Advertisement

ಆಸ್ತಿ ತೆರಿಗೆ ಪರಿಷ್ಕರಿಸದಂತೆ ಪತ್ರ

09:57 AM Mar 25, 2022 | Team Udayavani |

ಪುತ್ತೂರು: ಕೋವಿಡ್‌ನಿಂದ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಈ ಬಾರಿ ಆಸ್ತಿ ತೆರಿಗೆ ಪರಿಷ್ಕರಿಸದೆ ಹಿಂದಿನ ವರ್ಷದ ತೆರಿಗೆ ದರವನ್ನೇ ಮುಂದುವರಿಸುವಂತೆ ಸರಕಾರಕ್ಕೆ ಪತ್ರ ಬರೆಯಲು ನಗರಸಭೆ ಸಾಮಾನ್ಯ ಸಭೆ ನಿರ್ಧರಿಸಿದೆ.

Advertisement

ಪುತ್ತೂರು ನಗರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷ ಜೀವಂಧರ್‌ ಜೈನ್‌ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆಯಿತು. ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸಬಲೀಕರಣ ಕಾಯ್ದೆಗಳನ್ವಯ ಪ್ರತೀ ಹಣಕಾಸು ವರ್ಷದ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳನ್ನು ಆಧರಿಸಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕಿದ್ದು, ಈ ಬಗ್ಗೆ ಪ್ರಸ್ತಾವಿಸಲಾಯಿತು. ನಗರಸಭೆ ಸದಸ್ಯ ಭಾಮಿ ಅಶೋಕ್‌ ಶೆಣೈ, ವಿಪಕ್ಷ ಸದಸ್ಯ ಶಕ್ತಿ ಸಿನ್ಹಾ ಮಾತನಾಡಿ, ಎರಡು ವರ್ಷ ಗಳ ಕೋವಿಡ್‌ ಸಂಕಷ್ಟದಿಂದ ಜನರು ತೊಂದರೆಯಲ್ಲಿದ್ದಾರೆ. ಹೀಗಾಗಿ ಇನ್ನಷ್ಟು ಹೊರೆ ಆಗುವ ಕಾರಣ ಹಿಂದಿನ ತೆರಿಗೆ ಯನ್ನೇ ಮುಂದುವರಿಸುವಂತೆ ಆಗ್ರಹಿಸಿದರು.

ಸರಕಾರಕ್ಕೆ ಪತ್ರ ಬರೆಯೋಣ ಎಂದು ಜೀವಂಧರ್‌ ಜೈನ್‌ ತಿಳಿಸಿದರು. ಜಿಲ್ಲಾಧಿಕಾರಿಗೆ ಪತ್ರ ನಗರಸಭೆಯಲ್ಲಿ ಬಳಕೆಗೆಂದು 21 ವಿವಿಧ ವಾಹನಗಳಿದ್ದು, ನಿತ್ಯವು ತ್ಯಾಜ್ಯ ನಿರ್ವಹಣೆಯಿಂದ ಆಗಾಗ್ಗೆ ದುರಸ್ತಿ ಮಾಡಬೇಕಾಗುತ್ತದೆ. ನಿಯಮಾವಳಿಯಂತೆ ಸ್ಥಳೀಯ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ತಾಂತ್ರಿಕ ವರದಿ ಪಡೆದು ದರಪಟ್ಟಿ/ ಟೆಂಡರ್‌ ಆಹ್ವಾನಿಸಿ ದುರಸ್ತಿ ಪಡಿಸಬೇಕಾಗಿದೆ. 50 ಸಾವಿರ ರೂ.ಗಿಂತ ಅಧಿಕ ಮೊತ್ತದ ದುರಸ್ತಿಗೆ ಡಿಸಿ ಅನುಮತಿ ಬೇಕಾಗಿದೆ. ಈ ವಿಳಂಬ ಕಾರ್ಯದಿಂದ ಘನತ್ಯಾಜ್ಯ ನಿರ್ವಹಣೆಗೆ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ಸಕಾಲದಲ್ಲಿ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ವಾಹನಗಳ ನಿರ್ವಹಣೆಗೆ ತಾ| ಮಟ್ಟ ಅಥವಾ ನಗರಸಭೆ ಹಂತದಲ್ಲಿ ದುರಸ್ತಿ ಕಾರ್ಯಾಗಾರ ನಡೆಸಲು ಡಿಸಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು.

