ಹೆಣ್ಣಿಗೆ ಕಷ್ಟ ಯಾವತ್ತೂ ತಪ್ಪುವುದಿಲ್ಲ ಎಂಬ ಹಿರಿಯರ ಮಾತು ಸತ್ಯಕ್ಕೆ ಹತ್ತಿರವಾದದ್ದು. ಹೆಣ್ಣು ಮದುವೆಯಾಗಿ ಗಂಡನ ಮನೆ ಸೇರಿಬಿಟ್ಟರೆ, ಆಕೆಯ ಬೇಕು- ಬೇಡಗಳನ್ನು ಗಂಡ ಪೂರೈಸುತ್ತಾನೆ, ಅವಳು ಅಲ್ಲಿ ರಾಣಿಯಂತೆ ಇರುತ್ತಾಳೆಂಬುದು ಹೆಣ್ಣು ಹೆತ್ತವರ ಕಲ್ಪನೆ. ಆದರೆ, ಈ ಮಾತು ಅವೆಷ್ಟೋ ಮಹಿಳೆಯರ ಪಾಲಿಗೆ ಕನಸಾಗೇ ಉಳಿಯುತ್ತದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುವರ್ಣ ಶೇಖರ ಮೋರೆ ಜೀವನದಲ್ಲೂ ಹಾಗೇ ಆಯ್ತು.
ನೂರಾರು ಕನಸು ಹೊತ್ತು ಸಪ್ತಪದಿ ತುಳಿದ ಸುವರ್ಣ, ಗಂಡನ ಮನೆಗೆ ಬಂದಾಗ ಅಲ್ಲಿ ಬಡತನದ ಪರಿಸ್ಥಿತಿ ಇತ್ತು. ಕ್ಷೌರಿಕ ವೃತ್ತಿಯಲ್ಲಿದ್ದ ಗಂಡನ ದುಡಿಮೆ ಕನಸುಗಳ ಸಾಕಾರಕ್ಕಿರಲಿ, ಮನೆಯ ಖರ್ಚಿಗೂ ಸಾಲುತ್ತಿರಲಿಲ್ಲ. ಇದೇ ವಿಷಯಕ್ಕಾಗಿ ಪ್ರತಿದಿನ ಮನೆಯಲ್ಲಿ ಜಗಳ, ಮನಃಸ್ತಾಪ ಆಗುತ್ತಿತ್ತು. ಇಬ್ಬರು ಮಕ್ಕಳಾದರು. ಗಂಡ ಅವರಿವರ ಬಳಿ ಸಾಲ ಮಾಡಿ, ಮನೆ ನಿರ್ವಹಿಸುತ್ತಿರುವ ಕಷ್ಟವನ್ನು ಅರಿತ ಸುವರ್ಣ, ತಾನೂ ಹೊರಗೆ ಹೋಗಿ ದುಡಿಯುವ ನಿರ್ಧಾರಕ್ಕೆ ಬಂದರು.
ಸಂಬಂಧಿಕರ ಸಹಾಯದಿಂದ ಬ್ಯೂಟಿಷಿಯನ್ ಕೋರ್ಸ್ ಮುಗಿಸಿದರು. ಮನೆಯಲ್ಲಿಯೇ ಸಣ್ಣ ಬ್ಯೂಟಿ ಪಾರ್ಲರ್ ತೆರೆದು, ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡರು. ವ್ಯಾಪಾರ ವೃದ್ಧಿಸಿದಂತೆ ಅಥಣಿಯಲ್ಲಿಯೇ ಒಂದು ಅಂಗಡಿಯನ್ನು ಬಾಡಿಗೆಗೆ ಪಡೆದು, ಪಾರ್ಲರ್‌ಅನ್ನು ವಿಸ್ತರಿಸಿದರು. 19 ವರ್ಷಗಳಿಂದ ಪಾರ್ಲರ್ ನಡೆಸುತ್ತಿರುವ ಸುವರ್ಣ, ಐ ಬ್ರೋ, ಫೇಷಿಯಲ್, ಹೇರ್‌ಕಟ್ ಮಾಡಿ ದಿನಕ್ಕೆ ಕನಿಷ್ಠ ಒಂದು ಸಾವಿರ ರೂ. ಸಂಪಾದಿಸುತ್ತಾರೆ. ನಿಶ್ಚಿತಾರ್ಥ, ಮದುವೆ ಮುಂತಾದ ಸಮಾರಂಭಗಳಲ್ಲಿ ಮೇಕಪ್ ಮಾಡಿದರೆ ದಿನಕ್ಕೆ 2-3 ಸಾವಿರ ರೂ. ಸಿಗುತ್ತದೆ.
ಅಷ್ಟೇ ಅಲ್ಲದೆ, ಆಸಕ್ತ ಮಹಿಳೆಯರಿಗೆ ಬ್ಯೂಟಿಷಿಯನ್ ತರಬೇತಿ ನೀಡುತ್ತಿದ್ದು, ಆ ಮೂಲಕ ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನಕ್ಕೆ ನೆರವಾಗುತ್ತಿದ್ದಾರೆ. ಸ್ವಂತ ದುಡಿಮೆಯಿಂದ ಜಾಗ, ಮನೆ, ಗಾಡಿಯನ್ನು ಖರೀದಿಸಿ, ತಮ್ಮ ಜೀವನಮಟ್ಟವನ್ನು ಉತ್ತಮಪಡಿಸಿಕೊಂಡಿದ್ದಾರೆ.
ಗಂಡನ ದುಡಿಮೆಯಿಂದ ಸಂಸಾರ ತೂಗಿಸುವುದು ಕಷ್ಟವಾಗುತ್ತಿತ್ತು. ಹಾಗಾಗಿ, ಪಾರ್ಲರ್ ಶುರುಮಾಡಲು ನಿರ್ಧರಿಸಿದೆ. ಅದಕ್ಕೆ ಕುಟುಂಬದ, ಸಂಬಂಧಿಕರ ಸಹಕಾರವೂ ಸಿಕ್ಕಿತು. ಈಗ ಸ್ವಂತ ದುಡಿಮೆಯಿಂದ ಬದುಕುತ್ತಿದ್ದೇನೆ. ಕುಟುಂಬಕ್ಕೆ ನೆರವಾಗುತ್ತಿರುವ ಬಗ್ಗೆ ನನಗೆ ಹೆಮ್ಮೆ ಇದೆ.
ಸುವರ್ಣ ಶೇಖರ ಮೋರೆ
ಚಿತ್ರ- ಲೇಖನ: ಸಂಗೀತಾ ಗೊಂಧಳೆ