ಸಣ್ಣ ವಯಸ್ಸಿನಿಂದಲೇ ಹಚ್ಚ ಹಸುರು ಪ್ರಕೃತಿಯ ನಡುವೆಯೇ ಬೆಳೆದವಳು ನಾನು. ಪ್ರತಿದಿನ ಸಾಯಂಕಾಲ ಐದು ಗಂಟೆಯಷ್ಟು ಹೊತ್ತಿಗೆ ನನ್ನ ಅಜ್ಜಿ ಪ್ರಕೃತಿದತ್ತವಾಗಿ ದೊರೆಯುತ್ತಿದ್ದ ಕಟ್ಟಿಗೆ,ತೆಂಗಿನಸಿಪ್ಪೆ ಮತ್ತು ಗೆರೆಟೆ ಉಪಯೋಗಿಸಿ ಒಲೆ ಉರಿ ಹಾಕಿ ಸ್ನಾನಕ್ಕೆ ಬೆಚ್ಚನೆಯ ನೀರು ಮಾಡಿಟ್ಟಿರುತ್ತಿದ್ದರು.ಅದನ್ನೇ ಕಾದು ಕುಳಿತು ನೀರು ಕೊತಕೊತನೆ ಕುದಿಯುವ ವೇಳೆಗೆ ಮೀಯಲು ಹೊರಡುತ್ತಿದ್ದೆ.
ಒಮ್ಮೆ ಬಚ್ಚಲು ಮನೆಗೆ ಹೊಕ್ಕಿದರೆ ಹೊರಬರಲು ಕನಿಷ್ಠ ಅರ್ಧಗಂಟೆ ಹಿಡಿಯುತ್ತಿತ್ತು. ಮಿಂದಷ್ಟು ಮತ್ತೆ ಮತ್ತೆ ಮೀಯಬೇಕು,ಮೀಯುತ್ತಲೇ ಇರೋಣ ಅನಿಸುವುದು. ಇದನ್ನು ಕಂಡು ಮನೆ ಮಂದಿ ಬಾಗಿಲು ತಟ್ಟಿ ಸ್ನಾನ ಮಾಡುತ್ತಿದ್ದೀಯಾ ಅಲ್ಲ ಬಚ್ಚಲು ಮನೆ ತೊಳಿಯುತ್ತಿದ್ದೀಯಾ? ಎಂದು ಕೇಳುತ್ತಿದ್ದರು.ಅದಲ್ಲದೇ ಕೆಲವೊಮ್ಮೆ ನನ್ನ ಅಮ್ಮ ಮತ್ತು ಅಜ್ಜಿ ಬಚ್ಚಲು ಮನೆಯಿಂದ ಹಬೆ ಬರುತ್ತಿರುವುದನ್ನು ಕಂಡು ಬಾಣಂತಿ ಏನೇ ನೀನು!? ಎಂದು ಕೇಳಿದ್ದೂ ಇದೆ. ನಾನು ಸ್ನಾನ ಮುಗಿಸಿ ಹೊರ ಬರುವಾಗ ಬಚ್ಚಲು ಮನೆಯ ತುಂಬಾ ಬೆಚ್ಚನೆಯ ಹಬೆ ತುಂಬಿಕೊಳ್ಳುತ್ತಿತ್ತು. ಅದೆಷ್ಟು ಹೊತ್ತಿಗೆ ನಾನು ಮನೆ ಸೇರಿದರೂ,ಯಾವುದೇ ಕಾಲವಾದರೂ ಬಿಸಿ ನೀರನ್ನೇ ಮೀಯುತ್ತಿದ್ದವಳು. ಬಾಲ್ಯದಿಂದ ಪದವಿ ಕಲಿಯುವವರೆಗೂ ಇದೇ ಅಭ್ಯಾಸವಾಗಿ ಬಿಟ್ಟಿತ್ತು.
ಜೀವನ ಎಂದ ಮೇಲೆ ಏರಿಳಿತಗಳು ಬೇಕಲ್ಲ ಈ ಮಾತಿನಂತೆ ಸ್ನಾತಕೋತ್ತರ ಕಲಿಕೆಯ ದಿನಗಳು ಹತ್ತಿರವಾದವು ಮನೆಯಿಂದ ನನ್ನ ಕಾಲೇಜು ಸುಮಾರು ದೂರವಾಗಿದ್ದರಿಂದ ಪಿ.ಜಿ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಾಯಿತು. ಮನೆಯಿಂದ ಎಲ್ಲ ಅಗತ್ಯತೆಗಳನ್ನು ಹೊತ್ತು ಪಿ.ಜಿ ಸೇರಿದ್ದು ಆಯಿತು. ಮನೆಯನ್ನು,ಮನೆಯವರನ್ನು ಬಿಟ್ಟು ದೂರಕ್ಕೆ ಬಂದಿರುವುದು ಯಾವುದೇ ಬೇಸರ ಉಂಟು ಮಾಡಲಿಲ್ಲ ಏಕೆಂದರೆ ನನ್ನ ಅಮ್ಮ ಶಿಕ್ಷಕಿಯಾಗಿದ್ದರಿಂದ ನಾನು ತಿಂಗಳ ಮಗವಾಗಿದ್ದಾಗಲೇ ಅಜ್ಜಿ ಮನೆಯಲ್ಲಿ ಬಿಟ್ಟು ಶಾಲೆಗೆ ಹೋಗುತ್ತಿದ್ದರು. ಆದರೆ ಕಷ್ಟ ಎನಿಸಿದ್ದು ತಣ್ಣೀರಿನ ಸ್ನಾನ ಪ್ರತಿದಿನವೂ ಬಿಸಿ ನೀರು ಮೀಯುತ್ತಿದ್ದವಳಿಗೆ ಇದು ಬಹುದೊಡ್ಡ ಸವಾಲಾಯಿತು.
