ಬೆಂಗಳೂರು: ಇರಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ರಾಜ್ಯದ ಭಟ್ಕಳ ಮತ್ತು ಕುಮುಟಾ ತಾಲೂಕಿನ 18 ಮೀನುಗಾರರರನ್ನು ಆದಷ್ಟು ಬೇಗ ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕೋರಿದ್ದಾರೆ.
ಈ ಬಗ್ಗೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿರುವ ಸಚಿವರು, ದುಬೈನ ಮೀನುಗಾರಿಕೆ ದೋಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಷ್ಟೂ ಜನ ತಮಗೆ ಗೊತ್ತಿಲ್ಲದೆ ಇರಾನ್‌ನ ಜಲಪ್ರದೇಶ ಪ್ರವೇಶಿಸಿದ್ದರಿಂದ ಅಲ್ಲಿನ ಸೇನೆ ಬಂಧಿಸಿದೆ.
ಜುಲೈ 27 ರಿಂದಲೂ ಅವರನ್ನು ಕಿಶ್ ದ್ವೀಪದಲ್ಲಿಡಲಾಗಿದೆ. ಅವರ ಬಂಧನದಿಂದ ಕುಟುಂಬಗಳು ಕಂಗಾಲಾಗಿವೆ. ಹೀಗಾಗಿ, ತಕ್ಷಣ ನೆರವಿಗೆ ಧಾವಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬಂಧಿತರಾಗಿರುವ ಮೀನುಗಾರರೆಲ್ಲಾ ಬಡ ಕುಟುಂಬದವರಾಗಿದ್ದು ಮೀನುಗಾರಿಕೆ ಮಾತ್ರ ಬಲ್ಲವರಾಗಿದ್ದಾರೆ. ಭಾರತೀಯರು ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಾಗಲೆಲ್ಲಾ ನೆರವಿಗೆ ಧಾವಿಸುವ ಕೇಂದ್ರ ಸರ್ಕಾರ ಈಗಲೂ ನೆರವಿಗೆ ಧಾವಿಸಬೇಕು. ಆದಷ್ಟು ಬೇಗ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.ಸಚಿವರು ಪತ್ರದ ಜತೆಗೆ ಬಂಧಿತ ಮೀನುಗಾರರಿಗೆ ಸಂಬಂಧಿಸಿದ ವಿವರಗಳು ಹಾಗೂ ಪಾಸ್‌ಪೋರ್ಟ್ ಸಂಖ್ಯೆಯನ್ನು ಕೂಡ ಸುಷ್ಮಾ ಸ್ವರಾಜ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.