ಹೊಸದಿಲ್ಲಿ: ದಿಲ್ಲಿಯಲ್ಲಿ ಖಾಸಗಿ ಕಂಪೆನಿಗಳಲ್ಲಿ ಶೇ. 50ರಷ್ಟು ಸಿಬಂದಿಗೆ ಮಾತ್ರ ಅವಕಾಶ ಕಲ್ಪಿಸುವ ಅಲ್ಲಿನ ಸರಕಾರದ ಪ್ರಸ್ತಾವನೆಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಒಪ್ಪಿಗೆ ನೀಡಿದ್ದಾರೆ. ಆದರೆ, ಸರಕಾರ ಸಲ್ಲಿಸಿದ್ದ, ನೈಟ್ ಕರ್ಫ್ಯೂವನ್ನು ತೆರವು ಹಾಗೂ ಸಮ- ಬೆಸ ಸಂಖ್ಯೆಯ ಆಧಾರದಲ್ಲಿ ತೆರೆಯುವ ನಿರ್ಧಾರವನ್ನೂ ಹಿಂಪಡೆಯುವ ಪ್ರಸ್ತಾವನೆಗಳಿಗೆ ಗವರ್ನರ್ ಒಪ್ಪಿಗೆ ಸೂಚಿಸಿಲ್ಲ. ಸುದ್ದಿಗೋಷ್ಠಿ ನಡೆಸಿದ್ದ ಡಿಸಿಎಂ ಮನೀಶ್ ಸಿಸೋಡಿಯಾ, ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಸಮ-ಬೆಸ ಅಂಗಡಿ ತೆರೆಯುವ ನಿಯಮ ಹಾಗೂ ನೈಟ್ ಕರ್ಫ್ಯೂ ನಿರ್ಬಂಧಗಳನ್ನು ಹಿಂಪಡೆಯುವುದಾಗಿ ತಿಳಿಸಿದ್ದರು.
ಹೊಸ ಕೇಸು: ದೇಶದಲ್ಲಿ ಗುರುವಾರ ದಿಂದ ಶುಕ್ರವಾರದ ಅವಧಿಯಲ್ಲಿ 3,47,254 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಮತ್ತು 703 ಮಂದಿ ಅಸುನೀಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 20,18,825ರಷ್ಟಿದ್ದು, ಇದು ಕಳೆದ 235 ದಿನಗಳಲ್ಲೇ ಅತ್ಯಧಿಕ. ಈ ನಡುವೆ, ಶುಕ್ರವಾರದಂದು, ಮುಂಬಯಿಯಲ್ಲಿ 5,008 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಗುರುವಾರಕ್ಕೆ ಹೋಲಿ ಸಿದರೆ 700 ಕಡಿಮೆ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ
ಸೋಂಕಿತರ ಮಾಹಿತಿ ಸೋರಿಕೆ!: ಸರಕಾರದ ಸರ್ವರ್‌ಗಳಲ್ಲಿ ಅಡಕವಾಗಿದ್ದ ಕೊರೊನಾ ಸೋಂಕಿತ ಭಾರತೀಯರಲ್ಲಿ ಸುಮಾರು 20,000 ಮಂದಿಯ ಮಾಹಿತಿಗಳು ಸೋರಿಕೆಯಾಗಿವೆ. ಇವರೆಲ್ಲರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಲಿಂಗ, ಕೊರೊನಾ ಪತ್ತೆಗಾಗಿ ನಡೆಸಲಾಗಿರುವ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದ ದಿನಾಂಕ ಹಾಗೂ ಪರೀûಾ ವರದಿಗಳನ್ನು ಆನ್‌ಲೈನ್ ಚೋರರು ದೋಚಿದ್ದು, ಅವೆಲ್ಲವನ್ನು ರೈಡ್ ಫಾರಮ್ಸ್ ಎಂಬ ಜಾಲತಾಣದಲ್ಲಿ ಮಾರಾಟಕ್ಕಿಟ್ಟಿದ್ದಾರೆ.