Advertisement
ಬೆಂಗಳೂರು: ರಾಜ್ಯದಲ್ಲಿ ಆಶ್ಲೇಷಾ ಮಳೆಯ ಅಬ್ಬರ ಮುಂದುವರಿದಿದ್ದು, ಮಲೆನಾಡು, ಹಳೇ ಮೈಸೂರು, ಕೊಡಗು, ಕರಾವಳಿ, ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಪ್ರದೇಶಗಳು ಭಾರೀ ಗಾಳಿ ಮಳೆಯಲ್ಲಿ ಅಕ್ಷರಶ: ತೊಯ್ದು ತೊಪ್ಪೆಯಾಗಿವೆ. ನದಿ, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ, ಬೆಳಗಾವಿ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ಪ್ರವಾಹದ ಭೀಕರತೆ ಮತ್ತಷ್ಟು ಹೆಚ್ಚಿದೆ.
Related Articles
Advertisement
ಭಾಗಮಂಡಲ ಜಲಾವೃತ: ಕೊಡಗಿನ ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲೂಕುಗಳಲ್ಲಿ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಕಾವೇರಿಯ ಉಗಮ ಕ್ಷೇತ್ರ ತಲಕಾವೇರಿಯಲ್ಲೂ ಭಾರೀ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಮಡಿಕೇರಿ, ಭಾಗಮಂಡಲ, ನಾಪೋಕ್ಲು ರಸ್ತೆಗಳಲ್ಲಿ ಪ್ರವಾಹದ ಪರಿಸ್ಥಿತಿ ಇದ್ದು, ಗ್ರಾಮಸ್ಥರ ಸಂಚಾರಕ್ಕೆ ಜಿಲ್ಲಾಡಳಿತ ದೋಣಿ ವ್ಯವಸ್ಥೆಯನ್ನು ಮಾಡಿದೆ. ನೀರು ಭಗಂಡೇಶ್ವರ ದೇವಾಲಯದ ಮೆಟ್ಟಿಲನ್ನು ಆವರಿಸಿದ್ದು, ಭಕ್ತರ ಪ್ರವೇಶಕ್ಕೆ ಅಡಚಣೆಯಾಗಿದೆ. ಮೂರ್ನಾಡು ಸಮೀಪ ಬಲಮುರಿಯ ಹಳೆಯ ಸೇತುವೆ ಮುಳುಗಡೆಗೊಂಡಿದೆ. ಸೋಮವಾರಪೇಟೆ, ಸಕಲೇಶಪುರ ಹೆದ್ದಾರಿಯಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಳೆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.
ಘಾಟಿಯಲ್ಲಿ ಭೂಕುಸಿತ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ, ಫಲ್ಗುಣಿ, ಕುಮಾರಧಾರಾ ನದಿಗಳು ಉಕ್ಕಿ ಹರಿಯುತ್ತಿವೆ. ನದಿಗಳ ತೀರ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಚಾರ್ಮಾಡಿ ಮತ್ತು ಶಿರಾಡಿ ಘಾಟಿಯಲ್ಲಿ ಭೂಕುಸಿತದ ಅಪಾಯವಿದ್ದು, ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳೆ ಹಿನ್ನೆಲೆಯಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬ ತಾಲೂಕಿನ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಕಂಬಪದವು ಸಮೀಪದ ಸಾಂಬಾರುತೋಟ ಭಾಗದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಮಂಗಳೂರು ನಗರ ಜೈಲ್‌ರೋಡ್ ಬಳಿ ಮನೆಯ ಕಂಪೌಂಡ್ ಕುಸಿದಿದೆ. ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಕೆಲಕಾಲ ಮುಳುಗಿತ್ತು.
