ್ರ್ಯ ಸ್ವೇಚ್ಛಾಚಾರವಾದಾಗ ವ್ಯವಸ್ಥೆ ಕುಸಿಯುತ್ತದೆ; ವ್ಯವಸ್ಥೆ ಕುಸಿದರೆ ಅರಾಜಕತೆ ದೇಶವನ್ನು ನಾಶಮಾಡುತ್ತದೆ. ಸ್ವಾತಂತ್ರ್ಯವನ್ನು ಅದರ ಬೆಲೆಯರಿತು ಅನುಭವಿಸುವುದು ಅತೀ ಅಗತ್ಯ. ಅಲ್ಲದೇ ನಮ್ಮ ಮುಂದಿನ ತಲೆಮಾರಿಗೆ ಸ್ವಾತಂತ್ರ್ಯದ ಪಾವಿತ್ರ್ಯವನ್ನು, ತಿಳಿಸಿ ಅವರಿಗೆ ಅದರ ಅಮೂಲ್ಯತೆಯ ಅರಿವು ಮೂಡಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದಾಗ ಮಾತ್ರ ಇದರ ಮಹತ್ವವನ್ನು, ಮುಂದಿನ ತಲೆಮಾರಿಗೆ ತಿಳಿಸಲು ಸಾಧ್ಯ.

ಅಮೂಲ್ಯವಾದ ಸ್ವಾತಂತ್ರ್ಯ ದಿನಾಚರಣೆಯನ್ನು ನಾವು ಪ್ರಪಂಚದ ಯಾವ ಭಾಗದಲ್ಲಿದ್ದರೂ ಆಚರಿಸುವುದು ಸಂತೋಷ ತರುತ್ತದೆ. ಭಾರತದಾದ್ಯಂತ ಒಂದು ಹಬ್ಬವಾಗಿ ಅಚರಿಸಲ್ಪಡುವ ಈ ದಿನವನ್ನು ಭಾರತೀಯರು ಇರುವಲ್ಲೆಲ್ಲ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ನಾವಿರುವ ಒಮಾನ್‌ ದೇಶದಲ್ಲಿ ಸುಮಾರು ಆರು ಲಕ್ಷಕ್ಕೂ ಹೆಚ್ಚಿನ ಭಾರತೀಯರು ಇರುವುದರಿಂದ ಇಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಲ್ಲಿನ ಇಂಗ್ಲಿಷ್‌ ಪತ್ರಿಕೆಗಳು ಭಾರತದ ಸ್ವಾತಂತ್ರ್ಯ ಉತ್ಸವದ ಶುಭಾಶಯಗಳ ಸಂದೇಶಗಳಿಂದ ತುಂಬಿರುತ್ತದೆ. ಇಲ್ಲಿ ಅನೇಕ ಭಾರತೀಯ ಶಾಲೆಗಳಿವೆ. ಅಲ್ಲೆಲ್ಲ ಧ್ವಜಾರೋಹಣ ಮಾಡಿ ದೇಶಭಕ್ತಿಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಾರತದ ಸ್ವಾತಂತ್ರ್ಯ ಹಬ್ಬವನ್ನು ಭಾರತದಲ್ಲಿ ಆಚರಿಸಿದಂತೆ ಆಚರಿಸಲಾಗುತ್ತದೆ.

ಇಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಆಮಂತ್ರಣವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಎಲ್ಲ ದೇಶಗಳ ಜನರೂ ಭಾಗವಹಿಸಬಹುದಾದ ಈ ಕಾರ್ಯಕ್ರಮಕ್ಕೆ ಅನೇಕ ದೇಶಗಳ ಜನರು ಆಗಮಿಸುತ್ತಾರೆ. ರಾಯಭಾರಿಯಿಂದ ಧ್ವಜಾರೋಹಣ, ರಾಷ್ಟ್ರಗೀತೆಯ ಗಾಯನ ಅಲ್ಲದೆ ಭಾರತದ ಪ್ರಧಾನಿಯ ಕೆಂಪುಕೋಟೆಯ ಭಾಷಣದ ಪ್ರಮುಖ ಭಾಗಗಳನ್ನು ಓದಲಾಗುತ್ತದೆ. ನೆರೆದಿರುವ ಜನಸ್ತೋಮಕ್ಕೆ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿರುತ್ತದೆ. ವಿದೇಶದಲ್ಲಿ ನೆಲಸಿದ್ದೂ ಸ್ವದೇಶದ ಸ್ವಾತಂತ್ರ್ಯದ ಹಬ್ಬವನ್ನು ಆಚರಿಸುವ ಸದವಕಾಶ ನಮಗೆಲ್ಲರಿಗೂ ಸಿಗುತ್ತದೆ.

*ಸುಧಾ ಶಶಿಕಾಂತ್‌, ಮಸ್ಕತ್‌

 

Advertisement

Udayavani is now on Telegram. Click here to join our channel and stay updated with the latest news.

Next