ಹೌದು ಸಹಜ ,ಇದು ನಗರ ಪ್ರದೇಶ ಇಲ್ಲಿ ಕಟ್ಟಿಗೆಗೆ ಪ್ರತಿದಿನವೂ ಬೆಲೆಕೊಟ್ಟು ತರುವುದೆಂದರೆ ಅದು ಸುಲಭದ ಮಾತಲ್ಲ.ದಿನಗಳು ಬಂದಂತೆ ಸ್ವೀಕರಿಸಬೇಕು ಎಂದು ಅಂದುಕೊಂಡೆ ಆ ದಿನ ಸ್ನಾನಕ್ಕೆ ತೆರಳಿ ಸರ್ವದೇವರನ್ನು ನೆನಪಿಸುತ್ತಾ ಮೊದಲ ತಂಬಿಗೆ ನೀರನ್ನು ಹೊಯ್ದುಕೊಂಡೆ,ಅಬ್ಬಾ… ಕಲ್ಲಾಗಿ ಹೋದೆನೇನೋ ಎನಿಸಿತು,ಮನೆಯಲ್ಲಿ ಕನಿಷ್ಠ ಅರ್ಧ ಗಂಟೆ ಮೀಯುತ್ತಿದ್ದ ನಾನು ಇಲ್ಲಿ ಹತ್ತೇ ನಿಮಿಷದಲ್ಲಿ ಹೊರಬರುತ್ತಿದ್ದೆ. ಮಿಂದಷ್ಟು ಮಿಯಬೇಕು ಅನಿಸುತ್ತಿದ್ದ ನನಗೆ ಯಾವಾಗ ಸ್ನಾನ ಮುಗಿದುಬಿಡುತ್ತದೆ ಅನಿಸಲು ಆರಂಭವಾಯಿತು.
ನೀರಿಗೆ ಬಿದ್ದಾಗಿದೆ ಬದುಕಬೇಕಾದರೆ ಈಜಲೇ ಬೇಕಲ್ಲ!? ಹಾಗೆ ತೀರ್ಥ ಸ್ನಾನ ಎಂದುಕೊಳ್ಳುತ್ತಾ ಸ್ನಾನ ಮುಗಿಸಿದೆ. ದಿನಗಳು ಉರುಳಿದಂತೆ ಸ್ವಲ್ಪ ಸ್ವಲ್ಪವೇ ಅಭ್ಯಾಸವಾಯಿತು. ಒಂದು ದಿನ ಹಾಡುತ್ತಾ, ಇನ್ನೊಂದು ದಿನ ಪ್ರಾರ್ಥಿಸುತ್ತಾ ಕಳೆದುಹೋಗಿ ಈಗೀಗ ಎಲ್ಲವೂ ಅಭ್ಯಾಸವಾಗಿ ಬಿಟ್ಟಿದೆ.
ಬದುಕು,ತನ್ನನ್ನು ಯಾರು ಒಪ್ಪಿ ಪ್ರೀತಿಸಿ ಬದುಕುತ್ತಾರೆಯೋ ಅವರನ್ನು ಒಪ್ಪಿ ಅಪ್ಪುತ್ತದೆ. ಅಲ್ಲದಿದ್ದರೆ ಬದುಕು ಕಷ್ಟ ಅಸಾಧ್ಯ ಎಂದರೆ ದೂರಕ್ಕೆ ದಬ್ಬುತ್ತದೆ. ಅನುಭವಗಳು ಬದುಕನ್ನು ಬದಲಾಯಿಸಬಲ್ಲದು, ಪರಿಸ್ಥಿತಿಗೆ ಅಂಜಿ ಹಿಂಜರಿದರೆ ಗೆಲುವು ಕನಸೇ,ಇಲ್ಲ ಎಲ್ಲವೂ ಸಾಧ್ಯ ಎಂದರೆ ಗೆಲುವು ಕಟ್ಟಿಟ್ಟ ಬುತ್ತಿ.
*ಚೈತನ್ಯ ಲಕ್ಷ್ಮೀ
SDM ಕಾಲೇಜು ಉಜಿರೆ