1 ಕೋ.ರೂ.ಕ್ರಿಯಾ ಯೋಜನೆ ಅಮೃತ ನಿರ್ಮಲ ನಗರ ಯೋಜನೆ ಯಡಿ ಪುತ್ತೂರು ನಗರಸಭೆಗೆ 1 ಕೋ. ರೂ. ಅನುದಾನ ಮಂಜೂರುಗೊಂಡಿದ್ದು ಬನ್ನೂರು ಆರ್‌ಟಿಒ ಕಚೇರಿ ಬಳಿಯಿಂದ ನೆಕ್ಕಿಲ ತನಕ 55 ಲಕ್ಷ ರೂ., ನಗರಸಭೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ವಿಶ್ರಾಂತಿಗಾಗಿ ಕಂಟೈನರ್‌ ಅಳವಡಿಕೆ, ನಗರಸಭೆಗೆ 6,000 ಲೀ. ಸಾಮರ್ಥ್ಯದ ಸಕ್ಕಿಂಗ್‌ ಯಂತ್ರ ಖರೀದಿ ಮಾಡಲು ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ಉಪಾಧ್ಯಕ್ಷೆ ವಿದ್ಯಾ ಆರ್‌. ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್‌. ಮನೋಹರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ವೈಜ್ಞಾನಿಕವಾಗಿ ಹಂಪ್ಸ್‌ ಅಳವಡಿಸಿ

ನಗರದ ವಿವಿಧ ಭಾಗದಲ್ಲಿ ಹಂಪ್ಸ್‌ ಅಳವಡಿಸಲಾಗಿದ್ದು, ಕೆಲವೆಡೆ ಅಪಘಾತ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ ವಾಹನ ಸವಾರರಿಗೆ ಅರಿವು ಆಗುವಂತೆ ಬಣ್ಣ ಬಳಿಕೆಯುವಿಕೆ ಸೇರಿ ವಿವಿಧ ಕ್ರಮ ಕೈಗೊಂಡು ವೈಜ್ಞಾನಿಕ ಮಾದರಿಯಲ್ಲಿ ಹಂಪ್ಸ್‌ ನಿರ್ಮಿಸುವುದು ಸೂಕ್ತ ಎಂದು ಶಕ್ತಿ ಸಿನ್ಹಾ ಸಲಹೆ ನೀಡಿದರು.

ಚರಂಡಿ ದುರಸ್ತಿಗೆ 40 ಲಕ್ಷ ರೂ. ಅನುದಾನ ಸಾಲದು

ನಗರಸಭೆಯ 31 ವಾರ್ಡ್‌ಗಳಲ್ಲಿನ ಚರಂಡಿ, ಮುಖ್ಯ ರಾಜಕಾಲುವೆಯಲ್ಲಿ ಹೂಳೆತ್ತುವ ಕಾರ್ಯವು ಮಳೆಗಾಲದ ಪೂರ್ವಭಾವಿಯಾಗಿ ನಡೆಯಲಿದ್ದು, 40 ಲಕ್ಷ ರೂ. ಅಂದಾಜು ಪಟ್ಟಿಯನ್ನು ಮಂಡಿಸಲಾಯಿತು. ಭಾಮಿ ಅಶೋಕ್‌ ಶೆಣೈ, ಶಕ್ತಿ ಸಿನ್ಹಾ ಪ್ರತಿಕ್ರಿಯಿಸಿ, 40 ಲಕ್ಷ ರೂ. ಕಡಿಮೆ ಆಗಿದೆ. ಮೊತ್ತ ಹೆಚ್ಚಳ ಮಾಡುವಂತೆ ಆಗ್ರಹಿಸಿದರು. 5ರಿಂದ 10 ವಾರ್ಡ್‌ ತನಕ ಕಾಮಗಾರಿಯ ನಿರ್ವಹಣೆಯ ಟೆಂಡರ್‌ ನೀಡುವಂತೆ ಸದಸ್ಯ ರಿಯಾಜ್‌ ಸಲಹೆ ನೀಡಿದರು. ಈ ಬಾರಿ ಏಕ ಟೆಂಡರ್‌ ಇಲ್ಲ. 10 ವಾರ್ಡ್‌ನಂತೆ ನೀಡಲಾಗುವುದು ಎಂದು ಜೀವಂಧರ್‌ ಜೈನ್‌ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next