ನವದೆಹಲಿ: ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ವಿಮೆಗಳನ್ನು ನೀವು ಈ ಹಿಂದೆ ಕೊಂಡಿದ್ದು, ಅವುಗಳ ಪ್ರೀಮಿಯಂಗಳನ್ನು ಕಟ್ಟಲಾಗದೇ ಅವು ಅರ್ಧಕ್ಕೆ ನಿಂತಿದ್ದರೆ ಅಂಥ ಪಾಲಿಸಿಗಳನ್ನು ಪುನರಾರಂಭಿಸುವ ಸುವರ್ಣಾವಕಾಶವನ್ನು ನಿಗಮ ಮಾಡಿಕೊಟ್ಟಿದೆ.
ಫೆ.7ರಿಂದ ಮಾ.25ರವರೆಗೆ ಗ್ರಾಹಕರು ತಮ್ಮ ಪಾಲಿಸಿಗಳನ್ನು ಪುನರುಜ್ಜೀವನ ಮಾಡಿಕೊಳ್ಳಬಹುದು. ಅವಧಿ ಮುಗಿಯದ ಹಾಗೂ ಪ್ರೀಮಿಯಂ ಕಟ್ಟುವ ಅವಧಿಯಲ್ಲೇ ಅರ್ಧಕ್ಕೇ ನಿಂತಿರುವ ವಿಮಾ ಪಾಲಿಸಿಗಳಿಗೆ ಇದು ಅನ್ವಯವಾಗುತ್ತದೆ.
ಸಾಂಪ್ರದಾಯಿಕ ಹಾಗೂ ಆರೋಗ್ಯ ಪಾಲಿಸಿಗಳ ಪ್ರೀಮಿಯಂ ಕಟ್ಟುವುದು ತಡವಾದಾಗ ವಿಧಿಸಲಾಗುವ ದಂಡ (ಲೇಟ್ ಫೀ)ನಲ್ಲೂ ವಿನಾಯಿತಿ ಕೊಡಲಾಗಿದೆ. ಅದರಂತೆ, ಕನ್ವೆನ್ಶನಲ್ ಮತ್ತು ಆರೋಗ್ಯ ವಿಮೆಗಳ ಬಾಕಿ ಪ್ರೀಮಿಯಂ 1 ಲಕ್ಷ ರೂ. ಇದ್ದರೆ ಅದರ ಮೇಲೆ ವಿಧಿಸಲಾಗುವ ಲೇಟ್ ಫೀ ಮೇಲೆ ಶೇ. 20 ವಿನಾಯಿತಿ ನೀಡುವುದಾಗಿ ಸಂಸ್ಥೆ ಹೇಳಿದೆ. ಆದರೆ, ಈ ವಿನಾಯಿತಿ ಮಿತಿ ಗರಿಷ್ಠ 2 ಸಾವಿರ ರೂ. ಎಂಬ ಷರತ್ತನ್ನೂ ವಿಧಿಸಿದೆ.
ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 731.03 ಕೋಟಿ ರೂ. ಅನುದಾನ ಬಿಡುಗಡೆ
ಹಾಗೆಯೇ 1 ಲಕ್ಷ ರೂ.ದಿಂದ 3 ಲಕ್ಷ ರೂ.ವರೆಗಿನ ಬಾಕಿ ಪ್ರೀಮಿಯಂ ಮೇಲಿನ ಲೇಟ್ ಫೀ ಮೇಲೆ ಶೇ. 25ರಷ್ಟು ವಿನಾಯ್ತಿಯಿದ್ದು ಈ ಶ್ರೇಣಿಯ ವಿಮಾದಾರರು ಗರಿಷ್ಠ 2,500 ರೂ. ವಿನಾಯ್ತಿಯನ್ನು, 3 ಲಕ್ಷ ರೂ.ಗಿಂತ ಹೆಚ್ಚು ಹಣ ಬರಬೇಕಿರುವ ಪಾಲಿಸಿಗಳ ಮೇಲಿನ ಲೇಟ್ ಫೀ ಮೇಲೆ ಶೇ. 30ರಷ್ಟು ವಿನಾಯ್ತಿ (ಗರಿಷ್ಠ 3,000 ರೂ.) ಇದೆ. ಇನ್ನು, ಮೈಕ್ರೋ ವಿಮಾ ಯೋಜನೆಗಳ ಮೇಲಿನ ಲೇಟ್ ಫೀ ಮೇಲೆ ಶೇ. 100ರಷ್ಟು ವಿನಾಯ್ತಿ ಇದೆ ಎಂದು ನಿಗಮ ಪ್ರಕಟಿಸಿದೆ.
ಆದರೆ, ಈ ವಿನಾಯ್ತಿ ಸೌಲಭ್ಯ ಹೈ ರಿಸ್ಕ್ ಪ್ಲಾನ್‌ಗಳು ಮತ್ತು ಮಲ್ಟಿಪಲ್ ರಿಸ್ಕ್ ಪಾಲಿಸಿ ಸೇರಿ ಕೆಲವು ಪಾಲಿಸಿಗಳಿಗೆ ವಿನಾಯಿತಿ ಅನ್ವಯವಾಗುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.