58 ವರ್ಷದ ಬಳಿಕ ಗಂಗಾವಳಿ ರೌದ್ರಾವತಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ವರದಾ, ಅಘನಾಶಿನಿ, ಕಾಳಿ, ಬೇಡ್ತಿ, ಗಂಗಾವಳಿ, ಶರಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಮಲೆನಾಡು-ಕರಾವಳಿ ಬೆಸೆಯುವ ಮೂರು ಪ್ರಮುಖ ಮಾರ್ಗಗಳಲ್ಲಿ ಗುಡ್ಡ ಕುಸಿದು ಸಂಪರ್ಕ ಕಡಿತಗೊಂಡಿದೆ. 51 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸಿದ್ದಾಪುರದ ಹೆಮ್ಮನಬೈಲ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ 6 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಮಾಜಿ ಸಿಎಂ ಬಂಗಾರಪ್ಪ ಅವರ ಕುಲದೈವ ಇಲ್ಲಿನ ಗುಡ್ನಾಪುರ ಕೆರೆದಂಡೆ ಮೇಲಿರುವ ಬಂಗಾರೇಶ್ವರ ದೇವಸ್ಥಾನ ಜಲಾವೃತವಾಗಿದೆ. ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿ ಸಂಪರ್ಕ ಕಡಿತವಾಗಿದೆ.ಅಂಕೋಲಾ ತಾಲೂಕಿನ ಮಳೆ ಆರ್ಭಟಕ್ಕೆ 58 ವರ್ಷದ ಬಳಿಕ ಗಂಗಾವಳಿ ನದಿ ರೌದ್ರಾವತಾರ ತಾಳಿದೆ. ಹಿಚRಡ ಕುರ್ವೆ ಮತ್ತು ದಂಡೆಬಾಗ ಸಂಪೂರ್ಣ ಮುಳುಗಡೆಯಾಗಿದ್ದು, 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಸುಂಕಸಾಳ ಗ್ರಾ.ಪಂ ವ್ಯಾಪ್ತಿಯ ಹೈಲೆಂಡ್ ಹೋಟೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 63 ಬಂದ್ ಆಗಿದೆ.
ವಾಡಿಕೆಗಿಂತ ಕಡಿಮೆ ಮಳೆ: ರಾಜ್ಯಾದ್ಯಂತ ಈ ಬಾರಿಯ ಮುಂಗಾರು ಮಳೆಯ ಪ್ರಮಾಣ ಜೂನ್ 1ರಿಂದ ಜುಲೈ 31ರವರೆಗೆ ವಾಡಿಕೆಗಿಂತ ಶೇ.13ರಷ್ಟು ಕಡಿಮೆ ಇದೆ. ವಾಡಿಕೆ ಮಳೆ 463.5 ಮಿ.ಮೀ. ಆದರೆ, ಬಿದ್ದ ಮಳೆ 403.1 ಮಿ.ಮೀ. ದಕ್ಷಿಣ ಒಳನಾಡಿನಲ್ಲಿ ಶೇ. 25ರಷ್ಟು ಮಳೆ ಕೊರತೆ ಇದೆ. ಒಟ್ಟಾರೆ 30 ಜಿಲ್ಲೆಗಳ ಪೈಕಿ ನಾಲ್ಕು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಾಗಿದ್ದು, ಹತ್ತು ಜಿಲ್ಲೆಗಳಲ್ಲಿ ವಾಡಿಕೆ ಮತ್ತು ಉಳಿದ 16 ಕಡೆ ಸಾಮಾನ್ಯಕ್ಕಿಂತ ಕಡಿಮೆ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯ ಪ್ರಮಾಣ ನೋಡಿದಾಗ ಉತ್ತರದಲ್ಲಿ ವಾಡಿಕೆಯಷ್ಟೇ ಇದೆ.
ರೈಲು-ಬಸ್ ಸೇವೆ ವ್ಯತ್ಯಯ: ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಮುಂಬೈ-ಪುಣೆ-ಕೊಲ್ಲಾಪುರ ಭಾಗಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಮತ್ತು ಕೆಲವು ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಸಿರಿಬಾಗಿಲು ವ್ಯಾಪ್ತಿಯಲ್ಲಿ ರೈಲ್ವೆ ಹಳಿಗೆ ಮಣ್ಣು ಕುಸಿ ದ ಪರಿಣಾಮ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.
