ಬೆಂಗಳೂರು: ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸುವ ಯೋಜನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸುವ ಬಗ್ಗೆ ತಮಿಳುನಾಡು ಸರ್ಕಾರ, ಅಲ್ಲಿನ ವಿವಿಧ ರಾಜ್ಯಕೀಯ ಪಕ್ಷಗಳು ಮತ್ತು ರೈತ ಮುಖಂಡರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಕುರಿತಂತೆ ಎರಡೂ ರಾಜ್ಯಗಳು ಸೌಹಾರ್ದಯುತ ಮಾತುಕತೆ ನಡೆಸಿ ಒಮ್ಮತಕ್ಕೆ ಬಂದಲ್ಲಿ ಯೋಜನೆಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧ ಮತ್ತು ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಕೂಡ ಸಿದ್ಧ ಎಂದು ಕೇಂದ್ರ ಜಲ ಸಂಪನ್ಮೂಲ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅದರಂತೆ ಮಾತುಕತೆ ನಡೆಸುವ ಕುರಿತು ತಮಿಳುನಾಡು ಜತೆ ಪತ್ರ ವ್ಯವಹಾರ ನಡೆಸಲಾಗುವುದು ಎಂದು ತಿಳಿಸಿದರು.
ಕೇವಲ ಸರ್ಕಾರ ಮಾತ್ರವಲ್ಲ, ಅಲ್ಲಿನ ಪ್ರತಿಪಕ್ಷಗಳು ಮತ್ತು ರಾತ ಮುಖಂಡರೊಂದಿಗೂ ಮಾತುಕತೆ ನಡೆಸಿ ಅವರ ಮನವೊಲಿಸಲಾಗುವುದು. ಮುಖ್ಯಮಂತ್ರಿ ಎಂಬ ಗರ್ವ ತೋರದೆ ರಾಜ್ಯದ ಹಿತದೃಷ್ಟಿಯಿಂದ ನಾನೇ ಖುದ್ದಾಗಿ ತಮಿಳುನಾಡಿನ ರೈತರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಈ ಬಾರಿ ಮಳೆ ಹೆಚ್ಚಾಗಿದೆ. ಕಬಿನಿಯಿಂದ ಈಗಾಗಲೇ 71 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಯುತ್ತಿದೆ. ಶುಕ್ರವಾರದಿಂದ ಕೆಆರ್‌ಎಸ್ ಜಲಾಶಯದಿಂದಲೂ 50 ಸಾವಿರ ಕ್ಯೂಸೆಕ್ ನೀರು ಹರಿಯಲಿದೆ. ಇದರೊಂದಿಗೆ ಪ್ರತಿನಿತ್ಯ ಕಾವೇರಿ ನದಿಯಿಂದ ತಮಿಳುನಾಡಿಗೆ 10 ಟಿಎಂಸಿ ನೀರು ಹರಿಯುತ್ತಿದ್ದು, ತಿಂಗಳೊಳಗೆ ಮುಂದಿನ ಏಪ್ರಿಲ್‌ವರೆಗೆ ಹರಿಸಬೇಕಾದ ನೀರು ತಮಿಳುನಾಡಿಗೆ ಸೇರಲಿದೆ ಎಂದು ಹೇಳಿದರು.
ಈ ರೀತಿ ನೀರು ಹರಿಸಿದರೆ ಅದು ಸಮುದ್ರ ಸೇರುತ್ತದೆಯೇ ಹೊರತು ತಮಿಳುನಾಡಿಗೆ ಹೆಚ್ಚು ಅನುಕೂಲ ಆಗುವುದಿಲ್ಲ. ಅದರ ಬದಲು ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಿಸಿದರೆ ಈ ರೀತಿ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಸಂಗ್ರಹಿಸಿ ತಮಿಳುನಾಡಿಗೆ ಬೇಕಾದ ಸಂದರ್ಭದಲ್ಲಿ ಅಗತ್ಯ ನೀರು ಬಿಡಲು ಸಾಧ್ಯವಾಗುತ್ತದೆ. ಈ ಅಂಶವನ್ನು ವಿವರಿಸಿ ತಮಿಳುನಾಡಿನ ರೈತರ ಮನವೊಲಿಸಲಾಗುವುದು ಎಂದು ತಿಳಿಸಿದರು.