ಬಸ್ ಸಂಪರ್ಕ ಕಡಿತ-ಪರದಾಟ: ಮಹಾರಾಷ್ಟ್ರದಲ್ಲಿನ ವರುಣನ ರುದ್ರನರ್ತನದ ಎಫೆಕ್ಟ್ ಕೆಎಸ್‌ಆರ್‌ಟಿಸಿ ಮೇಲೂ ಆಗಿದ್ದು, ನಿಗಮದ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಕೆಎಸ್‌ಆರ್‌ಟಿಸಿಯಿಂದ ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ನಿತ್ಯ ಸುಮಾರು ಹತ್ತಕ್ಕೂ ಹೆಚ್ಚು ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ಅವುಗಳ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಇನ್ನೂ ಒಂದೆರಡು ದಿನಗಳು ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರು, ಮೈಸೂರು, ಮಂಗಳೂರು ಮತ್ತಿತರ ಕಡೆಗಳಿಂದ ಮಹಾರಾಷ್ಟ್ರದ ಮುಂಬೈ, ಪುಣೆ, ಶಿರಡಿಗೆ ಹತ್ತಕ್ಕೂ ಹೆಚ್ಚು ಬಸ್‌ಗಳು ನಿತ್ಯ ಕಾರ್ಯಾಚರಣೆ ನಡೆಸುತ್ತವೆ. ಅದೇ ರೀತಿ, ಮಹಾರಾಷ್ಟ್ರದಿಂದಲೂ ರಾಜ್ಯಕ್ಕೆ ಬರುತ್ತವೆ. ಭಾರಿ ಮಳೆಯಿಂದ ಬಹುತೇಕ ಕಡೆಗಳಲ್ಲಿ ನೆರೆ ಹಾವಳಿ ಉಂಟಾಗಿರುವುದರಿಂದ ಬಸ್‌ಗಳ ಸಂಚಾರ ಅಸಾಧ್ಯ. ಹಾಗಾಗಿ, ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ, ಉತ್ತರ ಕರ್ನಾಟಕದಲ್ಲಿ ಇನ್ನೂ ಎರಡು ದಿನಗಳು ಭಾರಿ ಮಳೆಯ ಮುನ್ಸೂಚನೆ ಇದ್ದು, ಮುಂದಿನ ಒಂದೆರಡು ದಿನಗಳು ಉದ್ದೇಶಿತ ಮಾರ್ಗದಲ್ಲಿ ಸೇವೆ ಅಲಭ್ಯವಾಗಲಿದೆ.
ಭೂಕುಸಿತ-ರೈಲು ಸಂಚಾರ ವಿಳಂಬ: ಲೋಂಡಾ-ತಿನೈಘಾಟ್ ಮಧ್ಯೆ ಭೂ ಕುಸಿತದಿಂದ ಕೆಲ ರೈಲುಗಳು ವಿಳಂಬವಾಗಿ ಸಂಚರಿಸಲಿವೆ. ಆ.6ರಂದು ಸಂಜೆ 4:15ಕ್ಕೆ ಹೊರಡಬೇಕಿದ್ದ ಹುಬ್ಬಳ್ಳಿ-ಹಜರತ್ ನಿಜಾಮುದ್ದಿನ್ ಲಿಂಕ್ ಎಕ್ಸ್‌ಪ್ರೆಸ್ (17305) ರೈಲು ಆ.7ರಂದು ಮಧ್ಯರಾತ್ರಿ 12:30ಕ್ಕೆ ಪ್ರಯಾಣ ಬೆಳೆಸಲಿದೆ. ಆ.6ರಂದು ಸಂಜೆ 7 ಗಂಟೆಗೆ ಲೋಂಡಾದಿಂದ ಹೊರಡಲಿದ್ದ ವಾಸ್ಕೊ-ಡ-ಗಾಮಾ-ಹಜರತ್ ನಿಜಾಮುದ್ದಿನ್ ಎಕ್ಸ್‌ಪ್ರೆಸ್ ರೈಲು ಆ.7ರಂದು ರಾತ್ರಿ 2:30ಕ್ಕೆ ತೆರಳಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಹಳೇ ಮೈಸೂರು ಭಾಗದಲ್ಲೂ ಮಳೆ: ಹಾಸನ, ಮೈಸೂರು, ಬೆಂಗಳೂರು ಸೇರಿ ಹಳೇ ಮೈಸೂರು ಭಾಗದಲ್ಲೂ ಮಳೆಯಾಗುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುರಿದ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳೆಲ್ಲಾ ಜಲಾವೃತವಾಗಿದ್ದವು. ಕೊಡಗಿನಲ್ಲಿ ಭಾರೀ ವರ್ಷಧಾರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ 18 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯ ನೀರಿನ ಮಟ್ಟದಲ್ಲಿ ಎರಡು ಅಡಿ ಹೆಚ್ಚಳವಾಗಿದ್ದು, ಜಲಾಶಯದಲ್ಲಿ 13.3 ಟಿಎಂಸಿ ಅಡಿ ನೀರಿನ ಸಂಗ್ರಹವಾಗಿದೆ. ಗುಂಡ್ಲುಪೇಟೆ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಜಿಟಿಜಿಟಿ ಮಳೆಯೊಂದಿಗೆ ಶೀತಗಾಳಿ ಬೀಸುತ್ತಿದೆ. ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ನದಿಗೆ ಹೆಚ್ಚಿನ ನೀರು ಬಿಡುತ್ತಿರುವುದರಿಂದ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಜಲಪಾತ ಭರಚುಕ್ಕಿ ಧುಮ್ಮಿಕ್ಕುತ್ತಿದೆ. ಹಾಸನ ಜಿಲ್ಲೆಯಲ್ಲಿಯೂ ಮಳೆಯಾಗುತ್ತಿದ್ದು, ಸಕಲೇಶಪುರ ತಾಲೂಕಿನಲ್ಲಿ ಕೆಲವು ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ನೀಡಲಾಗಿತ್ತು. ಹೇಮಾವತಿ ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದು, ಹೊಳೆ ಮಲ್ಲೇಶ್ವರ ದೇವಸ್ಥಾನದ ಮೆಟ್ಟಿಲಿನವರೆಗೆ ನೀರು ಬಂದು ನಿಂತಿದೆ. ಮಲೆನಾಡೀಗ ಮಳೆನಾಡು: ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ, ಶರಾವತಿ, ಶರ್ಮನಾವತಿ, ವಾರಾಹಿ, ಕುಮದ್ವತಿ, ಚಕ್ರಾ ಸಾವೆಹಕ್ಕಲು ಹಾಗೂ ಉಪ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಮೂಡಿಗೆರೆ ತಾಲೂಕಿನ ಹೆಬ್ಟಾಳೆ ಸೇತುವೆ ಮುಳುಗಡೆಯಾಗಿದೆ. ಜಯಪುರ ಸಮೀಪ ಬಾಳೆಹೊನ್ನೂರು-ಜಯಪುರ ರಾಜ್ಯ ಹೆದ್ದಾರಿಯ ರಸ್ತೆ ಕುಸಿದು, ಸಂಚಾರ ಬಂದ್ ಆಗಿದೆ. ಕಪ್ಪೆ ಶಂಕರ ದೇವಾಲಯ ಹಾಗೂ ಸಂಧ್ಯಾವಂದನಾ ಮಂಟಪಗಳು ಮುಳುಗಡೆಯಾಗಿವೆ. ಹರಿಹರಪುರ ಗ್ರಾಮದ ಬಳಿ ರಸ್ತೆ ಕುಸಿದಿದ್ದು, ಕೊಪ್ಪ-ಶೃಂಗೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪ ಸೇರಿದಂತೆ ವಿವಿಧೆಡೆಗಳಲ್ಲಿ ಗುಡ್ಡ ಕುಸಿತ ಮುಂದುವರೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸಮನೆ-ಚಿಕ್ಕಮಣತಿ ರಸ್ತೆಯ ಸೇತುವೆಯು ಸುಮಾರು 30 ವರ್ಷಗಳ ಬಳಿಕ ಮುಳುಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿ ಕ ಪ್ರಮಾಣದ ನೀರು ಹರಿದು ಬರುತ್ತಿದೆ. ಎಲ್ಲೆಲ್ಲಿ ರಸ್ತೆ ಸಂಪರ್ಕ ಕಡಿತ?
ಬೆಳಗಾವಿ-ಕೊಲ್ಲಾಪುರ
ವಿಜಯಪುರ-ಧಾರವಾಡ
ಜಮಖಂಡಿ-ಜತ್ತ
ಜಮಖಂಡಿ- ಸಾವಳಗಿ
ಖಾನಾಪುರ-ಗೋವಾ
ಖಾನಾಪುರ-ಬೆಳಗಾವಿ
ಖಾನಾಪುರ-ಪಾರಿಶ್ವಾಡ
ಖಾನಾಪುರ -ಪಣಜಿ
ಹೈಲೆಂಡ್ ಹೊಟೇಲ್ ಬಳಿ ರಾಷ್ಟ್ರೀಯ ಹೆದ್ದಾರಿ 63
ಬಾಳೆಹೊನ್ನೂರು-ಜಯಪುರ
ಶೃಂಗೇರಿ-ಕೊಪ್ಪ